ಪುದುಚೇರಿ | ಸಚಿವರೋರ್ವರ ವಿರುದ್ಧ ಕಿರುಕುಳ ಆರೋಪ ಹೊರಿಸಿದ ಶಾಸಕಿ ಚಂದಿರಾ ಪ್ರಿಯಾಂಗ
Photo | indiatoday
ಪುದುಚೇರಿ : ಶಾಸಕಿ ಚಂದಿರಾ ಪ್ರಿಯಾಂಗ ತಮ್ಮ ಸಹೋದ್ಯೋಗಿ ಸಚಿವರ ವಿರುದ್ಧ ಕಿರುಕುಳ ಹಾಗೂ ರಾಜಕೀಯ ದೌರ್ಜನ್ಯದ ಆರೋಪ ಹೊರಿಸಿದ್ದು, ಸಚಿವರ ಗುರುತನ್ನು ಮಾತ್ರ ಬಹಿರಂಗಪಡಿಸಿಲ್ಲ.
ಸೆಲ್ಫಿ ವೀಡಿಯೊವೊಂದನ್ನು ಬಿಡುಗಡೆ ಮಾಡಿರುವ ಆಲ್ ಇಂಡಿಯಾ ಎನ್ಆರ್ ಕಾಂಗ್ರೆಸ್ (AINRC) ಪಕ್ಷದ ಶಾಸಕಿ ಚಂದಿರಾ ಪ್ರಿಯಾಂಗ, ರಾಜಕೀಯ ಕಾರಣಗಳಿಗಾಗಿ ಪುದುಚೇರಿಯ ಸಚಿವರ ಪರವಾಗಿ ನನ್ನ ದೂರವಾಣಿ ವಿವರಗಳನ್ನು ಕದ್ದಾಳಿಕೆ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ನಾನು ಈ ಕುರಿತು ದೂರು ನೀಡಲು ಹಿರಿಯ ಅಧಿಕಾರಿಯೋರ್ವರನ್ನು ಸಂಪರ್ಕಿಸಿದಾಗ, ಅವರು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದರು. “ನಿಮಗೇನಾದರೂ ಆದರೆ, ನಿಮ್ಮ ಆಸ್ತಿಯನ್ನು ಬೇರೆಯವರಿಗೆ ವರ್ಗಾಯಿಸಿ ಅಥವಾ ಉಯಿಲು ಬರೆದು ಕೊಡಿ ಎಂದು ಅವರು ಹೇಳಿದರು” ಎಂದು ಆರೋಪಿಸಿದ್ದಾರೆ.
“ಮಹಿಳೆಯೊಬ್ಬರು ಸ್ವತಂತ್ರವಾಗಿ ಬೆಳೆಯುವುದನ್ನು ನೀವು ಬಯಸುವುದಿಲ್ಲ. ಒಂದು ವೇಳೆ ಆಕೆ ಹಾಗೆ ಬೆಳೆದರೆ, ನೀವು ಆಕೆಯನ್ನು ಅವಮಾನಿಸುತ್ತೀರಿ ಹಾಗೂ ರಾಜಕೀಯದ ಬಗ್ಗೆ ಭಯಗೊಂಡು ಆಕೆ ಅದನ್ನು ತೊರೆಯುವಂತೆ ಮಾಡುತ್ತೀರಿ. ನನ್ನ ತಂದೆ ನನಗೆ ಇಂತಹ ರಾಜಕೀಯವನ್ನು ಕಲಿಸಿ ಕೊಟ್ಟಿಲ್ಲ. ನೀವು ಏನು ಮಾಡಿದರೂ ಯಾರೂ ನಿಮ್ಮನ್ನು ಪ್ರಶ್ನಿಸುವುದಿಲ್ಲ ಎಂದು ನೀವು ಭಾವಿಸಿರುವುದರಿಂದ, ನಾನು ಈ ವೀಡಿಯೊ ಮಾಡುತ್ತಿದ್ದೇನೆ” ಎಂದು ಅವರು ತಮ್ಮ ವೀಡಿಯೊದಲ್ಲಿ ಹೇಳಿದ್ದಾರೆ.
“ನೀವು ನಾನು ಮನೆ ತೊರೆದಾಗ ನನ್ನ ಮೇಲೆ ಗೂಢಚಾರಿಕೆ ಮಾಡುತ್ತಿದ್ದೀರಿ ಹಾಗೂ ಸರಕಾರಿ ಮೂಲಗಳನ್ನು ಬಳಸಿಕೊಂಡು ನನ್ನ ದೂರವಾಣಿ ವಿವರಗಳನ್ನು ಸಂಗ್ರಹಿಸುತ್ತಿದ್ದೀರಿ ಎಂಬುದು ನನಗೆ ತಿಳಿದಿದೆ. ನಾನು ಸುರಕ್ಷಿತ ಸ್ಥಳದಲ್ಲಿಲ್ಲ ಎಂಬುದು ನನಗೆ ತಿಳಿದಿದೆ. ಶಾಸಕಿ ಹಾಗೂ ಮಾಜಿ ಸಚಿವೆಯಾದ ನನಗೇ ಈ ರೀತಿ ಕಿರುಕುಳ ನೀಡಿದರೆ, ಸಾಮಾನ್ಯ ವ್ಯಕ್ತಿಯ ಪಾಡೇನು? ನೀವು ಏನೇ ಮಾಡಿದರೂ, ನನಗೇನೂ ಆಗುವುದಿಲ್ಲ” ಎಂದು ಅವರು ಸವಾಲು ಹಾಕಿದ್ದಾರೆ.
ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ, ಸಾರ್ವಜನಿಕರಿಗೆ ಕಿರಿಕಿರಿಯಾಗುವಂತೆ ಸಾರ್ವಜನಿಕ ಸ್ಥಳದಲ್ಲಿ ಕಟೌಟ್ ಹಾಕಿರುವುದರಿಂದ, ನಾನು ಇತ್ತೀಚೆಗೆ ನ್ಯಾಯಾಲಯದಿಂದ ಸಮನ್ಸ್ ಸ್ವೀಕರಿಸಿದೆ. ಇದಕ್ಕೆ ಸಚಿವರೇ ಹೊಣೆಯಾಗಿದ್ದು, ಇದು ನನಗೆ ಕಿರುಕುಳ ನೀಡುವ ಪ್ರಯತ್ನವಾಗಿದೆ ಎಂದು ಅವರು ಆಪಾದಿಸಿದ್ದಾರೆ. ನನ್ನ ಅರಿವಿಗೆ ಬಾರದಂತೆ ನನ್ನ ಪಕ್ಷದ ಬೆಂಬಲಿಗರು ಆ ಕಟೌಟ್ ಹಾಕಿರಬಹುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.