ಆರೆಸ್ಸೆಸ್‌ಗೆ ಬೇಕಾಗಿರುವುದು ಮನುಸ್ಮೃತಿ; ಸಂವಿಧಾನವಲ್ಲ: ರಾಹುಲ್ ಗಾಂಧಿ
ರಾಹುಲ್ ಗಾಂಧಿ | PC : PTI
ಹೊಸದಿಲ್ಲಿ: ಸಂವಿಧಾನದ ಪ್ರಸ್ತಾವನೆಯಿಂದ ‘ಸಮಾಜವಾದಿ’ ಹಾಗೂ ‘ ಜಾತ್ಯಾತೀತ’ ಪದವನ್ನು ಉಳಿಸಿಕೊಳ್ಳಬೇಕೇ ಎಂಬ ಬಗ್ಗೆ ಪರಾಮರ್ಶೆ ನಡೆಯಬೇಕೆಂಬ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರ ಹೇಳಿಕೆಯಿಂದ ಆರೆಸ್ಸೆಸ್‌ನ ಮುಖವಾಡವು ಮತ್ತೊಮ್ಮೆ ಕಳಚಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಆರೆಸ್ಸೆಸ್‌ಗೆ ಬೇಕಾಗಿರುವುದು ಮನುಸ್ಮೃತಿಯೇ ಹೊರತು ಸಂವಿಧಾನವಲ್ಲವೆಂದು ಇದರಿಂದ ತಿಳಿಯುತ್ತದೆ ಎಂದು ಅವರು ಹೇಳಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ‘‘ ಆರೆಸ್ಸೆಸ್‌ನ ಮುಖವಾಡ ಮತ್ತೊಮ್ಮೆ ಕಳಚಿದೆ. ಸಂವಿಧಾನದ ಬಗ್ಗೆ ಅವರು ಜಿಗುಪ್ಸೆ ಹೊಂದಿದ್ದಾರೆಯ ಯಾಕೆಂದರೆ ಅದು ಸಮಾನತೆ, ಜಾತ್ಯತೀತತೆ ಹಾಗೂ ನ್ಯಾಯದ ಬಗ್ಗೆ ಮಾತನಾಡುತ್ತದೆ’’ ಎಂದು ರಾಹುಲ್ ಅವರು ಹಿಂದಿಯಲ್ಲಿ ಮಾಡಿದ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
‘‘ಆರೆಸ್ಸೆಸ್, ಬಿಜೆಪಿಗೆ ಸಂವಿಧಾನವು ಬೇಕಾಗಿಲ್ಲ. ಅವರಿಗೆ ಮನುಸ್ಮತಿ ಬೇಕಾಗಿದೆ. ಕಡೆಗಣಿಸಲ್ಪಟ್ಟವರ ಹಾಗೂ ಬಡವರ ಹೃದಯವನ್ನು ಕಳಚುವ ಉದ್ದೇಶವನ್ನು ಅದು ಹೊಂದಿದೆ. ಸಂವಿಧಾನದಂತಹ ಪ್ರಬಲ ಅಸ್ತ್ರವನ್ನು ಅದು ಹೊಂದಿದೆ.ಇಂತಹ ಕನಸನ್ನು ಕಾಣುವುದನ್ನು ಆರೆಸ್ಸೆಸ್ ನಿಲ್ಲಿಸಬೇಕು. ಅದು ಯಶಸ್ವಿಯಾಗುವದಕ್ಕೆ ನಾವು ಅವಕಾಶ ನೀಡಕೂಡದು. ಪ್ರತಿಯೊಬ್ಬ ದೇಶಭಕ್ತ ಭಾರತೀಯನೂ ಆತನ ಕೊನೆಯ ಉಸಿರಿನವರೆಗೂ ಸಂವಿಧಾನವನ್ನು ರಕ್ಷಿಸಬೇಕಿದೆ’’ ಎಂದು ರಾಹುಲ್ ಗಾಂಧಿ ಎಕ್ಸ್‌ನಲ್ಲಿ ಬರೆದಿದ್ದಾರೆ.
ಹೊಸದಿಲ್ಲಿಯಲ್ಲಿ ಗುರುವಾರ ತುರ್ತುಪರಿಸ್ಥಿತಿ ಸ್ಮರಣಾರ್ಥವಾಗಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ದತ್ತಾತ್ರೇಯ ಹೊಸಬಾಳೆ ಅವರು ಸಂವಿಧಾನದ ಪ್ರಸ್ತಾವನೆಯಲ್ಲಿ ಅಂಬೇಡ್ಕರ್ ಅವರು ಜಾತ್ಯತೀತ ಹಾಗೂ ಸಮಾಜವಾದಿ ಎಂಬ ಪದಗಳನ್ನು ಉಲ್ಲೇಖಿಸಿರಲಿಲ್ಲ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸಂಸತ್ ನಿಷ್ಕ್ರಿಯವಾಗಿದ್ದಾಗ, ನ್ಯಾಯಾಂಗವು ಕುಂಟುತ್ತಿದ್ದಾಗ ಈ ಪದಗಳನ್ನು ಸಂವಿಧಾನದ ಪ್ರಸ್ತಾವನೆಯಲ್ಲಿ ಸೇರಿಸಲಾಗಿತ್ತು. ಆನಂತರ ಈ ಪದಗಳನ್ನು ತೆಗೆಯುವ ಯಾವುದೇ ಪ್ರಯತ್ನಗಳನ್ನು ಮಾಡಲಾಗಲಿಲ್ಲ. ಹೀಗಾಗಿ ಈ ಪದಗಳು ಸಂವಿಧಾನದ ಪ್ರಸ್ತಾವನೆಯಲ್ಲಿ ಉಳಿಸಿಕೊಳ್ಳಬೇಕೇ ಎಂಬ ಬಗ್ಗೆ ಪರಿಶೀಲನೆಯಾಗಬೇಕಿದೆ ಎಂದು ಹೇಳಿದ್ದರು.