ಬಿಜೆಪಿ ಜೊತೆ ಚುನಾವಣಾ ಆಯೋಗದ ಪಾಲುದಾರಿಕೆ: ರಾಹುಲ್ ಗಾಂಧಿ ಆರೋಪ
'ಮತಗಳ್ಳತನದ ಸಾಂಸ್ಥೀಕರಣ’ ವಿರುದ್ಧ ಹೋರಾಡುವುದಾಗಿ ಪ್ರತಿಜ್ಞೆ
ರಾಹುಲ್ ಗಾಂಧಿ | PC : PTI
ಆರಾರಿಯಾ,ಆ.24: ಕೇಂದ್ರದ ಆಡಳಿತಾರೂಢ ಬಿಜೆಪಿ ಜೊತೆ ಚುನಾವಣಾ ಆಯೋಗವು ‘ಪಾಲುದಾರಿಕೆ’ಯನ್ನು ಹೊಂದಿದೆಯೆಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದು, ಮತದಾರಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್)ಹೆಸರಿನಲ್ಲಿ ‘ಮತಗಳ್ಳತನದ ಸಾಂಸ್ಥೀಕರಣ’ವನ್ನು ತಡೆಗಟ್ಟುವುದಾಗಿ ಪ್ರತಿಜ್ಞೆಗೈದಿದ್ದಾರೆ.
ಆರಾರಿಯಾದಲ್ಲಿ ರವಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಿಹಾರದಲ್ಲಿ ತಾನು ಕಳೆದ ಒಂದು ವಾರದಿಂದ ನಡೆಸುತ್ತಿರುವ ಎಸ್‌ಐಆರ್ ವಿರೋಧಿ ಆಂದೋಲನ ‘ವೋಟರ್ ಅಧಿಕಾರ ಯಾತ್ರಾ’ಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ.
‘ವೋಟರ್ ಅಧಿಕಾರ ಯಾತ್ರಾ’ದಲ್ಲಿ ಜನರು ಸ್ವಯಂಪ್ರೇರಿತವಾಗಿ ಪಾಲ್ಗೊಳ್ಳುತ್ತಿದ್ದಾರೆ ಹಾಗೂ ವೋಟ್ ಚೋರ್, ಗದ್ದಿ ಛೋಡ್( ಮತಗಳ್ಳ, ಅಧಿಕಾರದ ಪೀಠವನ್ನು ತ್ಯಜಿಸಿ) ಎಂಬ ಘೋಷಣೆಯು ಆರು ವರ್ಷ ಪ್ರಾಯದ ಮಕ್ಕಳ ತುಟಿಗಳಲ್ಲಿಯೂ ನಲಿದಾಡುತ್ತಿವೆ ಎಂದವರು ಹೇಳಿದ್ದಾರೆ.
ಹದಿನೈದು ದಿನಗಳ ಅವಧಿಯ ಈ ಯಾತ್ರೆಯ ಎರಡನೇ ಹಂತವನ್ನು ರವಿವಾರ ರಾಹುಲ್ ಪೂರ್ಣಗೊಳಿಸಿದ್ದಾರೆ. ಯಾತ್ರೆಯ ಮೂರನೇ ಹಂತವನ್ನು ಅವರು ಮಂಗಳವಾರ ಆರಂಭಿಸಲಿದ್ದಾರೆ.
ಪಕ್ಕದಲ್ಲೇ ಕುಳಿತಿದ್ದ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಲಾಗುವುದೇ ಎಂಬ ಸುದ್ದಿಗಾರರ ಪ್ರಶ್ನೆಗೆ ರಾಹುಲ್ ಉತ್ತರಿಸದೆ ನುಣುಚಿಕೊಂಡರು. ಇಂಡಿಯಾ ಮೈತ್ರಿಕೂಟದ ಪಾಲುದಾರರು ಪರಸ್ಪರ ಗೌರವದೊಂದಿಗೆ ಚುನಾವಣೆಯಲ್ಲಿ ಒಗ್ಗೂಡಿ ಕೆಲಸ ಮಾಡಲಿದ್ದಾರೆ ಎಂದರು. ನಾವು ಎಲ್ಲಾ ಚುನಾವಣೆಗಳಲ್ಲಿ ಒಟ್ಟಾಗಿ ಸ್ಪರ್ಧಿಸಲಿದ್ದೇವೆ. ನಾವು ಜೊತೆಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದೇವೆ ಹಾಗೂ ಉತ್ತಮ ಫಲಿತಾಂಶ ದೊರೆಯಲಿದೆ ಎಂದು ರಾಹುಲ್ ಗಾಂಧಿ ತಿಳಿಸಿದರು.
‘‘ಮಹಾರಾಷ್ಟ್ರ, ಹರ್ಯಾಣ ಹಾಗೂ ಕರ್ನಾಟಕದಲ್ಲಿ ಮತಗಳವು ಮಾಡಲಾಗಿದೆ ಎಂದು ನಾನು ಆರೋಪಿಸಿದಾಗ, ಚುನಾವಣಾ ಆಯೋಗವು ಅಫಿಡವಿಟ್ ಸಲ್ಲಿಸುವಂತೆ ನನಗೆ ಸೂಚಿಸಿತ್ತು. ಕೆಲವು ದಿನಗಳಂತರ ಬಿಜೆಪಿ ನಾಯಕ ಅನುರಾಗ್ ಠಾಕೂರ್ ಇದೇ ರೀತಿಯ ಆರೋಪಗಳನ್ನು ಮಾಡಿದ್ದರು. ಆದರೆ ಅವರ ವಿರುದ್ಧ ಯಾವುದೇ ಕ್ರಮವನ್ನು ಕೈಗೊಳ್ಳಲಿಲ್ಲ. ಅಲ್ಲದೆ ಬಿಹಾರದಲ್ಲಿ ಕರಡು ಮತದಾರ ಪಟ್ಟಿಯಿಂದ 65 ಲಕ್ಷಕ್ಕೂ ಅಧಿಕ ಮತದಾರರ ಹೆಸರನ್ನು ಮತದಾರಪಟ್ಟಿಯಿಂದ ತೆಗೆದುಹಾಕಲಾಗಿದೆ’’ ಎಂದು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಾಹುಲ್ ಜೊತೆಗೆ ತೇಜಸ್ವಿಯಾದವ್ ಹಾಗೂ ಸಿಪಿಐ (ಎಂಎಲ್) ಪ್ರಧಾನ ಕಾರ್ಯದರ್ಶಿ ದೀಪಂಕರ್ ಭಟ್ಟಾಚಾರ್ಯ ಉಪಸ್ಥಿತರಿದ್ದರು.