ಹರ್ಯಾಣದ ಮತದಾರರ ಪಟ್ಟಿಯಲ್ಲಿ 22 ಕಡೆ ಬ್ರೆಝಿಲ್ ರೂಪದರ್ಶಿ ಫೋಟೋ!; ರಾಹುಲ್ ಗಾಂಧಿ ಆರೋಪವೇನು?
"ಮತಗಟ್ಟೆಗಳಿಂದ ಸಿಸಿಟಿವಿ ದೃಶ್ಯಗಳನ್ನು ಉದ್ದೇಶಪೂರ್ವಕವಾಗಿ ನಾಶಪಡಿಸುತ್ತಿದ್ದಾರೆ"
Screengrab| Youtube (Indian National Congress)
ಹೊಸದಿಲ್ಲಿ: “ಹರ್ಯಾಣದಲ್ಲಿ ಮತ ಕಳ್ಳತನ ನಡೆದಿದೆ, ಇದು ದೇಶದ ಪ್ರಜಾಪ್ರಭುತ್ವದ ಮೇಲೆ ನೇರದಾಳಿ,” ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಬಿಜೆಪಿ ಮತ್ತು ಚುನಾವಣಾ ಆಯೋಗದ ವಿರುದ್ಧ ತೀವ್ರ ದಾಳಿ ನಡೆಸಿದರು.
ದಿಲ್ಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2024ರ ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ “ಭಾರೀ ವಂಚನೆ ನಡೆದಿದೆ” ಎಂದು ಆರೋಪಿಸಿದರು. “ಹರಿಯಾಣದಲ್ಲಿ ಒಟ್ಟು 2 ಕೋಟಿ ಮತದಾರರಿದ್ದಾರೆ. ಅವರಲ್ಲಿ 25 ಲಕ್ಷ ಜನ ನಕಲಿ ಮತದಾರರು. ಅಂದರೆ ಪ್ರತಿ ಎಂಟು ಮತದಾರರಲ್ಲಿ ಒಬ್ಬರು ನಕಲಿ,” ಎಂದು ಗಾಂಧಿ ಹೇಳಿದರು.
ನಮ್ಮ ತಂಡವು 5.21 ಲಕ್ಷ ನಕಲಿ ಮತದಾರರ ದಾಖಲೆಗಳನ್ನು ಪತ್ತೆಹಚ್ಚಿದೆ ಎಂದು ಅವರು ಮಾಹಿತಿ ನೀಡಿದರು. ಇದನ್ನು ಅವರು 100 ಪ್ರತಿಶತ ಪುರಾವೆ ಎಂದು ವಿವರಿಸಿದರು.
ಮತದಾರರ ಪಟ್ಟಿಯಲ್ಲಿನ ವ್ಯತ್ಯಾಸಗಳ ಕುರಿತು ಮಾಹಿತಿ ಪ್ರದರ್ಶಿಸಿದ ರಾಹುಲ್ ಗಾಂಧಿ, ಒಂದು ವಿಚಿತ್ರ ಉದಾಹರಣೆಯನ್ನು ತೋರಿಸಿದರು. “ಬ್ರೆಝಿಲ್‌ನ ರೂಪದರ್ಶಿಯೊಬ್ಬಳ ಫೋಟೋ ಹರ್ಯಾಣದ ಮತದಾರರ ಪಟ್ಟಿಯಲ್ಲಿ ‘ಸೀಮಾ’, ‘ಸ್ವೀಟಿ’, ‘ಸರಸ್ವತಿ’ ಎಂಬ ಹೆಸರುಗಳಲ್ಲಿ 22 ಬಾರಿ ಕಾಣಿಸಿಕೊಂಡಿದೆ,” ಎಂದು ಅವರು ಆರೋಪಿಸಿದರು.
“ಅವರು ಹರ್ಯಾಣದ 10 ಬೂತ್‌ಗಳಲ್ಲಿ ಮತ ಚಲಾಯಿಸಿದ್ದಾರೆ. ಇದು ಕೇಂದ್ರೀಕೃತ ಕಾರ್ಯಾಚರಣೆ. ಬ್ರೆಝಿಲ್‌ನ ರೂಪದರ್ಶಿಯೊಬ್ಬಳು ಹರ್ಯಾಣದ ಮತದಾರರ ಪಟ್ಟಿಯಲ್ಲಿ ಏನು ಮಾಡುತ್ತಿದ್ದಾರೆ?” ಎಂದು ಪ್ರಶ್ನೆ ಎತ್ತಿದರು.
ಇದೇ ವೇಳೆ, ಒಂದೇ ಫೋಟೋ ಹೊಂದಿರುವ ಮಹಿಳೆ 223 ಬಾರಿ ಮತದಾರರ ಪಟ್ಟಿಯಲ್ಲಿ ಕಾಣಿಸಿಕೊಂಡಿರುವುದನ್ನೂ ಅವರು ತೋರಿಸಿದರು. “ಇಂತಹ ಸಾವಿರಾರು ಪ್ರಕರಣಗಳಿವೆ. ಇದು ಕೇವಲ ಉದಾಹರಣೆ,” ಎಂದು ರಾಹುಲ್ ಗಾಂಧಿ ಹೇಳಿದರು.
ಮತಗಟ್ಟೆಗಳಿಂದ ಸಿಸಿಟಿವಿ ದೃಶ್ಯಗಳನ್ನು ಉದ್ದೇಶಪೂರ್ವಕವಾಗಿ ನಾಶಪಡಿಸುತ್ತಿದ್ದಾರೆ ಎಂಬ ಗಂಭೀರ ಆರೋಪವನ್ನೂ ರಾಹುಲ್ ಗಾಂಧಿ ಮಾಡಿದರು.
“ಹೆಸರು ಮತ್ತು ಫೋಟೋಗಳನ್ನು ಮಸುಕಾಗಿಸುವುದು ನಕಲು ಮಾಡುವ ಸಾಮಾನ್ಯ ವಿಧಾನ. ಚುನಾವಣಾ ಆಯೋಗ ಬಯಸಿದರೆ ಒಂದು ಸೆಕೆಂಡಿನಲ್ಲಿ ನಕಲುಗಳನ್ನು ತೆಗೆದುಹಾಕಬಹುದು. ಆದರೆ ಅವರು ಬಿಜೆಪಿಗೆ ಸಹಾಯ ಮಾಡಲು ಅದನ್ನು ಮಾಡುತ್ತಿಲ್ಲ,” ಎಂದು ಅವರು ಗಂಭೀರ ಆರೋಪ ಮಾಡಿದರು.
ಆದರೆ ಚುನಾವಣಾ ಆಯೋಗದ ಮೂಲಗಳು ರಾಹುಲ್ ಗಾಂಧಿಯ ಆರೋಪಗಳನ್ನು ತಳ್ಳಿಹಾಕಿವೆ. “ರಾಜ್ಯದ ಮತದಾರರ ಪಟ್ಟಿಯ ವಿರುದ್ಧ ಯಾವುದೇ ಮೇಲ್ಮನವಿಗಳು ದಾಖಲಾಗಿಲ್ಲ. ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್‌ನಲ್ಲಿ 90 ವಿಧಾನಸಭಾ ಸ್ಥಾನಗಳ ಪೈಕಿ ಕೇವಲ 22 ಚುನಾವಣಾ ಅರ್ಜಿಗಳು ಬಾಕಿ ಉಳಿದಿವೆ,” ಎಂದು ಸ್ಪಷ್ಟಪಡಿಸಿವೆ.