ಬೆಂಗಳೂರಿನಲ್ಲಿ ರಾಜೀವ್ ಗಾಂಧಿ ಹತ್ಯೆಯ ಪ್ರಮುಖ ಸೂತ್ರಧಾರಿಯನ್ನು ಪತ್ತೆ ಹಚ್ಚಲು ಸಣ್ಣ ಕಾಗದದ ತುಂಡು ನೆರವಾಗಿದ್ದೇಗೆ?
Photo | indianexpress
ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿಯನ್ನು ಹತ್ಯೆ ಮಾಡಲಾಯಿತು. 1991ರ ಮೇ 21ರ ಈ ದಿನ ಸ್ವತಂತ್ರ ಭಾರತದ ಇತಿಹಾಸದಲ್ಲಿ ಕರಾಳ ದಿನವಾಗಿ ಉಳಿದಿದೆ. ರಾಜೀವ್ ಗಾಂಧಿ ಹತ್ಯೆ ಕುರಿತ ತನಿಖೆಯ ವೇಳೆ ಹಲವು ಮಹತ್ವದ ಅಂಶಗಳು ಬಹಿರಂಗವಾಗಿತ್ತು. ತಮಿಳುನಾಡಿನಲ್ಲಿ ಘಟನೆ ನಡೆದರೂ ಪ್ರಮುಖ ಸಂಚುಕೋರ ಬೆಂಗಳೂರಿನಲ್ಲಿ ಅವಿತುಕೊಂಡಿದ್ದರಿಂದ ಬೆಂಗಳೂರು ಪೊಲೀಸರಿಗೆ ಇದೊಂದು ಸವಾಲಾಗಿತ್ತು.
ಐಪಿಎಸ್ ಅಧಿಕಾರಿ ಡಿ ಆರ್ ಕಾರ್ತಿಕೇಯನ್ ನೇತೃತ್ವದಲ್ಲಿ ತನಿಖೆ :
ಕರ್ನಾಟಕ ಕೇಡರ್‌ನ ಐಪಿಎಸ್ ಅಧಿಕಾರಿ ಡಿ ಆರ್ ಕಾರ್ತಿಕೇಯನ್ ಅವರನ್ನು ರಾಜೀವ್ ಗಾಂಧಿ ಹತ್ಯೆ ಪ್ರಕರಣದ ವಿಶೇಷ ತನಿಖಾ ತಂಡದ ಮುಖ್ಯಸ್ಥರನ್ನಾಗಿ ನೇಮಿಸಲಾಗಿತ್ತು. ಅವರು ಕೇಂದ್ರೀಯ ತನಿಖಾ ಸಂಸ್ಥೆಯೊಂದರ ಐಜಿಪಿ ಆಗಿ ಸೇವೆ ಸಲ್ಲಿಸುತ್ತಿದ್ದರು.
ಶ್ರೀಪೆರಂಬದೂರಿನಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 14ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಮತ್ತು 50ಕ್ಕೂ ಅಧಿಕ ಜನರು ಗಾಯಗೊಂಡಿದ್ದರು. ರಾಜೀವ್ ಗಾಂಧಿ ಹತ್ಯೆ ತನಿಖೆಯನ್ನು ತಮಿಳುನಾಡಿನಲ್ಲಿ ಪ್ರಾರಂಭಿಸಿದರೂ, ಪ್ರಮುಖ ಸಂಚುಕೋರರು ಇತರ ಕೆಲವರೊಂದಿಗೆ ಅಡಗಿರುವ ಕುರಿತು ಮಾಹಿತಿ ತಿಳಿದು ತನಿಖಾ ತಂಡ ಬೆಂಗಳೂರಿಗೆ ಆಗಮಿಸಿತ್ತು.
ರಾಜೀವ್ ಗಾಂಧಿ ಹತ್ಯೆ ಕುರಿತು ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ʼಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಈಳಂʼ (LTTE) ಪಾತ್ರ ಕಂಡು ಬಂದ ಹಿನ್ನೆಲೆ ಪೊಲೀಸರ ತನಿಖೆ ಶ್ರೀಲಂಕಾಕ್ಕೆ ವಿಸ್ತರಿಸಿತು. ಸಿಬಿಐ ಮತ್ತು ವಿಶೇಷ ಕಮಾಂಡೋ ಪಡೆಗಳು ಸೇರಿದಂತೆ ಕೇಂದ್ರೀಯ ಏಜೆನ್ಸಿಗಳು ಮತ್ತಷ್ಟು ಸಕ್ರಿಯವಾದವು.
ಘಟನೆಯ ಮೂರು ತಿಂಗಳ ನಂತರ ʼಶಿವರಸನ್ʼ ಎಂಬಾತನ ಪೋಟೊಗಳನ್ನು ಪೊಲೀಸರು ಬಿಡುಗಡೆ ಮಾಡಿದರು. ಎಲ್‌ಟಿಟಿಇ ರಾಜಕೀಯ ವಿಭಾಗದ ಮುಖ್ಯಸ್ಥನಾಗಿದ್ದ ಶಿವರಸನ್ ರಾಜೀವ್ ಗಾಂಧಿ ಹತ್ಯೆಯ ಸಂಚು ರೂಪಿಸಿದ್ದ.
ತನಿಖೆಯ ನೇತೃತ್ವ ವಹಿಸಿದ್ದ ಕಾರ್ತಿಕೇಯನ್ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ʼಹತ್ಯೆಯ ಬಗ್ಗೆ ಮಾಹಿತಿಗಾಗಿ ಸ್ಥಾಪಿಸಿದ ಸಹಾಯವಾಣಿಗೆ 50,000ಕ್ಕೂ ಅಧಿಕ ಕರೆಗಳು ಮತ್ತು ಸಾಕಷ್ಟು ಪತ್ರಗಳು ಬಂದಿದ್ದವುʼ ಎಂದು ಹೇಳಿದ್ದಾರೆ.
►ಒಂದು ಸಣ್ಣ ಕಾಗದ ಕೊಟ್ಟ ಸುಳಿವು, ರಹಸ್ಯ ಕಾರ್ಯಾಚರಣೆ
ರಾಜೀವ್ ಗಾಂಧಿ ಹತ್ಯೆ ಬಳಿಕ ಎಲ್‌ಟಿಟಿಇ ಸದಸ್ಯರ ಬಗ್ಗೆ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದರು. ಈ ವೇಳೆ ಬೆಂಗಳೂರಿನಿಂದ 108 ಕಿಮೀ ದೂರದ ಮಂಡ್ಯದಲ್ಲಿ ಅನಿರೀಕ್ಷಿತ ಬೆಳವಣಿಗೆ ನಡೆಯಿತು.
ಮಂಡ್ಯದ ಮುತ್ತತ್ತಿ ಎಂಬ ಪುಟ್ಟ ಗ್ರಾಮದ ನಿವಾಸಿಗಳು ʼಕೆಲವರ ಅನುಮಾನಾಸ್ಪದ ಚಲನವಲನಗಳʼ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು. ಈ ಮಾಹಿತಿಯೊಂದಿಗೆ ಶಸ್ತ್ರಸಜ್ಜಿತರಾಗಿ ಪೊಲೀಸ್ ಇನ್ಸ್ಪೆಕ್ಟರ್ ಸಿ ಕೆ ನಾಗರಾಜ್ ಮತ್ತು ಸಬ್ ಇನ್ಸ್ಪೆಕ್ಟರ್ ಮುತ್ತುರಾಯ ನೇತೃತ್ವದ ಪೊಲೀಸರು ಕಾರ್ಯಾಚರಣೆಗೆ ಇಳಿದರು. ಪೊಲೀಸ್ ತಂಡಕ್ಕೆ ಆಘಾತವನ್ನುಂಟುಮಾಡುವ ರೀತಿಯಲ್ಲಿ, ಪೊಲೀಸರನ್ನು ಕಂಡು ಅಲ್ಲಿದ್ದ ಅನೇಕರು ಸೈನೈಡ್ ಸೇವಿಸಿದರು ಮತ್ತು ಅವರಲ್ಲಿ ಕೆಲವರು ಮೃತಪಟ್ಟರು. ಪೊಲೀಸರು ಹಿಂದೆಂದೂ ಇಂತಹ ಪರಿಸ್ಥಿತಿ ಎದುರಿಸಿರಲಿಲ್ಲʼ ಎಂದು ವಿಲ್ಸನ್ ಗಾರ್ಡನ್‌ನ ಆಗಿನ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಬಿ ಕೆ ಶಿವರಾಂ ನೆನಪಿಸಿಕೊಳ್ಳುತ್ತಾರೆ.
ಮೃತರಲ್ಲಿ ಓರ್ವರ ಜೇಬಿನಿಂದ ಪೊಲೀಸರು ‘ಆಂಜನಪ್ಪ - ಪುಟ್ಟೇನಹಳ್ಳಿ’ ಎಂದು ಬರೆದ ಸಣ್ಣ ಕಾಗದವನ್ನು ವಶಪಡಿಸಿಕೊಂಡರು. ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನಿಸಲಾಗಿದ್ದ ಕೆಲವರು ಎಲ್‌ಟಿಟಿಇ ಸದಸ್ಯರು ಎಂದು ಒಪ್ಪಿಕೊಂಡರು. ಕರ್ನಾಟಕದಲ್ಲಿ ಎಲ್‌ಟಿಟಿಇ ಅಸ್ತಿತ್ವದಲ್ಲಿದೆ ಎಂಬ ಮೊದಲ ಮಾಹಿತಿ ಇದಾಗಿದ್ದು ಬೆಂಗಳೂರು ನಗರ ಪೊಲೀಸರು ಬೆರಗಾಗಿದ್ದರು.
ಎಲ್‌ಟಿಟಿಇ ಸಹಾನುಭೂತಿಗಳು ಮತ್ತು ಕೆಲವು ಶಂಕಿತರು ಬೆಂಗಳೂರಿನಲ್ಲಿದ್ದಾರೆ ಎಂಬ ಸಂದೇಶ ರವಾನೆಯಾದಾಗ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಆರ್ ರಾಮಲಿಂಗಂ ಅವರು ತಮ್ಮ ನಿವಾಸದಲ್ಲಿದ್ದರು. ಆದ್ದರಿಂದ ಸಿಬಿಐ ಸಮನ್ವಯತೆಯಿಂದ ಉಪ ಪೊಲೀಸ್ ಆಯುಕ್ತ ಕೆಂಪಯ್ಯ ತಕ್ಷಣವೇ ತಂಡಗಳನ್ನು ರಚಿಸಿದರು.
ತನಿಖಾ ತಂಡವು ಹೆಚ್ಚಿನ ತನಿಖೆಯನ್ನು ನಡೆಸಿದಾಗ ಶ್ರೀಲಂಕಾದಲ್ಲಿ ಆಂತರಿಕ ಯುದ್ಧದಲ್ಲಿ ಗಾಯಗೊಂಡವರು ಸೇರಿದಂತೆ ಅನೇಕ ಎಲ್‌ಟಿಟಿಇ ಸದಸ್ಯರು ತಮಿಳುನಾಡಿಗೆ ದೋಣಿಗಳ ಮೂಲಕ ಪ್ರವೇಶಿಸುತ್ತಿದ್ದರು. ಅವರು ತಮಿಳುನಾಡು ಮತ್ತು ಬೆಂಗಳೂರಿನಲ್ಲಿ ತಮಿಳಿಗರು ಇರುವ ಕೆಲ ಸ್ಥಳಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬೆಂಗಳೂರಿನ ಹಲಸೂರು, ಇಂದಿರಾನಗರದಲ್ಲಿರುವ ನರ್ಸಿಂಗ್ ಹೋಮ್‌ಗಳು ಮತ್ತು ಆಸ್ಪತ್ರೆಗಳಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ನಾವು ಈ ಆಸ್ಪತ್ರೆಗಳನ್ನು ಪರಿಶೀಲಿಸಿದಾಗ ಅವರಲ್ಲಿ ಕೆಲವರು ಸೈನೈಡ್ ಅನ್ನು ಸೇವಿಸಲು ಪ್ರಯತ್ನಿಸಿದರು. ಆದರೆ ನಾವು ಅವರನ್ನು ಬದುಕಿಸುವಲ್ಲಿ ಯಶಸ್ವಿಯಾದೆವು ಎಂದು ಶಿವರಾಂ ಹೇಳಿದರು.
ಈ ಮಧ್ಯೆ ಬೆಂಗಳೂರಿನ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ನಲ್ಲಿ (ಎಚ್ಎಎಲ್) ಕೆಲಸ ಮಾಡುತ್ತಿದ್ದ ವ್ಯಕ್ತಿಯೋರ್ವ ಎಲ್‌ಟಿಟಿಇ ಸಹಾನುಭೂತಿ ಹೊಂದಿದ್ದ ಮತ್ತು ರಾಜೀವ್ ಗಾಂಧಿ ಹತ್ಯೆಯ ಮರುದಿನ ಸಿಹಿ ಹಂಚಿದ್ದ ಎನ್ನುವುದು ಸಿಬಿಐ ತನಿಖೆಯ ವೇಳೆ ಬಯಲಾಯಿತು. ಶಿವರಾಂ ಮತ್ತು ಆಡುಗೋಡಿ ಪೊಲೀಸ್ ಉಪನಿರೀಕ್ಷಕ ರಮೇಶ್ ಚಂದ್ರ ಅವರು ರಾಜೀವ್ ಗಾಂಧಿ ಹತ್ಯೆಯನ್ನು ಸಮರ್ಥಿಸಿಕೊಂಡ ಎಚ್ಎಎಲ್ ನೌಕರನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದರು. ಈ ವೇಳೆ ಆತ ರಾಜೀವ್ ಗಾಂಧಿಯಿಂದ ತಮಿಳರು ಹೇಗೆ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ವಿವರಿಸಿದನು. ಕೆಲವು ಎಲ್‌ಟಿಟಿಇ ಸದಸ್ಯರು ಎಚ್ಎಎಲ್ 2ನೇ ಹಂತದಲ್ಲಿ ವಾಸವಿರುವ ಬಗ್ಗೆಯೂ ಮಾಹಿತಿ ಹಂಚಿಕೊಂಡನು. ಇದರಿಂದಾಗಿ ಸಿಬಿಐ ಎಸ್ಐಟಿ ಬೆಂಗಳೂರು ನಗರ ಪೊಲೀಸರ ಸಹಾಯ ಕೇಳಿತು. ಶಂಕಿತರ ಬಳಿ ಎಕೆ-47 ಮತ್ತು ಹ್ಯಾಂಡ್ ಗ್ರೆನೇಡ್ಗಳಿದ್ದು ತಕ್ಷಣಕ್ಕೆ ದಾಳಿ ನಡೆಸದಂತೆ ಸಿಬಿಐ ಬೆಂಗಳೂರು ಪೊಲೀಸರಿಗೆ ಘಟನೆಯ ಗಂಭೀರತೆಯನ್ನು ವಿವರಿಸಿತು. ಇದಲ್ಲದೆ ಎಚ್ಎಎಲ್ 2 ನೇ ಹಂತದಲ್ಲಿ ವಾಸಿಸುತ್ತಿದ್ದ ಎಲ್‌ಟಿಟಿಇ ಸದಸ್ಯರಿಗೆ ಎಚ್ಎಎಲ್ ಉದ್ಯೋಗಿಯನ್ನು ಬಂಧಿಸಿರುವ ಮಾಹಿತಿ ಕೂಡಲೇ ಹರಡಿತು.
ಸಿಬಿಐ ಮತ್ತು ಪೊಲೀಸರು ಜಂಟಿಯಾಗಿ ಮನೆಗೆ ನುಗ್ಗುವಷ್ಟರಲ್ಲಿ ಅವರು ಸ್ಥಳ ಖಾಲಿ ಮಾಡುವಲ್ಲಿ ಯಶಸ್ವಿಯಾದರು. ʼಓರ್ವ ಬಾಲಕ ಓಡುತ್ತಿದ್ದನು ... ನಾನು ಮತ್ತು ಇನ್ನೋರ್ವ ಸಹೋದ್ಯೋಗಿ ಅವನನ್ನು ಹಿಡಿದೆವು ಆದರೆ ಅವನು ಸೈನೈಡ್ ತಿನ್ನಲು ಮುಂದಾದನು. ತಕ್ಷಣವೇ ಕೊಳಚೆ ನೀರನ್ನು ಬಳಸಿ ಅವನನ್ನು ವಾಂತಿ ಮಾಡಿಸಿದೆವು. ನಂತರ ಆತನಿಗೆ ಉಪ್ಪು ನೀರು ನೀಡಿದೆವು. ಅದೃಷ್ಟವಶಾತ್ ಆತ ಬದುಕುಳಿದ. ಬಳಿಕ ಆತನನ್ನು ಸಿಬಿಐಗೆ ಹಸ್ತಾಂತರಿಸಲಾಯಿತು. ದಾಳಿಯ ವೇಳೆ ಕೆಲ ಎಲ್‌ಟಿಟಿಇ ಸದಸ್ಯರನ್ನು ವಶಕ್ಕೆ ಪಡೆದೆವು ಎಂದು ಶಿವರಾಂ ಹೇಳಿದರು.
ಈ ಹಿಂದೆ ಸಿಕ್ಕ ಕಾಗದದ ತುಂಡಿನ ಮಾಹಿತಿಯ ಆಧಾರದಲ್ಲಿ ‘ಆಂಜನಪ್ಪ ಪುಟ್ಟೇನಹಳ್ಳಿ’ ಯ ಪತ್ತೆ ಮಾಡುವ ಜವಾಬ್ಧಾರಿಯನ್ನು ಜಯನಗರದ ಸಹಾಯಕ ಕಮಿಷನರ್ ಅಶ್ವಥ್ ರಾಮಯ್ಯ ಅವರು ಜೆ.ಪಿ.ನಗರ ಸಬ್ ಇನ್ಸ್ಪೆಕ್ಟರ್ ನರಸಿಂಹಮೂರ್ತಿ ಅವರಿಗೆ ವಹಿಸಿದರು.
►ದನಗಾಹಿ ವೇಷಧರಿಸಿ ಫೀಲ್ಡ್‌ಗಿಳಿದ ಪೊಲೀಸ್ ಅಧಿಕಾರಿ!
ಅಂಜನಪ್ಪ ಅವರನ್ನು ಗುರುತಿಸುವಲ್ಲಿ ಜೆ.ಪಿ.ನಗರ ಸಬ್ ಇನ್ಸ್ಪೆಕ್ಟರ್ ನರಸಿಂಹ ಮೂರ್ತಿ ಅವರ ಪಾತ್ರ ದೊಡ್ಡದಿದೆ ಎಂದು ಶಿವರಾಂ ನೆನಪಿಸಿಕೊಂಡರು. ಅವರು ಪುಟ್ಟೇನಹಳ್ಳಿಯಲ್ಲಿ ವಾಸಿಸುವ ಜನರ ವಿವರಗಳನ್ನು ಪಡೆದುಕೊಂಡು ಬ್ಯಾಂಕ್ ಉದ್ಯೋಗಿ ಅಂಜನಪ್ಪನನ್ನು ಗುರುತಿಸುವಲ್ಲಿ ಯಶಸ್ವಿಯಾದರು. ಆಂಜನಪ್ಪನನ್ನು ವಿಚಾರಣೆಗೆ ಒಳಪಡಿಸಿದಾಗ, ಕೆಲವರು ಬಾಡಿಗೆಗೆ ಬಂದು ಇಲ್ಲಿ ಕೆಲವು ದಿನ ವಾಸಿಸಿದ್ದಾರೆ. ಆದರೆ ರಾಜೀವ್ ಗಾಂಧಿ ಹತ್ಯೆಯ ಸುದ್ದಿ ಹೊರಬಿದ್ದಾಗ ನನಗೆ ಮಾಹಿತಿ ನೀಡದೆ ಮನೆ ಖಾಲಿ ಮಾಡಿದ್ದಾರೆ ಎಂದು ಹೇಳಿರುವುದಾಗಿ ಶಿವರಾಂ ಆ ದಿನಗಳನ್ನು ನೆನಪಿಸಿಕೊಂಡರು.
ʼಶಿವರಸನ್ʼ ನನ್ನು ಪತ್ತೆ ಹಚ್ಚುವಲ್ಲಿ ಜೆ.ಪಿ.ನಗರ ಸಬ್ ಇನ್ಸ್ಪೆಕ್ಟರ್ ನರಸಿಂಹ ಮೂರ್ತಿ ಸಹಕಾರ ನಿರ್ಣಾಯಕವಾಯಿತು. ನರಸಿಂಹ ಮೂರ್ತಿ ದನಗಾಹಿಯ ವೇಷ ತೊಟ್ಟರು. ಆಂಜನಪ್ಪ ಅವರ ಮನೆಯಲ್ಲಿ ವಾಸವಿದ್ದ ಕೆಲವರು ಏಕಾಏಕಿ ಸ್ಥಳಾಂತರಗೊಂಡಿರುವ ಬಗ್ಗೆ ಮತ್ತೋರ್ವ ದನಗಾಹಿ ಮೂಲಕ ಮಾಹಿತಿ ಪಡೆದರು. ಅವರನ್ನು ಏಕೆ ಸ್ಥಳಾಂತರ ಮಾಡಲಾಗಿದೆ ಎಂದು ಕೇಳಿದಾಗ, ಅಲ್ಲಿ ವಾಸಿಸುವ ವ್ಯಕ್ತಿಯನ್ನು ಕೆಲಸದಿಂದ ವರ್ಗಾಯಿಸಲಾಗಿದೆ ಎಂದು ಹೇಳಿದರು. ಕುತೂಹಲಕಾರಿಯಾಗಿ ಸ್ಥಳೀಯ ವ್ಯಕ್ತಿಯೋರ್ವರು ತಂಡದ ಭಾಗವಾಗಿದ್ದರು ಎಂದು ಪೊಲೀಸರಿಗೆ ಇದರಿಂದ ಮನವರಿಕೆಯಾಯಿತು.
ಆ ಬಳಿಕ ಸಬ್ ಇನ್ಸ್ಪೆಕ್ಟರ್ ನರಸಿಂಹ ಮೂರ್ತಿ ಸಮೀಪದ ಸರಕು ಸಾಗಾಟಗಾರನನ್ನು ಭೇಟಿಯಾದರು. ಆತನ ಮೂಲಕ ಆಂಜನಪ್ಪ ಅವರ ಮನೆಯಿಂದ ಸರಕುಗಳನ್ನು ಸಾಗಿಸಿದ ವ್ಯಕ್ತಿಯನ್ನು ಪತ್ತೆ ಹಚ್ಚಿದರು. ಅವರು ಸರಕನ್ನು ವಿಜಯನಗರದ ಚರ್ಚ್ ಗೆ ಸ್ಥಳಾಂತರಿಸಿರುವುದಾಗಿ ಒಪ್ಪಿಕೊಂಡರು. ತನಿಖೆಯ ವೇಳೆ ಚರ್ಚ್ ನಲ್ಲಿರುವ ಪಾದ್ರಿ ಮತ್ತು ಭಕ್ತರು ಎಲ್‌ಟಿಟಿಇ ಸಹಾನುಭೂತಿ ಹೊಂದಿರುವವರು ಎಂದು ಪೊಲೀಸರಿಗೆ ಮನವರಿಕೆಯಾಯಿತು. ಚರ್ಚ್‌ನಲ್ಲಿದ್ದ ಸಿಬ್ಬಂದಿ ಮೃದುಲಾ, ಶಿವರಸನ್ ಇತರರೊಂದಿಗೆ ಅಲ್ಲಿಗೆ ಬಂದಿದ್ದಾರೆ ಎಂದು ಖಚಿತಪಡಿಸಿದರು. ಇದಲ್ಲದೆ ಚರ್ಚ್‌ನಲ್ಲಿ ವಸ್ತುಗಳನ್ನು ಬಿಟ್ಟು ಹೋದ ಕುಟುಂಬಗಳು ಕೋಣನಕುಂಟೆಯಲ್ಲಿ ವಾಸಿಸುತ್ತಿದ್ದಾರೆ ಎಂದು ನರಸಿಂಹ ಮೂರ್ತಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾದರು.
1991ರ ಆಗಸ್ಟ್ 18ರ ರವಿವಾರ ಕೋಣನಕುಂಟೆಯಲ್ಲಿ ಶಿವರಸನ್ ವಾಸವಿದ್ದ ಮನೆಯನ್ನು ಸ್ಥಳೀಯ ಪೊಲೀಸರು ಸುತ್ತುವರಿದರು. ಸ್ಥಳೀಯ ಹಾಲು ಮಾರಾಟಗಾರ್ತಿ ಮುನಿಯಮ್ಮ ಕೆಲವು ಅನುಮಾನಾಸ್ಪದ ವ್ಯಕ್ತಿಗಳು ಅಲ್ಲಿ ವಾಸಿಸುತ್ತಿದ್ದಾರೆ ಎಂದು ಪೊಲೀಸರಿಗೆ ಮಾಹಿತಿ ನೀಡಿದರು. ಇದು ಪೊಲೀಸರಿಗೆ ಕಾರ್ಯಾಚರಣೆಗೆ ಮತ್ತಷ್ಟು ಸಹಕಾರಿಯಾಯಿತು. ಈ ಕಾರ್ಯಾಚರಣೆಯಲ್ಲಿ ಪೊಲೀಸ್ ಸಬ್ಇನ್ಸ್‌ಪೆಕ್ಟರ್‌ಗಳಾದ ರಮೇಶ್ ಚಂದ್ರ, ಬಾಲಾಜಿ ಸಿಂಗ್, ಎಂಸಿ ಶ್ರೀನಿವಾಸ್, ಈಶ್ವರನ್ ಮತ್ತು ರಾಮಲಿಂಗಪ್ಪ ಭಾಗವಹಿಸಿದ್ದರು.
ʼಸಂಜೆ 5 ಗಂಟೆ ಸುಮಾರಿಗೆ ನಾವು ಖಾಸಗಿ ಕಾರುಗಳಲ್ಲಿ ಬಂದೆವು. ಅವರಲ್ಲಿ ಎಕೆ-47 ಮತ್ತು ಮಾರಕಾಸ್ತ್ರಗಳಿದ್ದ ಕಾರಣ ಮನೆಯ ಹತ್ತಿರಕ್ಕೆ ಹೋಗದಂತೆ ನಮಗೆ ತಿಳಿಸಲಾಯಿತು. ಅವರ ಚಲನವಲನಗಳ ಮೇಲೆ ನಿಗಾ ಇಡಲು ನಾವು ಮುಂದಾದೆವು. ನಾವು ದಾಳಿ ಮಾಡಲು ಆಸಕ್ತಿ ಹೊಂದಿದ್ದರೂ, ಸಿಬಿಐ ಬರುವವರೆಗೆ ಎಚ್ಚರದಿಂದಿರಲು ಉನ್ನತ ಅಧಿಕಾರಿಗಳು ನಮಗೆ ಹೇಳಿದರು. ಆದರೆ ಆ ಯೋಜನೆ ಅಂದುಕೊಂಡಂತೆ ಆಗಲಿಲ್ಲ. 1990ರ ದಶಕದಲ್ಲಿ ಕೋಣನಕುಂಟೆ ಒಂದು ಪ್ರತ್ಯೇಕ ಸ್ಥಳವಾಗಿತ್ತು. ಅಲ್ಲಿ ಇಂದಿನಂತೆ ಮನೆಗಳಿರಲಿಲ್ಲ. ನಾವು ಕಾಯುತ್ತಿರುವಾಗಲೇ ಒಂದು ಕಿಲೋಮೀಟರ್ ದೂರದಲ್ಲಿ ಕೆಎಸ್ಆರ್‌ಪಿ ತುಕಡಿಯೂ ಕಾದಿತ್ತು. ಜೋರಾಗಿ ಮಳೆ ಸುರಿಯುತ್ತಿತ್ತು ಮತ್ತು ನಾವು ಬೆಳಿಗ್ಗೆ 5 ಗಂಟೆಯವರೆಗೆ ಅಲ್ಲಿಯೇ ಇದ್ದೆವು. ಮನೆಯ ಸಮೀಪ ಪೊಲೀಸರು ಕುಳಿತಿರುವುದನ್ನು ಗ್ರಾಮಸ್ಥರು ಗಮನಿಸಲಾರಂಭಿಸಿದರು. ಅವರು ಜಮಾಯಿಸಲು ಪ್ರಾರಂಭಿಸಿದರು ಮತ್ತು ಅಷ್ಟರೊಳಗೆ ಮಾಧ್ಯಮದವರಿಗೂ ಮಾಹಿತಿ ಸಿಕ್ಕಿತು. ಸೋಮವಾರ ಸಂಜೆ 5 ಗಂಟೆಗೆ ಡಿಸಿಪಿ ಕೆಂಪಯ್ಯ ಅವರು ಸ್ಥಳಕ್ಕೆ ಆಗಮಿಸಿದರು. ನಾವು ಸುಮಾರು 24 ಗಂಟೆಗಳ ಕಾಲ ಅವರ ಮೇಲೆ ಕಣ್ಣಿಟ್ಟಿದ್ದೆವುʼ ಎಂದು ಬಿ ಕೆ ಶಿವರಾಂ ಹೇಳಿದ್ದಾರೆ.
ಮಂಗಳವಾರ ಸಂಜೆ 7 ಗಂಟೆ ಸುಮಾರಿಗೆ ಮರ ಹೊತ್ತೊಯ್ಯುತ್ತಿದ್ದ ಲಾರಿಯೊಂದು ಆ ಪ್ರದೇಶದಲ್ಲಿ ಮಳೆ ನೀರಿನಲ್ಲಿ ಸಿಲುಕಿಕೊಂಡಿತ್ತು. ಪೊಲೀಸ್ ಕಾನ್ಸ್ಟೇಬಲ್ ಸಮವಸ್ತ್ರದಲ್ಲಿ ಲಾರಿ ಕಡೆಗೆ ಹೋಗುತ್ತಿರುವುದನ್ನು ನೋಡಿದ ವ್ಯಕ್ತಿಯೋರ್ವ ಪೊಲೀಸರು ಅವರನ್ನು ಸುತ್ತುವರಿದಿದ್ದಾರೆ ಎಂದು ಶಂಕಿಸಿ ಮನೆಯ ಹೊರಗೆ ಬಂದು ಗುಂಡು ಹಾರಿಸಲು ಪ್ರಾರಂಭಿಸಿದ. ಆತ ಸುಮಾರು 200 ಗುಂಡುಗಳನ್ನು ಮನಬಂದಂತೆ ಹಾರಿಸಿದ.
ʼಬುಲೆಟ್ ಶಬ್ದ ಕೇಳಿ ನಾವು ಕಾಂಪೌಂಡ್‌ವೊಂದರ ಹಿಂದೆ ಅವಿತುಕೊಂಡೆವು. ಆಗ ಬಾಲಾಜಿ ಸಿಂಗ್ ತನ್ನ ಹೊಟ್ಟೆಯ ಬಳಿ ಏನೋ ಒದ್ದೆಯಾಗಿದೆ ಎಂದು ಹೇಳಿದರು. ನಾನು ಪರೀಕ್ಷಿಸಿದೆ. ಈ ವೇಳೆ ಗುಂಡು ಅವರ ಹೊಟ್ಟೆಯನ್ನು ಪ್ರವೇಶಿಸಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅವರನ್ನು ಆಂಬ್ಯುಲೆನ್ಸ್ ಸಾಗಿಸುವುದು ಒಂದು ಸವಾಲಾಗಿತ್ತು ಎಂದು ಬಿ ಕೆ ಶಿವರಾಂ ನೆನಪಿಸಿಕೊಂಡರು.
ತಡರಾತ್ರಿ ವಿಶೇಷ ಪಡೆ ಸ್ಥಳಕ್ಕೆ ಆಗಮಿಸಿ ಮನೆಯೊಳಗೆ ಪ್ರವೇಶಿಸಿತು. ಈ ವೇಳೆ ಎಲ್ಟಿಟಿಇ ಸದಸ್ಯರಾದ ಶುಭಾ, ಕೀರ್ತಿ, ನೆರು, ಸುರೇಶ್ ಮಾಸ್ಟರ್, ಅಮ್ಮನ್ ಮತ್ತು ಜಮೀಲಾ ಸೈನೈಡ್ ಸೇವಿಸಿಕೊಂಡು ಮತ್ತು ಶಿವರಸನ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ.
►ಆರೋಪಪಟ್ಟಿ ಸಲ್ಲಿಕೆ ಮತ್ತು ನಂತರದ ಬೆಳವಣಿಗೆ :
ಸಿಬಿಐ, ಈ ಪ್ರಕರಣದಲ್ಲಿ ಆರೋಪಪಟ್ಟಿ ಸಲ್ಲಿಸಿದೆ. 1998ರಲ್ಲಿ ವಿಶೇಷ ನ್ಯಾಯಾಲಯವು ರಂಗನಾಥ್ ಸೇರಿದಂತೆ 26 ವ್ಯಕ್ತಿಗಳಿಗೆ ಹತ್ಯೆಯಲ್ಲಿ ಭಾಗಿಯಾಗಿದ್ದಕ್ಕಾಗಿ ಮರಣದಂಡನೆ ಶಿಕ್ಷೆ ವಿಧಿಸಿತು. ಆದರೆ 1999ರಲ್ಲಿ ಸುಪ್ರೀಂ ಕೋರ್ಟ್ ನಳಿನಿ ಶ್ರೀಹರನ್, ಆಕೆಯ ಪತಿ ವಿ ಶ್ರೀಹರನ್ ಅಲಿಯಾಸ್ ಮುರುಗನ್, ಎ ಜಿ ಪೆರಾರಿವಾಲನ್ ಮತ್ತು ಟಿ ಸುತೇಂದ್ರರಾಜ ಅಲಿಯಾಸ್ ಸಂತನ್‌ಗೆ ಮರಣದಂಡನೆ ಶಿಕ್ಷೆ ವಿಧಿಸಿ ಉಳಿದ ಅಪರಾಧಿಗಳ ಶಿಕ್ಷೆಯನ್ನು ಜೀವಾವಧಿ ಶಿಕ್ಷೆ ಅಥವಾ ಕಡಿಮೆ ಅವಧಿಗೆ ಪರಿವರ್ತಿಸಿತು. ನಳಿನಿ ಶ್ರೀಹರನ್, ರಾಜೀವ್ ಗಾಂಧಿಯವರ ಪತ್ನಿ ಮತ್ತು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರ ಬಳಿ ಕ್ಷಮಾದಾನಕ್ಕಾಗಿ ಮನವಿ ಮಾಡಿದರು. ಆ ಬಳಿಕ ಅವರ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಲಾಯಿತು. ನವೆಂಬರ್ 2022ರಲ್ಲಿ ನಳಿನಿ, ಪತಿ ಶ್ರೀಹರನ್, ಸಂತನ್, ರಾಬರ್ಟ್ ಪಾಯಸ್ ಮತ್ತು ಆರ್ ಪಿ ರವಿಚಂದ್ರನ್ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಯಿತು. ಶ್ರೀಹರನ್, ಎಸ್ ಜಯಕುಮಾರ್ ಮತ್ತು ರಾಬರ್ಟ್ ಪಾಯಸ್ ಏಪ್ರಿಲ್ 2024ರಲ್ಲಿ ಶ್ರೀಲಂಕಾಕ್ಕೆ ಮರಳಿದರು. ಎಲ್‌ಟಿಟಿಇ ಸದಸ್ಯರಿಗೆ ಆಶ್ರಯ ನೀಡಿದ್ದಕ್ಕಾಗಿ ಬಂಧಿತರಾಗಿದ್ದ ರಂಗನಾಥ್ ಅವರು ಆರೋಗ್ಯ ಸಮಸ್ಯೆಗಳಿಂದಾಗಿ 2017ರಲ್ಲಿ ನಿಧನರಾದರು.
ಸೌಜನ್ಯ : indianexpress