×
Ad

ಪಟಾಕಿ ಸಿಡಿಸಬೇಡಿ ಎಂಬ ಸಂದೇಶಕ್ಕೆ ವಿರೋಧ: ಪೋಸ್ಟ್‌ ಅಳಿಸಿ ಹಾಕಿ ಕ್ಷಮೆಯಾಚಿಸಿದ ನಟ ರಾಜ್‌ಪಾಲ್‌ ಯಾದವ್

Update: 2024-11-01 19:36 IST

ನಟ ರಾಜ್‌ಪಾಲ್‌ ಯಾದವ್ | PC : instagram.com

ಮುಂಬೈ: ಬಾಲಿವುಡ್ ನಟ ರಾಜ್‌ಪಾಲ್ ಯಾದವ್ ಅವರು ಇತ್ತೀಚೆಗೆ ದೀಪಾವಳಿಯಂದು ಹಂಚಿಕೊಂಡ ವೀಡಿಯೊ ವಿವಾದಕ್ಕೊಳಗಾಗಿದ್ದು, ಇದೀಗ, ವಿಡಿಯೋವನ್ನು ಅಳಿಸಿ ಹಾಕಿ ನಟ ವಿಷಾದ ವ್ಯಕ್ತಪಡಿಸಿದ್ದಾರೆ.

ಪಟಾಕಿಯಿಂದ ಉಂಟಾಗುವ ಶಬ್ಧ ಮತ್ತು ವಾಯು ಮಾಲಿನ್ಯ ಹಾಗೂ ಪ್ರಾಣಿಗಳಿಗೆ ಉಂಟಾಗುವ ಸಂಕಟದ ಬಗ್ಗೆ ಕಳವಳ ವ್ಯಕ್ತಪಡಿಸಿ, ಪಟಾಕಿ ಸಿಡಿಸಬೇಡಿ ಎಂದು ವಿಡಿಯೋದಲ್ಲಿ ಮನವಿ ಮಾಡಿ ಯಾದವ್ ಪೋಸ್ಟ್‌ ಮಾಡಿದ್ದರು.

ಇದು ಬಲಪಂಥೀಯರ ಕೆಂಗಣ್ಣಿಗೆ ಗುರಿಯಾಗಿದ್ದು, ನಟನ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ದೀಪಾವಳಿಯ ಒಂದು ಪ್ರಮುಖ ಅಂಶವನ್ನು ಆಚರಿಸಬೇಡಿ ಎಂದು ರಾಜ್‌ಪಾಲ್ ಜನರಲ್ಲಿ ಕೇಳುತ್ತಿದ್ದಾರೆ. ಇದಕ್ಕಾಗಿ ಅವರು ಪ್ರಾಣಿಗಳ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಅವರು ಈ ಹಿಂದೆ ಚಿಕನ್ ಮತ್ತು ಇತರ ಮಾಂಸದ ಬಿರಿಯಾನಿಗಳ ಪ್ರಚಾರ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬಲಪಂಥೀಯರು ಆರೋಪಿಸಿದರು.

ತಮ್ಮ ವಿರುದ್ಧ ಧ್ವೇಷ ಪೂರಿತ ಕಾಮೆಂಟ್ ಗಳು ಬರುತ್ತಿದ್ದಂತೆ, ತಮ್ಮ ವಿಡಿಯೋವನ್ನು ರಾಜ್‌ ಪಾಲ್‌ ಅವರು ಅಳಿಸಿ ಹಾಕಿದ್ದಾರೆ.

ತಮ್ಮ ಕ್ಷಮೆಯಾಚನೆಯಲ್ಲಿ, ಯಾದವ್ ಅವರು ಎಲ್ಲರಿಗೂ ದೀಪಾವಳಿಯ ಶುಭಾಶಯಗಳನ್ನು ಕೋರಿದ್ದು, "ಎರಡು ದಿನಗಳ ಹಿಂದೆ ನಾನು ನನ್ನ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದ ವೀಡಿಯೊವನ್ನು ಈಗ ನಾನು ಅಳಿಸಿದ್ದೇನೆ. ಅದು ಯಾರಿಗಾದರೂ ನೋವುಂಟುಮಾಡಿದರೆ ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ. ದೀಪಾವಳಿಯನ್ನು ಸಂತೋಷದಿಂದ ಆಚರಿಸಿ, ಆರೋಗ್ಯವಾಗಿರಿ, ಮತ್ತು ಸಂತೋಷವಾಗಿರಿ." ಎಂದು ಹೇಳಿದ್ದಾರೆ.

ಕ್ಷಮೆಯಾಚಿಸಿದ್ದಕ್ಕೆ ಅಸಮಾಧಾನ:

ರಾಜ್‌ಪಾಲ್‌ ಯಾದವ್ ಕ್ಷಮೆಯಾಚಿಸಿರುವ ಬಗ್ಗೆ ಹಲವಾರು ಜನರು ನಿರಾಶೆ ವ್ಯಕ್ತಪಡಿಸಿದ್ದು, ಪರಿಸರ ಜಾಗೃತಿಯನ್ನು ಮಾಡಿದ್ದಕ್ಕಾಗಿ ಟ್ರೋಲ್‌ ಮಾಡುವುದು ಸರಿಯಲ್ಲ ಎಂದು ಅಸಮಾಧಾನ ಹೊರ ಹಾಕಿದ್ದಾರೆ.

ಪರಿಸರ ಜಾಗೃತಿ ಮೂಡಿಸುವ ಜನರು ಇಂದು ಟೀಕೆಗಳನ್ನು ಎದುರಿಸುತ್ತಿದ್ದಾರೆ. ಆದರೆ ಅವಾಚ್ಯ ಶಬ್ದಗಳನ್ನು ಬಳಸುವವರು ಗೌರವಿಸಲ್ಪಡುತ್ತಿದ್ದಾರೆ. ಜನರು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದ್ದಾರೆಯೇ ಅಥವಾ ತಪ್ಪು ಆದರ್ಶಗಳನ್ನು ಪ್ರಚಾರ ಮಾಡುತ್ತಿದ್ದಾರೆಯೇ? ಯೋಚಿಸುವ ಸಮಯ ಬಂದಿದೆ ಎಂದು ಒಬ್ಬರು ಬರೆದರೆ, ಅನಕ್ಷರಸ್ಥರ ಸಂಖ್ಯೆ ಎಷ್ಟರಮಟ್ಟಿಗೆ ಹೆಚ್ಚಿದೆ ಎಂದರೆ ಬುದ್ಧಿಜೀವಿಗಳು ಕ್ಷಮೆ ಯಾಚಿಸಬೇಕಾಗಿದೆ. ನಾವೆಲ್ಲರೂ ಇಂದು ಎಲ್ಲಿ ಬಂದು ನಿಂತಿದ್ದೇವೆ ಎಂದು ಯೋಚಿಸಬೇಕಾಗಿದೆ. ಇದನ್ನೆಲ್ಲಾ ನೋಡಿ ನನಗೆ ತುಂಬಾ ಬೇಸರವಾಗುತ್ತಿದೆ ಎಂದು ಇನ್ನೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಡಿಯೋಗೆ ಪ್ರತಿಕ್ರಿಯಿಸಿದ ಖ್ಯಾತ ಪತ್ರಕರ್ತ ಡಾ. ಮುಕೇಶ್ ಕುಮಾರ್, "ಇಷ್ಟು ಬೇಗ ಶರಣಾಗಬಾರದಿತ್ತು ಆಗಬಾರದಿತ್ತು" ಎಂದು ರಾಜ್ ಪಾಲ್ ಗೆ ಎಕ್ಸ್ ನಲ್ಲಿ ಪೋಸ್ಟ್ ಒಂದರ ಮೂಲಕ ಹೇಳಿದ್ದಾರೆ.

"ರಾಜಪಾಲ್ ಜಿ ಇಷ್ಟು ಬೇಗ ಶರಣಾಗಬಾರದಿತ್ತು. ನಿಮ್ಮ ಕೆಲಸ, ನಿಮ್ಮ ಉದ್ದೇಶವನ್ನು ನೀವು ನಂಬಬೇಕು ಮತ್ತು ಅದಕ್ಕೆ ಬದ್ಧರಾಗಿರಬೇಕು. ಈ ಸಮಯದಲ್ಲಿ ಅಸಭ್ಯ, ಹತಾಶ ಮತ್ತು ಅಶಿಸ್ತಿನ ಜನರ ಪ್ರವಾಹವಿದೆ. ಅವರು ಎಷ್ಟು ಬುದ್ಧಿವಂತರು ಎಂದರೆ ನಿಮ್ಮ ಪ್ರಮುಖ ಸಂದೇಶವನ್ನು ಅರ್ಥಮಾಡಿಕೊಳ್ಳಲು ಅವರಿಗೆ ಸಾಧ್ಯವಾಗುತ್ತಿರಲಿಲ್ಲ. ಅವರ ಆತ್ಮಸಾಕ್ಷಿಯ ಉಳಿದ ಭಾಗವು ಹಿಂದುತ್ವ ರಾಜಕಾರಣದಿಂದ ಮುಚ್ಚಲ್ಪಟ್ಟಿದೆ. ಆದ್ದರಿಂದ ನೀವು ಅವರಿಂದ ಬೇರೆ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಆದ್ದರಿಂದ ಕ್ಷಮೆಯಾಚಿಸುವ ಮೂಲಕ ನಿಮ್ಮನ್ನು ಮತ್ತು ನಿಮ್ಮ ಪವಿತ್ರ ಉದ್ದೇಶವನ್ನು ಕೀಳಾಗಿಸದಿರಿ. ದೃಢವಾಗಿ ನಿಂತು ಹೋರಾಡಿ" ಎಂದು ಡಾ. ಮುಕೇಶ್ ಕುಮಾರ್ ಹೇಳಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News