×
Ad

ರತನ್ ಟಾಟಾ ಉಯಿಲಿನಲ್ಲಿ ಉಲ್ಲೇಖಿಸಿದ ಮೋಹಿನಿ ಮೋಹನ್ ದತ್ತಾ ಯಾರು?

Update: 2025-02-07 17:45 IST

Photo | timesofindia

ಹೊಸದಿಲ್ಲಿ : ಭಾರತದ ಶ್ರೀಮಂತ ಕೈಗಾರಿಕೋದ್ಯಮಿಗಳ ಪಟ್ಟಿಯಲ್ಲಿದ್ದ ರತನ್ ಟಾಟಾ ಅಗಲಿ ಹಲವು ತಿಂಗಳುಗಳು ಕಳೆದಿದೆ. ರತನ್ ಟಾಟಾ ನಿಧನಕ್ಕೆ ಮೊದಲೇ ತನ್ನ ಸಂಪತ್ತಿನ ಮುಂದಿನ ವಾರೀಸುದಾರರ ಕುರಿತು ಉಯಿಲು ಬರೆದಿದ್ದಾರೆ. ರತನ್ ಟಾಟಾ ಅವರ ಉಯಿಲು ಬಹಿರಂಗದ ಬಳಿಕ ಜೆಮ್ ಶೆಡ್ ಪುರ ಮೂಲದ ಉದ್ಯಮಿ ಮೋಹಿನಿ ಮೋಹನ್ ದತ್ತಾ ಎಲ್ಲರ ಗಮನ ಸೆಳೆದಿದ್ದಾರೆ. ರತನ್ ಟಾಟಾ ಉಯಿಲಿನಲ್ಲಿ ಬರೆದಿರುವ ಮೋಹಿನಿ ಮೋಹನ್ ದತ್ತಾ ಯಾರು? ಎಂಬುದು ಹಲವರಲ್ಲಿ ಕುತೂಹಲ ಮೂಡಿಸಿದೆ.

ಕೈಗಾರಿಕೋದ್ಯಮಿ ರತನ್ ಟಾಟಾ ಅವರು ಮಾಜಿ ಟಾಟಾ ಗ್ರೂಪ್ ಉದ್ಯೋಗಿ ಮೋಹಿನಿ ಮೋಹನ್ ದತ್ತಾ ಅವರ ಹೆಸರನ್ನು ಸಂಪತ್ತಿನ ಮುಂದಿನ ವಾರೀಸುದಾರರ ಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ ಎಂದು ಹೇಳಲಾಗಿದೆ. ರತನ್ ಟಾಟಾ ಅವರ ಇಚ್ಛೆಯ ಪ್ರಕಾರ ಮೋಹಿನಿ ಮೋಹನ್ ದತ್ತಾ ಅವರಿಗೆ ಆಸ್ತಿಯಲ್ಲಿ ಒಂದು ಪಾಲು ಸಿಗಲಿದೆ ಎನ್ನಲಾಗಿದೆ. ಉಳಿದ ಮೂರನೇ ಎರಡರಷ್ಟು ಭಾಗವು ರತನ್ ಟಾಟಾ ಅವರ ಮಲಸಹೋದರಿಯರಾದ ಶಿರೀನ್ ಜೆಜೀಭೋಯ್ ಮತ್ತು ಡೀನಾ ಜೆಜೀಭೋಯ್ ಅವರಿಗೆ ಸಲ್ಲುತ್ತದೆ. ದತ್ತಾ ಅವರು ಸುಮಾರು 650 ಕೋಟಿ ಮೌಲ್ಯದಷ್ಟು ಪಾಲು ಪಡೆಯಬಹುದು ಎಂದು ಅಂದಾಜಿಸಲಾಗಿದೆ. ಇದು ಟಾಟಾ ಪಾಲುದಾರರಲ್ಲಿ ಕಳವಳವನ್ನು ಉಂಟುಮಾಡಿದೆ.

ಮೋಹಿನಿ ಮೋಹನ್ ದತ್ತಾ ಯಾರು?

ಜೆಮ್ ಶೆಡ್ ಪುರ ಮೂಲದ ಉದ್ಯಮಿ ಮೋಹಿನಿ ಮೋಹನ್ ದತ್ತಾ ಸ್ಟಾಲಿಯನ್ ಟ್ರಾವೆಲ್ ಏಜೆನ್ಸಿಯನ್ನು ಸ್ಥಾಪಿಸಿದ್ದರು. 2013ರಲ್ಲಿ ಟಾಟಾ ಗ್ರೂಪ್ ಒಡೆತನದ ತಾಜ್ ಗ್ರೂಪ್ ಆಫ್ ಹೋಟೆಲ್ಸ್ ಭಾಗವಾದ ತಾಜ್ ಸರ್ವಿಸಸ್ ಕಂಪೆನಿ ಜೊತೆ ಸ್ಟಾಲಿಯನ್ ವಿಲೀನಗೊಂಡಿದೆ. ಮೋಹಿನಿ ಮೋಹನ್ ದತ್ತ ಹಾಗೂ ಅವರ ಕುಟುಂಬ ಈ ಸ್ಟಾಲಿಯನ್ ನಲ್ಲಿ ಶೇ. 80ರಷ್ಟು ಮಾಲಕತ್ವ ಹೊಂದಿದೆ. ಟಾಟಾ ಇಂಡಸ್ಟ್ರೀಸ್ ಉಳಿದ ಭಾಗವನ್ನು ಉಳಿಸಿಕೊಂಡಿದೆ.

ಮೋಹಿನಿ ಮೋಹನ್ ದತ್ತ ಅವರು ಥಾಮಸ್ ಕುಕ್ ಸಂಸ್ಥೆಯೊಂದಿಗಿದ್ದ ಟಿಸಿ ಟ್ರಾವಲ್ ಸರ್ವಿಸಸ್ ಎನ್ನುವ ಕಂಪೆನಿಯ ನಿರ್ದೇಶಕರೂ ಆಗಿದ್ದರು. ಹೆಚ್ಚುವರಿಯಾಗಿ ಅವರು ವಿವಿಧ ಟಾಟಾ ಗ್ರೂಪ್ ಉದ್ಯಮಗಳಲ್ಲಿ ಹೂಡಿಕೆಗಳನ್ನು ಹೊಂದಿದ್ದಾರೆ ಎಂದು ಹೇಳಲಾಗಿದೆ.

ವರದಿಯ ಪ್ರಕಾರ ದತ್ತಾ ಮೊದಲು ರತನ್ ಟಾಟಾ ಅವರನ್ನು ಜೆಮ್ ಶೆಡ್ ಪುರದಲ್ಲಿ 1960ರ ದಶಕದಲ್ಲಿ ಮೋಹಿನಿ ಮೋಹನ್ ದತ್ತ ಭೇಟಿಯಾಗಿದ್ದರು. ಈ ವೇಳೆ ರತನ್ ಟಾಟಾಗೆ ಕೇವಲ 24ವರ್ಷ ವಯಸ್ಸಾಗಿತ್ತು. ರತನ್ ಟಾಟಾ ಮತ್ತು ಮೋಹಿನಿ ಮೋಹನ್ ದತ್ತ ಅವರ ನಡುವಿನ ಈ ಆಕಸ್ಮಿಕ ಭೇಟಿಯ ಬಳಿಕ ಅವರಿಬ್ಬರ ನಡುವೆ ಉತ್ತಮ ರೀತಿಯಲ್ಲಿ ಬಾಂಧವ್ಯ ಮುಂದುವರಿದಿತ್ತು.

ದತ್ತಾ ಅವರು ರತನ್ ಟಾಟಾ ಅವರ ಜೊತೆ ನಿಕಟವಾಗಿ ಕೆಲಸ ಮಾಡಿದ್ದರು. ದತ್ತಾ ಅವರನ್ನು ರತನ್ ಟಾಟಾ ಅವರ ದತ್ತು ಪುತ್ರ ಎಂದು ಕೂಡ ಕರೆಯಲಾಗುತ್ತಿತ್ತು. ಆದರೆ ಅಧಿಕೃತ ದಾಖಲೆಗಳು, ರತನ್ ಟಾಟಾ ಅವರು ಯಾರನ್ನೂ ವಿವಾಹವಾಗಿಲ್ಲ ಮತ್ತು ಔಪಚಾರಿಕವಾಗಿ ಯಾರನ್ನು ಕೂಡ ದತ್ತು ಪಡೆದಿಲ್ಲ ಎಂಬುವುದನ್ನು ಸೂಚಿಸುತ್ತದೆ.

ಮೋಹಿನಿ ಮೋಹನ್ ದತ್ತ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅವರಲ್ಲಿ ಓರ್ವರು 2015ರಿಂದ ಒಂಭತ್ತು ವರ್ಷಗಳ ಕಾಲ ಟಾಟಾ ಟ್ರಸ್ಟ್ ನಲ್ಲಿ ಕೆಲಸ ಮಾಡಿದ್ದರು. ಈಕೆ ತಾಜ್ ಹೋಟೆಲ್ಸ್ ನಲ್ಲೂ ಕೆಲಸ ಮಾಡಿದ ಅನುಭವವನ್ನು ಹೊಂದಿದ್ದಾರೆ. ದತ್ತಾ ಮತ್ತು ರತನ್ ಟಾಟಾ ಕುಟುಂಬದ ನಡುವೆ ಉತ್ತಮ ಸಂಬಂಧಗಳಿತ್ತು. ಆದರೆ ಇತ್ತೀಚಿನವರೆಗೂ, ರತನ್ ಟಾಟಾ ಅವರ ಜೀವನದಲ್ಲಿ ದತ್ತಾ ಅವರ ಪಾತ್ರದ ಬಗ್ಗೆ ಹೆಚ್ಚಾಗಿ ಯಾರಿಗೂ ತಿಳಿದಿರಲಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News