×
Ad

ಆಪರೇಷನ್ ಸಿಂಧೂರ್-2 ಗೆ ಸಿದ್ಧ: ಪಾಕ್ ವಿರುದ್ಧ ಗುಡುಗಿದ ಬಿಎಸ್ಎಫ್

Update: 2025-12-02 08:12 IST

PC: x.com/narendramodi

ಶ್ರೀನಗರ: ಭಾರತ ಮತ್ತು ಪಾಕಿಸ್ತಾನ ನಡುವಿನ ವಾಸ್ತವ ನಿಯಂತ್ರಣ ಗಡಿರೇಖೆಯ ತೀರಾ ಸನಿಹದ 69 ಲಾಂಚ್ ಪ್ಯಾಡ್ ಗಳಲ್ಲಿ ಸುಮಾರು 120 ಮಂದಿ ಉಗ್ರರನ್ನು ನಿಯೋಜಿಸಲಾಗಿದ್ದು, ಪಾಕಿಸ್ತಾನ ಉಗ್ರರನ್ನು ನುಸುಳಿಸುವ ದುಸ್ಸಾಹಸಕ್ಕೆ ಕೈಹಾಕಿದಲ್ಲಿ ಆಪರೇಷನ್ ಸಿಂಧೂರ್‌ಗೆ ಮತ್ತೆ ಚಾಲನೆ ನೀಡಬೇಕಾಗುತ್ತದೆ ಎಂದು ಬಿಎಸ್ಎಫ್ ಕಾಶ್ಮೀರ ಗಡಿ ವಿಭಾಗದ ಐಜಿ ಅಶೋಕ್ ಯಾದವ್ ಎಚ್ಚರಿಕೆ ನೀಡಿದ್ದಾರೆ.

ಗಡಿ ಪಡೆಗಳ ವಾರ್ಷಿಕ ಮಾಹಿತಿ ಹಂಚಿಕೆ ವೇಳೆ ಮಾತನಾಡಿದ ಅವರು, ಪೆಹಲ್ಗಾಮ್ ಹತ್ಯಾಕಾಂಡಕ್ಕೆ ಪ್ರತೀಕಾರವಾಗಿ ಕಳೆದ ಮೇ 7 ಮತ್ತು 10ರಂದು ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ನಡೆಸಿದ ಬಳಿಕ ಪಾಕಿಸ್ತಾನ ತನ್ನ ಹಲವು ಉಗ್ರರ ಲಾಂಚ್ ಪ್ಯಾಡ್ ಗಳನ್ನು ತನ್ನ ಭೂಪ್ರದೇಶದ ಒಳಭಾಗಕ್ಕೆ ಸ್ಥಳಾಂತರಿಸಿದೆ ಎಂದು ವಿವರಿಸಿದರು.

" ಆಪರೇಷನ್ ಸಿಂಧೂರ ವೇಳೆ ನಾವು ದೊಡ್ಡ ಹಾನಿಯನ್ನು ಮಾಡಿದ್ದೇವೆ. ಕೆಲ ಲಾಂಚ್ ಪ್ಯಾಡ್ ಗಳು ಇದೀಗ ಮುನ್ನಲೆ ಪ್ರದೇಶದಿಂದ ಸ್ಥಳಾಂತರಗೊಂಡಿದ್ದು, ಭಾರತೀಯ ಸೇನೆ ಮತ್ತು ಬಿಎಸ್ಎಫ್ ಫೈರಿಂಗ್ ರೇಂಜ್ನಿಂದ ಆಚೆ ನೆಲೆಗೊಂಡಿವೆ. ಸ್ಥಳಾಂತರದ ಹೊರತಾಗಿಯೂ ಈ ತಾಣಗಳು ನಮ್ಮ ಕಣ್ಗಾವಲಿನಲ್ಲಿವೆ. ಪಾಕಿಸ್ತಾನ ಯಾವುದೇ ದುಸ್ಸಾಹಸಕ್ಕೆ ಕೈಹಾಕಿದಲ್ಲಿ, ಸೂಕ್ತ ಉತ್ತರ ನೀಡಲು ನಾವು ಸಜ್ಜಾಗಿದ್ದೇವೆ" ಎಂದು ಗುಡುಗಿದರು.

"ಆಪರೇಷನ್ ಸಿಂಧೂರ ಕಾರ್ಯಾಚರಣೆ ವೇಳೆ ಆರ್ಟಿಲರಿ ರೆಜಿಮೆಂಟ್ ಗಳು ಸೇರಿದಂತೆ ನಮ್ಮ ಘಟಕ ಪಾಕಿಸ್ತಾನ ಸೇನೆಯಲ್ಲಿ ಮತ್ತು ಲಾಂಚ್ ಪ್ಯಾಡ್ ಗಳಲ್ಲಿ ವ್ಯಾಪಕ ಹಾನಿ ಮಾಡಿವೆ. ಮುನ್ನಲೆಯ ಅಥವಾ ಗಡಿನಿಯಂತ್ರಣ ರೇಖೆಯ ಎಲ್ಲ ಲಾಂಚ್ ಪ್ಯಾಡ್ ಗಳನ್ನು ಧ್ವಂಸಗೊಳಿಸಿದ್ದೇವೆ" ಎಂದು ಸಮರ್ಥಿಸಿಕೊಂಡರು. 69 ಲಾಂಚ್ ಪ್ಯಾಡ್ ಗಳ ಮೇಲೆ ಈ ಮುನ್ನ ಏಕೆ ದಾಳಿ ನಡೆಸಿಲ್ಲ ಎಂಬ ಪ್ರಶ್ನೆಗೆ, ಇವು ಕಣಿವೆ ಪ್ರದೇಶವಾಗಿರುವುದು ಮತ್ತು ಸೀಮಿತ ಅಂತರದ ಫೈರಿಂಗ್ ಸೊಲ್ಯೂಶನ್ ಕಾರಣ ಎಂದು ಉತ್ತರಿಸಿದರು.

"ಅವರು ನಮ್ಮ ರಾಡಾರ್ ನಲ್ಲಿದ್ದಾರೆ. ಗಡಿ ನಿಯಂತ್ರಣ ರೇಖೆಯಿಂದ ದೂರ ಮತ್ತು ಆಳ ಸಮಸ್ಯೆಯಲ್ಲ; ಆದರೆ ನಿರ್ದಿಷ್ಟ ಕೆಲ ಕೇಂದ್ರಗಳಿಂದ ಎಲ್ಲ ಲಾಂಚ್ ಪ್ಯಾಡ್ ಗಳನ್ನು ಗುರಿಮಾಡುವುದು ಕಷ್ಟಸಾಧ್ಯ" ಎಂದು ವಿಶ್ಲೇಷಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News