×
Ad

ಅಕಾಲಿ ದಳ ದಲ್ಲಿ ಬಂಡಾಯ: ಬಾದಲ್ ಪದತ್ಯಾಗಕ್ಕೆ ಪಟ್ಟು

Update: 2024-06-26 08:11 IST

PC:X/kbssidhu1961

ಜಲಂಧರ್/ಚಂಡೀಗಢ: ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಪಂಜಾಬ್ ನಲ್ಲಿ ಧೂಳೀಪಟವಾದ ಶಿರೋಮಣಿ ಅಕಾಲಿದಳದಲ್ಲಿ ಮಂಗಳವಾರ ಬಂಡಾಯದ ಬಾವುಟ ಹಾರಿದೆ. ಪಕ್ಷದ ಹುದ್ದೆಯನ್ನು ತ್ಯಾಗ ಮಾಡಿ, ಧರ್ಮ ಮತ್ತು ರಾಜಕೀಯದ ನಡುವೆ ಸಮತೋಲನ ಸಾಧಿಸಬಲ್ಲ ಬೇರೆಯವರಿಗೆ ಹಸ್ತಾಂತರಿಸುವಂತೆ ಪಕ್ಷದ ಹಿರಿಯ ಮುಖಂಡರು ಪಕ್ಷದ ಅಧ್ಯಕ್ಷ ಸುಖ್ಬೀರ್ ಸಿಂಗ್ ಬಾದಲ್ ಅವರನ್ನು ಒತ್ತಾಯಿಸಿದ್ದಾರೆ.

ಆದರೆ ಬಾದಲ್ ಅವರಿಗೆ ನಿಷ್ಠವಾಗಿರುವ ಒಂದು ಬಣ ಮಾತ್ರ ಬಾದಲ್ ನಾಯಕತ್ವದಲ್ಲಿ ಸಂಪೂರ್ಣ ವಿಶ್ವಾಸ ವ್ಯಕ್ತಪಡಿಸುತ್ತಿದೆ. ಕೆಲ ಜಿಲ್ಲಾ ಅಧ್ಯಕ್ಷರು ಮತ್ತು ಕ್ಷೇತ್ರದ ಉಸ್ತುವಾರಿಗಳು ನಿರ್ಣಯಗಳನ್ನು ಆಂಗೀಕರಿಸಿ, ಪದತ್ಯಾಗದ ಬೇಡಿಕೆಯನ್ನು ಬಿಜೆಪಿಯ ಪಿತೂರಿ ಎಂದು ವಿಶ್ಲೇಷಿಸುತ್ತಿದ್ದಾರೆ. ಕೇಂದ್ರೀಯ ಏಜೆನ್ಸಿಗಳನ್ನು ದುರ್ಬಳಕೆ ಮಾಡಿಕೊಂಡು ಪಕ್ಷವನ್ನು ವಿಭಜಿಸುವ ಮೂಲಕ ಮತ್ತಷ್ಟು ದುರ್ಬಲಗೊಳಿಸುವ ತಂತ್ರ ಮತ್ತು ಕೆಲ ಸ್ವಾರ್ಥ ಮತ್ತು ಅವಕಾಶವಾದಿಗಳ ಕುಮ್ಮಕ್ಕು ಎಂದು ವಾಗ್ದಾಳಿ ನಡೆಸಿದ್ದಾರೆ. ಒಟ್ಟು 35 ಜಿಲ್ಲಾ ಅಧ್ಯಕ್ಷರ ಪೈಕಿ 33 ಮಂದಿ ಹಾಗೂ 105 ಕ್ಷೇತ್ರ ಉಸ್ತುವಾರಿಗಳ ಪೈಕಿ 96 ಮಂದಿ ಬಾದಲ್ ನಾಯಕತ್ವವನ್ನು ಬೆಂಬಲಿಸಿದ್ದಾರೆ.

"ಶಿರೋಮಣಿ ಅಕಾಲಿದಳ ಪಂಥವಿರೋಧಿಗಳ ಕೈಗೊಂಬೆಯಾಗಲು ಅವಕಾಶ ನೀಡುವುದಿಲ್ಲ. ಪಂಥಕ್ಕೆ ದ್ರೋಹ ಮಾಡಲು ಸಿದ್ಧರಿರುವವರು, ರೈತರು ಮತ್ತು ಅವಕಾಶವಂಚಿತರು ತಮ್ಮ ಹಾದಿಯನ್ನು ಕಂಡುಕೊಳ್ಳಲು ಸ್ವತಂತ್ರರು" ಎಂದು ಬಾದಲ್ ಸ್ಪಷ್ಟಪಡಿಸಿದ್ದಾರೆ.

ಅಕಾಲಿದಳ- ಬಿಜೆಪಿ ಆಡಳಿತಾವಧಿಯಲ್ಲಿ ಸಂಭವಿಸಿದ ಬರ್ಗೇರಿ ಅಗೌರವ ಘಟನೆ ಮತ್ತು ಬೆಹಬಾಲ್ ಕಾಲನ್ ಪೊಲೀಸ್ ಗೋಲಿಬಾರ್ ಘಟನೆ ಬಳಿಕ ಅಕಾಲಿದಳದ ಮತಗಳ ಮೂಲ ಎನಿಸಿದ್ದ ಸಿಖ್ಖರು ಪಕ್ಷದ ವಿರುದ್ಧವಾಗಿದ್ದಾರೆ. ಇದು 2017ರಿಂದೀಚಗೆ ಮತ್ತಷ್ಟು ಪತನವನ್ನು ಕಂಡಿದ್ದು, ಕಳೆದ ಲೋಕಸಭಾ ಚುನಾವಣೆಯಲ್ಲಿ ಶಿರೋಮಣಿ ಅಕಾಲಿದಳ ರಾಜ್ಯದ 13 ಸ್ಥಾನಗಳ ಪೈಕಿ ಒಂದರಲ್ಲಿ ಮಾತ್ರ ಜಯ ಸಾಧಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News