×
Ad

ಧೋನಿ ಹುಟ್ಟುಹಬ್ಬಕ್ಕೆ ದಾಖಲೆ ಎತ್ತರದ ಕಟೌಟ್!

Update: 2023-07-07 18:52 IST

Photo: Twitter \ @DHONIism

ಹೈದರಾಬಾದ್: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್.ಧೋನಿಯವರ 42ನೇ ಹುಟ್ಟುಹಬ್ಬವನ್ನು ದೇಶಾದ್ಯಂತ ತಮ್ಮದೇ ವಿಧಾನದಲ್ಲಿ ಅಭಿಮಾನಿಗಳು ಆಚರಿಸಿಕೊಳ್ಳುತ್ತಿದ್ದಾರೆ. ಹಲವು ಮಂದಿ ಈ ಐಕಾನಿಕ್ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ನ ಅತ್ಯಂತ ಶ್ರೇಷ್ಠ ಘಳಿಗೆಗಳನ್ನು ಸ್ಮರಿಸಿಕೊಂಡಿದ್ದರೆ ಮತ್ತೆ ಕೆಲವರು ಧೋನಿಯ ಬಗೆಗಿನ ಪ್ರೀತಿ ಹಾಗೂ ಹೊಗಳಿಕೆಯಲ್ಲಿ ಮತ್ತೊಂದು ಹೆಜ್ಜೆ ಮುಂದುವರಿದಿದ್ದಾರೆ.

ಹುಟ್ಟುಹಬ್ಬದ ಮುನ್ನಾ ದಿನವಾದ ಗುರುವಾರ ರಾತ್ರಿ ಹೈದರಾಬಾದ್ ಹಾಗೂ ನಂದಿಗಾಮಾದಲ್ಲಿ ಧೋನಿಯವರ ಬೃಹತ್ ಕಟೌಟ್ ಗಳು ತಲೆ ಎತ್ತಿವೆ. ಹೈದರಾಬಾದ್ ನಲ್ಲಿ 52 ಅಡಿ ಎತ್ತರದ ಕಟೌಟ್ ಕಂಗೊಳಿಸುತ್ತಿದ್ದು, ನಂದಿಗಾಮದ ಕಟೌಟ್ ನ ಎತ್ತರ 72 ಅಡಿ ಎನ್ನಲಾಗಿದೆ. ಮೊದಲ ಕಟೌಟ್ ನಲ್ಲಿ ಧೋನಿ ಭಾರತದ ಜೆರ್ಸಿಯಲ್ಲಿದ್ದರೆ, ನಂದಿಗಾಮಾ ಕಟೌಟ್ ನಲ್ಲಿ ಸಿಎಸ್ಕೆಯ ತರಬೇತಿ ಕಿಟ್ನೊಂದಿಗೆ ಇದ್ದಾರೆ. ನಂದಿಗಾಮಾದಲ್ಲಿ ಕಟೌಟ್ ಗೆ ಹಾಲಿನ ಅಭಿಷೇಕ ಮಾಡುತ್ತಿರುವ ವಿಡಿಯೊ ಕೂಡಾ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಭಾರತದ ಅತ್ಯಂತ ಶ್ರೇಷ್ಠ ನಾಯಕರಲ್ಲಿ ಒಬ್ಬರು ಎನಿಸಿಕೊಂಡಿರುವ ಧೋನಿ, ಸೀಮಿತ ಓವರ್ ಗಳ ಕ್ರಿಕೆಟ್ ನಲ್ಲಿ ಭಾರತ ತಂಡದ ಅತ್ಯಂತ ಯಶಸ್ವಿ ನಾಯಕ. ಐಸಿಸಿ ಆಯೋಜಿಸಿದ್ದ ಮೂರು ಬಿಳಿ ಬಾಲ್ ಟೂರ್ನಿಗಳನ್ನು ಗೆದ್ದ ಏಕೈಕ ನಾಯಕ ಇವರು. ಟಿ20 ವಿಶ್ವಕಪ್, ವಿಶ್ವಕಪ್ ಮತ್ತು ಚಾಂಪಿಯನ್ಸ್ ಟ್ರೋಫಿ ಹೀಗೆ ಮೂರು ಕಿರೀಟಗಳು ಧೋನಿ ನಾಯಕತ್ವದಲ್ಲಿ ಭಾರತಕ್ಕೆ ಸಂದಿವೆ. 2007ರಲ್ಲಿ ಭಾರತ ಚೊಚ್ಚಲ ಟಿ20 ವಿಶ್ವಕಪ್ ಟ್ರೋಫಿಯನ್ನು ಇವರ ನಾಯಕತ್ವದಲ್ಲಿ ಗೆದ್ದುಕೊಂಡಿತ್ತು. ಅಂತೆಯೇ 2011ರಲ್ಲಿ ಏಕದಿನ ವಿಶ್ವಕಪ್ ಗೆದ್ದ ಭಾರತ ತಂಡದ ನಾಯಕರಾಗಿದ್ದ ಧೋನಿ, ಕಪಿಲ್ದೇವ್ ಬಳಿಕ ಈ ಸಾಧನೆ ಮಾಡಿದ ಏಕೈಕ ಕ್ರಿಕೆಟರ್ ಎನಿಸಿಕೊಂಡಿದ್ದರು. 2013ರಲ್ಲಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಜಯಿಸಿದ್ದರು. 2002ರಲ್ಲಿ ಶ್ರೀಲಂಕಾ ಜತೆ ಜಂಟಿಯಾಗಿ ಚಾಂಪಿಯನ್ಸ್ ಟ್ರೋಫಿ ಗೆದ್ದಿದ್ದ ಭಾರತಕ್ಕೆ ಇದು ತಾಂತ್ರಿಕವಾಗಿ ಎರಡನೇ ಟ್ರೋಫಿಯಾಗಿದೆ. 2009ರಲ್ಲಿ ಟೆಸ್ಟ್ ರ್‍ಯಾಂಕಿಂಗ್‌ನಲ್ಲಿ ಭಾರತ ಅಗ್ರಸ್ಥಾನಕ್ಕೆ ಏರಿದಾಗಲೂ ಧೋನಿ ನಾಯಕರಾಗಿದ್ದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News