×
Ad

ಚಂದಿರನ ಮೇಲೆ ಹೆಜ್ಜೆ ಹಾಕಿದ ಪ್ರಗ್ಯಾನ್‌ ರೋವರ್‌

Update: 2023-08-24 13:49 IST

Photo: ISRO

ಬೆಂಗಳೂರು: ಭಾರತದ ಚಂದ್ರಯಾನ- 3 ಯೋಜನೆಯ ಭಾಗವಾಗಿರುವ ‘‘ಪ್ರಜ್ಞಾನ’’ ರೋವರನ್ನು ಗುರುವಾರ ಯಶಸ್ವಿಯಾಗಿ ಚಂದ್ರನ ಮೇಲ್ಮೈ ಮೇಲೆ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ. ಬುಧವಾರ ಯಶಸ್ವಿಯಾಗಿ ಚಂದ್ರನ ಮೇಲ್ಮೈಯಲ್ಲಿ ನಿಧಾನ ನೆಲಸ್ಪರ್ಶ (ಸಾಫ್ಟ್ ಲ್ಯಾಂಡಿಂಗ್) ಮಾಡಿದ ‘ವಿಕ್ರಮ’ ಲ್ಯಾಂಡರ್ನೊಳಗಿದ್ದ ಪ್ರಜ್ಞಾನ ಈಗ ಹೊರಬಂದಿದ್ದು ಚಂದ್ರನ ಮೇಲೆ ಓಡಾಟ ಆರಂಭಿಸಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಓಡಾಟ ನಡೆಸಲು ಸಾಧ್ಯವಾಗುವಂತೆ ಅದು ಆರು ಚಕ್ರಗಳನ್ನು ಹೊಂದಿದೆ. ‘‘ಸಿಎಚ್-3 ರೋವರ್, ಲ್ಯಾಂಡರ್ನಿಂದ ಹೊರಗೆ ಬಂತು ಹಾಗೂ ಭಾರತವು ಚಂದ್ರನ ಮೇಲೆ ನಡೆದಾಡಿತು’’ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಟ್ವೀಟ್ ಮಾಡಿದೆ. ಚಂದ್ರಯಾನ- 3 ಭಾರತದ ಮೂರನೇ ಚಂದ್ರ ಕಾರ್ಯಕ್ರಮವಾಗಿದೆ. ಮೊದಲನೆಯದು, ಚಂದ್ರಯಾನ- 1. ಅದನ್ನು 2008ರಲ್ಲಿ ಉಡಾಯಿಸಲಾಗಿತ್ತು. ಅದು ಎರಡು ವರ್ಷಗಳ ಕಾಲ ಕಾರ್ಯಾಚರಣೆ ನಡೆಸಿತು. ಎರಡನೆಯದು, ಚಂದ್ರಯಾನ- 2. ಅದನ್ನು 2019ರಲ್ಲಿ ಉಡಾಯಿಸಲಾಯಿತು, ಆದರೆ, ಅದು ಚಂದ್ರನ ಮೇಲ್ಮೈಯನ್ನು ನಿಧಾನವಾಗಿ ಸ್ಪರ್ಶಿಸಲು ವಿಫಲವಾಯಿತು ಹಾಗೂ ಅದರ ಲ್ಯಾಂಡರ್ ಭೂಮಿಯೊಂದಿಗೆ ಸಂಪರ್ಕವನ್ನು ಕಳೆದುಕೊಂಡಿತು. ಭಾರತದ ಮೂರನೇ ಚಂದ್ರ ಯೋಜನೆ ಚಂದ್ರಯಾನ- 3 ಬುಧವಾರ ತನ್ನ ಲ್ಯಾಂಡರನ್ನು ಚಂದ್ರನ ಮೇಲೆ ನಿಧಾನವಾಗಿ ಇಳಿಸುವಲ್ಲಿ ಯಶಸ್ವಿಯಾಗಿದೆ. ಹಾಗೂ ಈ ಸಾಧನೆಗೈದ ನಾಲ್ಕನೇ ದೇಶವಾಗಿದೆ. ಇದಕ್ಕೂ ಮುನ್ನ, ಅಮೆರಿಕ, ಸೋವಿಯತ್ ಯೂನಿಯನ್ ಮತ್ತು ಚೀನಾ ಈ ಸಾಧನೆಗೈದಿವೆ. ಪ್ರಜ್ಞಾನ್ ರೋವರ್ ಮೈಕ್ರೋವೇವ್ ಓವನ್ನಷ್ಟು ಗಾತ್ರದ್ದಾಗಿದ್ದು, ಚಂದ್ರನ ಮೇಲೆ 500 ಮೀಟರ್ವರೆಗೆ ಚಲಿಸಲು ಸಾಧ್ಯವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಒಂದು ಕ್ಯಾಮರ, ಒಂದು ಸ್ಪೆಕ್ಟ್ರೋಮೀಟರ್ ಮತ್ತು ಒಂದು ಮ್ಯಾಗ್ನೆಟೋಮೀಟರ್ ಸೇರಿದಂತೆ ಹಲವು ಉಪಕರಣಗಳನ್ನು ಅದು ಹೊಂದಿದೆ. ತನ್ನ ಯಾನದ ವೇಳೆ, ಅದು ಚಂದ್ರನ ಭೌಗೋಳಿಕ ಸ್ವರೂಪ, ಅಲ್ಲಿರಬಹುದಾದ ಖನಿಜ ನಿಕ್ಷೇಪ ಮತ್ತು ವಾತಾವರಣದ ಬಗ್ಗೆ ಅಧ್ಯಯನ ನಡೆಸಲಿದೆ. ಅದು ಚಂದ್ರನ ಮೂಲಧಾತುಗಳು, ಅವುಗಳ ಸಂಯೋಜನೆ, ಖನಿಜಾಂಶಗಳು ಮತ್ತು ಅದರ ಇತಿಹಾಸವನ್ನು ತಿಳಿಯಲು ಪ್ರಯೋಗಗಳನ್ನು ನಡೆಸಲಿದೆ. ಪ್ರಜ್ಞಾನ್ ಒಂದು ಚಂದ್ರ ದಿನದ (ಒಂದು ಚಂದ್ರ ದಿನ ಎಂದರೆ 14 ಭೂಮಿ ದಿನಗಳು) ಕಾಲ ಕಾರ್ಯಾಚರಣೆ ನಡೆಸುವ ನಿರೀಕ್ಷೆಯಿದೆ. ಅದು ಸೌರಶಕ್ತಿಯಿಂದ ನಡೆಯಲಿದೆ. ಅದು ಚಂದ್ರಯಾನ-3 ಆರ್ಬಿಟರ್ ಮೂಲಕ ಇಸ್ರೋದೊಂದಿಗೆ ಸಂಪರ್ಕದಲ್ಲಿರುತ್ತದೆ.
Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News