ರೂ. 100 ಕೋಟಿ ಹಗರಣವಾಗಿದ್ದರೆ ಹಣ ಎಲ್ಲಿದೆ?” ನ್ಯಾಯಾಲಯದಲ್ಲಿ ಕೇಜ್ರಿವಾಲ್‌ ಪ್ರಶ್ನೆ

Update: 2024-03-28 09:56 GMT

ಅರವಿಂದ್ ಕೇಜ್ರಿವಾಲ್ (PTI)

ಹೊಸದಿಲ್ಲಿ: ದಿಲ್ಲಿ ಮದ್ಯ ನೀತಿ ಪ್ರಕರಣದಲ್ಲಿ ಈಡಿಯಿಂದ ಬಂಧಿತರಾಗಿರುವ ದಿಲ್ಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಅವರ ಈಡಿ ಕಸ್ಟಡಿ ಅವಧಿ ಇಂದು ಮುಗಿಯುತ್ತಿರುವುದರಿಂದ ಅವರನ್ನು ದಿಲ್ಲಿಯ ರೌಸ್‌ ಅವೆನ್ಯೂ ಕೋರ್ಟಿಗೆ ಹಾಜರು ಪಡಿಸಿದ ಸಂದರ್ಭ ನ್ಯಾಯಾಲಯವನ್ನು ನೇರವಾಗಿ ಉದ್ದೇಶಿಸಿ ಮಾತನಾಡಿದರಲ್ಲದೆ ತನಿಖಾ ಏಜನ್ಸಿ ತಮ್ಮ ಪಕ್ಷವನ್ನು ನುಚ್ಚುನೂರು ಮಾಡಲು ಯತ್ನಿಸುತ್ತಿದೆ ಹಾಗೂ ಯಾವುದೇ ನ್ಯಾಯಾಲಯ ತಮ್ಮನ್ನು ತಪ್ಪಿತಸ್ಥ ಎಂದು ಘೋಷಿಸಿಲ್ಲ ಎಂದರು.

“ನನ್ನನ್ನು ಬಂಧಿಸಲಾಗಿದೆ, ಆದರೆ ಯಾವುದೇ ನ್ಯಾಯಾಲಯ ನನ್ನನ್ನು ದೋಷಿ ಎಂದು ಸಾಬೀತು ಪಡಿಸಿಲ್ಲ. ಸಿಬಿಐ 31,000 ಪುಟಗಳ ಚಾರ್ಚ್‌ ಶೀಟ್‌ ಮತ್ತು ಇಡಿ 25000 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಸಿವೆ. ಅವುಗಳನ್ನು ಜೊತೆಯಾಗಿ ಓದಿದರೂ, ನನ್ನನ್ನೇಕೆ ಬಂಧಿಸಲಾಗಿದೆ ಎಂಬ ಪ್ರಶ್ನೆ ಉಳಿದು ಬಿಡುತ್ತದೆ,” ಎಂದು ಮಾತನಾಡಲು ಸ್ವಲ್ಪವೇ ಸಮಯಾವಕಾಶ ಪಡೆದ ಕೇಜ್ರಿವಾಲ್‌ ಹೇಳಿದರು.

“ನನ್ನ ಹೆಸರು ಕೇವಲ ನಾಲ್ಕು ಬಾರಿ ಉಲ್ಲೇಖಗೊಂಡಿತ್ತು… ಒಮ್ಮೆ ಅದು “ಸಿ ಅರವಿಂದ್”‌ ಎಂಬುದಾಗಿತ್ತು. ಅವರ ಉಪಸ್ಥಿತಿಯಲ್ಲಿ ಸಿಸೋಡಿಯಾಜೀ ನನಗೆ ಕೆಲವು ದಾಖಲೆಗಳನ್ನು ನೀಡಿದ್ದರು. ಆದರೆ ಶಾಸಕರು ಪ್ರತಿ ದಿನ ನನ್ನ ಮನೆಗೆ ಬರುತ್ತಾರೆ, ಫೈಲ್‌ಗಳನ್ನು ನೀಡುತ್ತಾರೆ, ಚರ್ಚಿಸುತ್ತಾರೆ. ಇಂತಹ ಒಂದು ಹೇಳಿಕೆ ಹಾಲಿ ಸಿಎಂ ಒಬ್ಬರ ಬಂಧನಕ್ಕೆ ಸಾಕೇ?” ಎಂದು ಅವರು ಪ್ರಶ್ನಿಸಿದರು.

ಸಿ ಅರವಿಂದ್‌ ಅವರು ಈ ಪ್ರಕರಣದಲ್ಲಿ ಬಂಧಿತರಾಗಿರುವ ದಿಲ್ಲಿಯ ಮಾಜಿ ಡೆಪ್ಯುಟಿ ಸಿಎಂ ಮನೀಶ್‌ ಸಿಸೋಡಿಯಾ ಅವರ ಕಾರ್ಯದರ್ಶಿಯಾಗಿದ್ದರು ಹಾಗೂ ಸಿಸೋಡಿಯಾ ಕೆಲ ದಾಖಲೆಗಳನ್ನು ನೀಡಿದ್ದರು ಎಂದು ಹೇಳಿದ್ದರು.

“ರೂ. 100 ಕೋಟಿ ಹಗರಣವಾಗಿದ್ದರೆ ಹಣ ಎಲ್ಲಿದೆ?” ಎಂದು ಅವರು ಪ್ರಶ್ನಿಸಿದರು.


Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News