×
Ad

ಮೂರನೇ ಹೆಣ್ಣು ಮಗುವಿಗೆ 50 ಸಾವಿರ ರೂ. ಠೇವಣಿ, ಗಂಡು ಮಗುವಿಗೆ ಹಸು: ಟಿಡಿಪಿ ಸಂಸದ ಭರವಸೆ

Update: 2025-03-10 08:30 IST

PC: ANI

ಹೈದರಾಬಾದ್: ತಮ್ಮ ಕ್ಷೇತ್ರದಲ್ಲಿ ಮೂರನೇ ಮಗುವನ್ನು ಹೊಂದಿದ ಕುಟುಂಬಕ್ಕೆ ಮೂರನೆಯದು ಹೆಣ್ಣುಮಗುವಾಗಿದ್ದಲ್ಲಿ 50 ಸಾವಿರ ರೂಪಾಯಿ ಠೇವಣಿ ಹಾಗೂ ಗಂಡುಮಗುವಾಗಿದ್ದಲ್ಲಿ ಒಂದು ಹಸುವನ್ನು ನೀಡುವ ಭರವಸೆಯನ್ನು ತೆಲುಗು ದೇಶಂ ಸಂಸದ ಕೆ.ಅಪ್ಪಲ ನಾಯ್ಡು ನೀಡಿದ್ದಾರೆ.

ರಾಜ್ಯದಲ್ಲಿ ಜನಸಂಖ್ಯಾ ಪ್ರಗತಿಯನ್ನು ಉತ್ತೇಜಿಸುವ ಕ್ರಮವಾಗಿ ವಿಳಿಯ ನಗರಂ ಸಂಸದ ಈ ಭರವಸೆಯನ್ನು ನೀಡಿದ್ದಾರೆ. ಮೂರನೇ ಹೆಣ್ಣುಮಗು ವಿವಾಹಯೋಗ್ಯ ವಯಸ್ಸಿಗೆ ಬಂದಾಗ ಈ ಠೇವಣಿ 10 ಲಕ್ಷ ರೂಪಾಯಿಯಾಗಿ ಬೆಳೆದಿರುತ್ತದೆ ಎಂದು ಸಂಸದರು ಹೇಳಿದ್ದಾಗಿ ಪಿಟಿಐ ವರದಿ ಮಾಡಿದೆ.

ಮೂರನೇ ಮಗು ಗಂಡು ಮಗುವಾಗಿದ್ದಲ್ಲಿ ಒಂದು ದನ ಹಾಗೂ ಕರುವನ್ನು ನೀಡಲಾಗುತ್ತದೆ. ಹೆಣ್ಣು ಮಗುವಾಗಿದ್ದಲ್ಲಿ ಮಗುವಿನ ಹೆಸರಿನಲ್ಲಿ 50 ಸಾವಿರ ರೂಪಾಯಿ ಠೇವಣಿ ಇಡಲಾಗುತ್ತದೆ. ಭಾರತದ ಜನಸಂಖ್ಯೆ ಹೆಚ್ಚಬೇಕು" ಎಂದು ಅಪ್ಪಲ ನಾಯ್ಡು ಹೇಳಿದ್ದಾಗಿ ವರದಿ ವಿವರಿಸಿದೆ.

ಜೀವನದಲ್ಲಿ ಹಲವು ಮಹಿಳೆಯರು ನನಗೆ ಪ್ರೋತ್ಸಾಹ ನೀಡಿದ್ದಾರೆ ಎಂದಿರುವ ಅವರು, ಮಹಿಳೆಯರ ದಿನಾಚರಣೆ ಸಂದರ್ಭದಲ್ಲಿ ಈ ಯೋಜನೆಯನ್ನು ಪ್ರಕಟಿಸಿದ್ದಾರೆ. ಮಹಿಳೆಯರು ಸಮಾಜದಲ್ಲಿ ಹಲವು ತಾರತಮ್ಯಗಳನ್ನು ಎದುರಿಸುತ್ತಿದ್ದು, ಮಹಿಳೆಯರಿಗೆ ಪ್ರೋತ್ಸಾಹ ನೀಡುವುದು ಇಂದಿನ ಅಗತ್ಯ ಎಂದು ಪ್ರತಿಪಾದಿಸಿದ್ದಾರೆ.

ಕ್ಷೇತ್ರ ಪುನರ್ ವಿಂಗಡಣೆ ಮತ್ತು ಜನಸಂಖ್ಯಾ ನಿರ್ವಹಣೆಯ ಸಮಸ್ಯೆಯನ್ನು ಜೋಡಿಸಬಾರದು ಹಾಗೂ ಭಾರತದ ಜನಸಂಖ್ಯೆ ಹೆಚ್ಚಬೇಕು ಎಂದು ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಕರೆ ನೀಡಿದ ಬೆನ್ನಲ್ಲೇ ಸಂಸದರು ಈ ಹೇಳಿಕೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News