×
Ad

ಟೆಕ್ಕಿಯ ಡೆತ್ ನೋಟ್ ಸಂಶಯಾಸ್ಪದ ಎಂದ ಆರೆಸ್ಸೆಸ್: ಆಳವಾದ ತನಿಖೆಗೆ ಆಗ್ರಹ

Update: 2025-10-13 22:24 IST

 ಆನಂದು ಅಜಿ | Photo Credit  : newindianexpress.com

ತಿರುವನಂತಪುರಂ: ಕೇರಳದಲ್ಲಿ ನಡೆದಿರುವ ಟೆಕ್ಕಿಯೊಬ್ಬರ ಆತ್ಮಹತ್ಯೆಗೆ ಕಾರಣವಾದ ಸನ್ನಿವೇಶಗಳು ಹಾಗೂ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೆಯಾಗಿರುವ ಅವರದೆಂದು ಹೇಳಲಾಗಿರುವ ಡೆತ್ ನೋಟ್ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಸೋಮವಾರ ರಾಷ್ಟ್ರೀಯ ಸ್ವಯಂಸೇವಕ ಸಂಘ ಆಗ್ರಹಿಸಿದೆ.

ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರೆಸ್ಸೆಸ್)ದ ಶಿಬಿರಗಳಲ್ಲಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿತ್ತು ಎಂದು ಆರೋಪಿಸಿ ಟೆಕ್ಕಿ ಆನಂದು ಅಜಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರೂ, ಎಫ್ಐಆರ್ ನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹೆಸರನ್ನೇಕೆ ಉಲ್ಲೇಖಿಸಿಲ್ಲ ಎಂದು ಸೋಮವಾರ ಕಾಂಗ್ರೆಸ್ ಪ್ರಶ್ನಿಸಿತ್ತು.

ಈ ಕುರಿತು ಪತ್ರಿಕಾ ಪ್ರಕಟನೆ ಬಿಡುಗಡೆ ಮಾಡಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಕೇರಳ ಪ್ರಾಂತೀಯ ಜಂಟಿ ಪ್ರಧಾನ ಕಾರ್ಯದರ್ಶಿ ಕೆ.ಬಿ.ಶ್ರೀಕುಮಾರ್, “ಇನ್ಸ್ಟಾಗ್ರಾಂ ಹಾಗೂ ಮತ್ತಿತರ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೆಯಾಗಿರುವ ಆನಂದು ಅಜಿಯ ಡೆತ್ ನೋಟ್ ನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿರುದ್ಧ ಕೆಲವು ಸಂಶಯಾಸ್ಪದ ಹಾಗೂ ನಿರಾಧಾರ ಆರೋಪಗಳನ್ನು ಮಾಡಲಾಗಿದೆ” ಎಂದು ಪ್ರತ್ಯಾರೋಪ ಮಾಡಿದ್ದಾರೆ.

ಆನಂದು ಅಜಿಯವರ ಡೆತ್ ನೋಟ್ ನಲ್ಲಿ ನನ್ನ ಸಾವಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಬಿರಗಳಲ್ಲಿ ನಡೆಯುತ್ತಿದ್ದ ಲೈಂಗಿಕ ದೌರ್ಜನ್ಯಗಳು ಕಾರಣ ಎಂದು ಆರೋಪಿಸಿದ್ದರು.

“ಕೊಟ್ಟಾಯಂ ಜಿಲ್ಲೆಯ ಎಲಿಕ್ಕುಲಂನ ನಮ್ಮ ಸ್ವಯಂಸೇವಕ ಆನಂದು ಅಜಿಯವರ ಅಸಹಜ ಸಾವು ತುಂಬಾ ದುಃಖದಾಯಕ ಮತ್ತು ದುರದೃಷ್ಟಕರವಾಗಿದೆ. ಕಳೆದ ಹಲವಾರು ವರ್ಷಗಳಿಂದ ಅವರು ಕುಟುಂಬವು ಸಂಘದೊಂದಿಗೆ ಗುರುತಿಸಿಕೊಂಡಿದೆ. ಆನಂದು ಅವರ ತಂದೆ ಅಜಿ ಅವರು ಸಂಘದ ಕಾರ್ಯಕರ್ತರಾಗಿದ್ದರು” ಎಂದು ಅವರು ಹೇಳಿದ್ದಾರೆ.

“ಈ ದುರದೃಷ್ಟಕರ ಹೊತ್ತಿನಲ್ಲಿ ನಾವು ದೃಢವಾಗಿ ಅವರ ಕುಟುಂಬದೊಂದಿಗೆ ನಿಲ್ಲಲಿದ್ದೇವೆ ಹಾಗೂ ಆನಂದು ಅವರ ಆತ್ಮಕ್ಕೆ ಶಾಂತಿ ನೀಡುವಂತೆ ಸರ್ವಶಕ್ತ ದೇವರನ್ನು ಪ್ರಾರ್ಥಿಸುತ್ತೇವೆ” ಎಂದು ಅವರು ತಿಳಿಸಿದ್ದಾರೆ.

“ಆನಂದು ಅಜಿ ಅವರ ಅಸಹಜ ಸಾವಿಗೆ ಕಾರಣವಾದ ಸನ್ನಿವೇಶಗಳು ಹಾಗೂ ಅವರ ಸಾವಿನ ಬೆನ್ನಿಗೇ ಇನ್ಸ್ಟಾಗ್ರಾಂ ಮತ್ತಿತರ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೆಯಾಗಿರುವ ಡೆತ್ ನೋಟ್ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದು ಕೊಟ್ಟಾಯಂ ರಾಷ್ಟ್ರೀಯ ಸ್ವಯಂಸೇವಕ ಸಂಘ ಆಗ್ರಹಿಸುತ್ತದೆ. ಅವರ ಡೆತ್ ನೋಟ್ ನಲ್ಲಿ ತಮ್ಮ ಸಾವಿಗೆ ಕಾರಣವೆಂದು ಮಾಡಲಾಗಿರುವ ಕೆಲವು ಆರೋಪಗಳು ಸಂಶಯಾಸ್ಪದ ಹಾಗೂ ನಿರಾಧಾರವಾಗಿವೆ” ಎಂದೂ ಅವರು ಹೇಳಿದ್ದಾರೆ.

ಈ ಕುರಿತು ನಿಷ್ಪಕ್ಷಪಾತ ಹಾಗೂ ಆಳವಾದ ತನಿಖೆ ನಡೆಸುವಂತೆ ಕೊಟ್ಟಾಯಂನ ರಾಷ್ಟ್ರೀಯ ಸ್ವಯಂಸೇವಕ ಸಂಘವು ಜಿಲ್ಲಾ ಪೊಲೀಸರಿಗೆ ಲಿಖಿತ ಮನವಿ ಸಲ್ಲಿಸಿದೆ ಎಂದೂ ಅವರು ತಿಳಿಸಿದ್ದಾರೆ.

“ಅವರ ಅಸಹಜ ಸಾವಿನ ಕುರಿತು ನಡೆಯುವ ಸ್ವತಂತ್ರ ತನಿಖೆಯಿಂದ ಅವರ ಸಾವಿನ ನೈಜ ಕಾರಣ ಮಾತ್ರ ಬಯಲಿಗೆ ಬರುವುದಿಲ್ಲ, ಬದಲಿಗೆ ಈ ದುರದೃಷ್ಟಕರ ಘಟನೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಅಮಾಯಕವಾಗಿದೆ ಎಂಬ ಸಂಗತಿಯೂ ಬಯಲಿಗೆ ಬರಲಿದೆ” ಎಂದು ಅವರು ಹೇಳಿದ್ದಾರೆ.

ಇದಕ್ಕೂ ಮುನ್ನ, ಆನಂದು ಅಜಿ ಸಾವಿಗೆ ಸಂಬಂಧಿಸಿದಂತೆ ಎಫ್ಐಆರ್ ನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಹೆಸರಿಸಬೇಕು ಹಾಗೂ ನ್ಯಾಯಯುತ, ನಿಷ್ಪಕ್ಷಪಾತ ಮತ್ತು ಸಮಯ ಮಿತಿಯ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News