ಆರ್‌ಟಿಐ ಕಾಯ್ದೆಯನ್ನು ವ್ಯವಸ್ಥಿತವಾಗಿ ದುರ್ಬಲಗೊಳಿಸಲಾಗಿದೆ : ಮಲ್ಲಿಕಾರ್ಜುನ ಖರ್ಗೆ ಆರೋಪ
ಮಾಹಿತಿ ಹಕ್ಕು ಕಾಯ್ದೆಗೆ 20 ವರ್ಷ
ಮಲ್ಲಿಕಾರ್ಜುನ ಖರ್ಗೆ | Photo Credit : PTI
ಹೊಸದಿಲ್ಲಿ, ಅ. 12: ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆ ಜಾರಿಗೆ ಬಂದು 20 ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ಕೇಂದ್ರದ ಬಿಜೆಪಿ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರ ಈ ಪಾರದರ್ಶಕವಾಗಿರುವ ಕಾಯ್ದೆಯನ್ನು “ವ್ಯವಸ್ಥಿತವಾಗಿ ದುರ್ಬಲಗೊಳಿಸಿ ನಾಶಪಡಿಸಿದೆ” ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ರವಿವಾರ ಎಕ್ಸ್ ನಲ್ಲಿನ ಪೋಸ್ಟ್ ನಲ್ಲಿ,“ಕಳೆದ 11 ವರ್ಷಗಳಲ್ಲಿ ಮೋದಿ ಸರಕಾರ ಆರ್‌ಟಿಐ ಕಾಯ್ದೆಯ ಆತ್ಮವನ್ನೇ ಕುಂದಿಸಿದೆ. ಇದರ ಪರಿಣಾಮವಾಗಿ ಪ್ರಜಾಪ್ರಭುತ್ವದ ತತ್ವಗಳು ಮತ್ತು ನಾಗರಿಕರ ಮಾಹಿತಿಯ ಹಕ್ಕು ಹಾನಿಗೊಳಗಾಗಿದೆ,” ಎಂದು ಖರ್ಗೆ ಟೀಕಿಸಿದ್ದಾರೆ.
2005ರಲ್ಲಿ ಆಗಿನ ಪ್ರಧಾನಿ ಡಾ. ಮನಮೋಹನ್ ಸಿಂಗ್ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನೇತೃತ್ವದ ಯುಪಿಎ ಸರಕಾರ ಈ ಮಹತ್ವದ ಕಾಯ್ದೆಯನ್ನು ಜಾರಿಗೆ ತಂದಿತ್ತು. “ಆರ್‌ಟಿಐ ಕಾಯ್ದೆ ಆಡಳಿತದಲ್ಲಿ ಹೊಣೆಗಾರಿಕೆ ಮತ್ತು ಪಾರದರ್ಶಕತೆಯ ಹೊಸ ಅಧ್ಯಾಯವನ್ನು ಆರಂಭಿಸಿತು,” ಎಂದು ಖರ್ಗೆ ನೆನಪಿಸಿದರು.
ಖರ್ಗೆ 2019ರ ತಿದ್ದುಪಡಿಯನ್ನು ಉಲ್ಲೇಖಿಸಿ, ಅದು ಮಾಹಿತಿ ಆಯುಕ್ತರ ಅಧಿಕಾರಾವಧಿ ಮತ್ತು ಸಂಬಳದ ಮೇಲಿನ ನಿಯಂತ್ರಣವನ್ನು ಕೇಂದ್ರ ಸರಕಾರಕ್ಕೆ ನೀಡಿದೆ ಎಂದು ಹೇಳಿದರು. ಜೊತೆಗೆ, ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣಾ ಕಾಯ್ದೆ, 2023, ಸಾರ್ವಜನಿಕ ಹಿತಾಸಕ್ತಿ ತತ್ವವನ್ನು ದುರ್ಬಲಗೊಳಿಸಿದ್ದು, “ಭ್ರಷ್ಟಾಚಾರವನ್ನು ಮುಚ್ಚಿಹಾಕಲು ಗೌಪ್ಯತೆ ಎಂಬ ಹೆಸರಿನಲ್ಲಿ ಅಡೆತಡೆ ಸೃಷ್ಟಿಸಿದೆ” ಎಂದು ಉಲ್ಲೇಖಿಸಿದರು.
“ಪ್ರಸ್ತುತ ಕೇಂದ್ರ ಮಾಹಿತಿ ಆಯೋಗವು ಮುಖ್ಯ ಮಾಹಿತಿ ಆಯುಕ್ತರಿಲ್ಲದೆ ಕಾರ್ಯನಿರ್ವಹಿಸುತ್ತಿದೆ. ಕಳೆದ 11 ವರ್ಷಗಳಲ್ಲಿ ಇದು ಏಳನೇ ಬಾರಿ ಈ ಹುದ್ದೆ ಖಾಲಿ ಉಳಿದಿದೆ. ಜೊತೆಗೆ ಎಂಟು ಹುದ್ದೆಗಳು 15 ತಿಂಗಳಿಗೂ ಹೆಚ್ಚು ಕಾಲದಿಂದ ಭರ್ತಿಯಾಗಿಲ್ಲ. ಇದರ ಪರಿಣಾಮವಾಗಿ ಸಾವಿರಾರು ಮೇಲ್ಮನವಿಗಳು ಬಾಕಿಯಾಗಿದ್ದು, ಅನೇಕ ಜನರಿಗೆ ನ್ಯಾಯ ನಿರಾಕರಿಸಲಾಗಿದೆ,” ಎಂದು ಮಲ್ಲಿಕಾರ್ಜುನ ಖರ್ಗೆ ವಿಷಾದ ವ್ಯಕ್ತಪಡಿಸಿದರು.
COVID-19 ಸಾವುಗಳ ಅಂಕಿಅಂಶಗಳು, NSSO 2017–18 ಸಮೀಕ್ಷೆ ಮತ್ತು PM CARES ನಿಧಿಯ ವಿವರಗಳಂತಹ ಪ್ರಮುಖ ಮಾಹಿತಿಗಳನ್ನು ತಡೆಹಿಡಿಯುವ ಮೂಲಕ ಸರಕಾರವು “ಅಂಕಿ ಅಂಶಗಳು ಲಭ್ಯವಿಲ್ಲ” ಎಂಬ ಸಂಸ್ಕೃತಿಯನ್ನು ಉತ್ತೇಜಿಸುತ್ತಿದೆ ಎಂದು ಖರ್ಗೆ ಆರೋಪಿಸಿದರು.
2014 ರಿಂದ 100ಕ್ಕೂ ಹೆಚ್ಚು ಆರ್‌ಟಿಐ ಕಾರ್ಯಕರ್ತರು ಹತ್ಯೆಯಾಗಿರುವುದನ್ನು ಉಲ್ಲೇಖಿಸಿದ ಅವರು, “ಸತ್ಯವನ್ನು ಹುಡುಕುವವರ ವಿರುದ್ಧ ಭಯದ ವಾತಾವರಣವನ್ನು ನಿರ್ಮಿಸಲಾಗಿದೆ,” ಎಂದು ಕಳವಳ ವ್ಯಕ್ತಪಡಿಸಿದರು.
ಮಾಹಿತಿ ಹಕ್ಕು ಕಾಯ್ದೆ, 2005 ಅನ್ನು ಅಕ್ಟೋಬರ್ 12, 2005ರಂದು ಯುಪಿಎ ಸರಕಾರ ಜಾರಿಗೆ ತಂದಿತ್ತು. ಆಡಳಿತದಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಖಚಿತಪಡಿಸಲು ಈ ಕಾನೂನು ನಾಗರಿಕರಿಗೆ ಸಾರ್ವಜನಿಕ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆಯುವ ಹಕ್ಕನ್ನು ನೀಡಿತು.
ಆದರೆ, ನಂತರದ ತಿದ್ದುಪಡಿಗಳು ಮತ್ತು ಹೊಸ ದತ್ತಾಂಶ ಕಾಯ್ದೆಗಳು ಆರ್‌ಟಿಐ ವ್ಯಾಪ್ತಿಯನ್ನು ಸೀಮಿತಗೊಳಿಸಿರುವುದಾಗಿ ಕಾಂಗ್ರೆಸ್ ಪಕ್ಷವು ಆರೋಪಿಸಿದೆ.