ಕೇರಳ ಚಲನಚಿತ್ರ ನಿರ್ಮಾಪಕರ ಸಂಘದ ಚುನಾವಣೆ | ಬುರ್ಖಾ ಧರಿಸಿ ಬಂದು ನಾಮಪತ್ರ ಸಲ್ಲಿಸಿದ ಚಲನಚಿತ್ರ ನಿರ್ಮಾಪಕಿ ಸಾಂಡ್ರಾ ಥಾಮಸ್
Photo | R.K.Nithin / thehindu
ತಿರುವನಂತಪುರ : ಆಗಸ್ಟ್ 14ರಂದು ನಿಗದಿಯಾಗಿದ್ದ ನಿರ್ಮಾಪಕರ ಸಂಘದ ಕಾರ್ಯಕಾರಿ ಸಮಿತಿ ಚುನಾವಣೆಗೆ ನಾಮಪತ್ರ ಸಲ್ಲಿಸಲು ಮಲಯಾಳಂ ಚಲನಚಿತ್ರ ನಿರ್ಮಾಪಕಿ, ನಟಿ ಸಾಂಡ್ರಾ ಥಾಮಸ್ ಕೊಚ್ಚಿಯಲ್ಲಿರುವ ಕೇರಳ ಚಲನಚಿತ್ರ ನಿರ್ಮಾಪಕರ ಸಂಘದ ಕಚೇರಿಗೆ ಬುರ್ಖಾ ಧರಿಸಿ ಆಗಮಿಸಿದರು.
ನಿರ್ಮಾಪಕರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಸಾಂಡ್ರಾ ಸ್ಪರ್ಧಿಸುತ್ತಿದ್ದಾರೆ. ʼನನ್ನ ಉಡುಪಿನ ಆಯ್ಕೆಯು ಸಂಘದ ನಾಯಕರ ವಿರುದ್ಧದ ಪ್ರತಿಭಟನೆಯ ಸಂಕೇತವಾಗಿದೆ. ದೀರ್ಘಕಾಲದಿಂದ ಪುರುಷ ಪ್ರಾಬಲ್ಯವಿರುವ ಸ್ಥಳಕ್ಕೆ ಭೇಟಿ ನೀಡುವಾಗ ಬುರ್ಖಾ ಧರಿಸುವುದು ಸುರಕ್ಷಿತ ಆಯ್ಕೆಯಾಗಿದೆʼ ಎಂದು ಸಾಂಡ್ರಾ ಥಾಮಸ್ ಹೇಳಿದರು.
ಮಲಯಾಳಂ ಚಲನಚಿತ್ರರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಹೇಮಾ ಸಮಿತಿ ವರದಿಯ ಬಗ್ಗೆ ಮೌನವಾಗಿರುವುದಕ್ಕೆ ಪದಾಧಿಕಾರಿಗಳನ್ನು ದೂಷಿಸಿ ಅವರು ಕಾರ್ಯಕಾರಿ ಸಮಿತಿಗೆ ಪತ್ರ ಬರೆದ ನಂತರ ಅವರು ಮತ್ತು ಸಂಘದ ನಡುವಿನ ಬಿರುಕು ಹೆಚ್ಚಾಗಿತ್ತು. ಪ್ರಸ್ತುತ ಪದಾಧಿಕಾರಿಗಳ ವಿರುದ್ಧವೂ ಅವರು ದೌರ್ಜನ್ಯದ ಆರೋಪವನ್ನು ಮಾಡಿದ್ದರು.
ಶಿಸ್ತು ಉಲ್ಲಂಘನೆ ಆರೋಪದಲ್ಲಿ ಕಾರ್ಯಕಾರಿ ಸಮಿತಿಯು ನವೆಂಬರ್ 2024ರಲ್ಲಿ ಅವರನ್ನು ಸಂಘದ ಪ್ರಾಥಮಿಕ ಸದಸ್ಯತ್ವದಿಂದ ಹೊರಹಾಕಿತ್ತು. ಡಿಸೆಂಬರ್ 2024ರಲ್ಲಿ ಸಾಂಡ್ರಾ ಥಾಮಸ್ ಅವರನ್ನು ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಿದ ಕೆಎಫ್‌ಪಿಎ ನಿರ್ಧಾರಕ್ಕೆ ಎರ್ನಾಕುಲಂ ನ್ಯಾಯಾಲಯ ತಡೆ ನೀಡಿತ್ತು.