ಥಾಣೆ ಸರಕಾರಿ ಆಸ್ಪತ್ರೆಯಲ್ಲಿ ಸರಣಿ ಸಾವು: 24 ತಾಸುಗಳಲ್ಲಿ 18 ರೋಗಿಗಳು ಮೃತ್ಯು
ಥಾಣೆ (ಮಹಾರಾಷ್ಟ್ರ): ಥಾಣೆಯ ಕಾಲ್ವಾದಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜ ಆಸ್ಪತ್ರೆಯಲ್ಲಿ ಕಳೆದ 24 ತಾಸುಗಳಲ್ಲಿ ಹದಿನೆಂಟು ರೋಗಿಗಳು ಸಾವನ್ನಪ್ಪಿರುವ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.
ಮೃತಪಟ್ಟ ರೋಗಿಗಳಲ್ಲಿ 10 ಮಂದಿ ಮಹಿಳೆಯರು, ಎಂಟು ಮಂದಿ ಪುರುಷರು ಸೇರಿದ್ದಾರೆ. ಅವರಲ್ಲಿ ಆರು ಮಂದಿ ಥಾಣೆ ನಗರದವರಾಗಿದ್ದು, ಮೂವರು ಕಲ್ಯಾಣ್, ಶಾಹಪುರ್‌ನ ಮೂವರು, ಭಿವಂಡಿ, ಉಲ್ಲಾಸ್‌ನಗರ ಹಾಗೂ ಓರ್ವ ಗೋವಂಡಿ (ಮುಂಬೈ) ನಿವಾಸಿಯಾಗಿದ್ದಾರೆ.
ಥಾಣೆಯ ಆಸ್ಪತ್ರೆಯಲ್ಲಿ ರೋಗಿಗಳ ಸಾವಿನ ಪ್ರಕರಣಗಳ ಬಗ್ಗೆ ಮಾಹಿತಿಯನ್ನು ಪಡೆದಿರುವ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಈ ಬಗ್ಗೆ ಸ್ವತಂತ್ರ ತನಿಖಾ ಸಮಿತಿಯ ರಚನೆಗೆ ಆದೇಶಿಸಿದ್ದಾರೆ. ಆರೋಗ್ಯ ಸೇವೆಗಳ ಆಯುಕ್ತರು ಸಮಿತಿಯ ನೇತೃತ್ವ ವಹಿಸಲಿದ್ದಾರೆ. ಜಿಲ್ಲಾಧಿಕಾರಿ, ನಗರಾಡಳಿತ ವರಿಷ್ಠ, ಆರೋಗ್ಯ ಸೇವೆಗಳ ನಿರ್ದೇಶಕ, ಮುಂಬೈನ ಸರಕಾರಿ ಸ್ವಾಮ್ಯದ ಜೆಜೆ ಆಸ್ಪತ್ರೆಯ ರಕ್ತನಾಳತಜ್ಞ ಹಾಗೂ ಸರಕಾರಿ ಸರ್ಜನ್ ಸಮಿತಿಯಲ್ಲಿರುವರು ಎಂದು ನಗರ ಆಯುಕ್ತ ಆಭಿಜಿತ್ ಬಾನಗರ್ ತಿಳಿಸಿದ್ದಾರೆ.
ಥಾಣೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮೃತಪಟ್ಟ ರೋಗಿಗಳು ಮೂತ್ರಕೋಶದ ಕಲ್ಲು, ದೀರ್ಘಸಮಯದ ಪಾರ್ಶ್ವವಾಯು, ಅಲ್ಸರ್,ನ್ಯೂಮೋನಿಯಾ, ಸೀಮೆಎಣ್ಣೆ ಸೇವನೆ ಇತ್ಯಾದಿ ತೊಂದರೆಗಳಿಂದ ಬಳಲುತ್ತಿದ್ದರೆಂದು ತಿಳಿಸಿದರು.
ಈ ರೋಗಿಗಳಿಗೆ ನೀಡಲಾದ ಚಿಕಿತ್ಸೆಯ ವಿಧಾನದ ಬಗ್ಗೆ ತನಿಖೆ ನಡೆಸಲಾಗುವುದು ಹಾಗೂ ಮೃತರ ಬಂಧುಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುವುದು. ಮೃತ ರೋಗಿಗಳ ಚಿಕಿತ್ಸೆಯಲ್ಲಿ ನಿರ್ಲಕ್ಷ ವಹಿಸಲಾಗಿದೆಯೆಂದು ಕೆಲವು ಬಂಧುಳು ಮಾಡಿರುವ ಆರೋಪದ ಬಗ್ಗೆಯೂ ತನಿಖಾ ಸಮಿತಿಯು ಪರಿಶೀಲನೆ ನಡೆಸಲಿದೆ ಎಂದು ಬಣಗಾರ್ ತಿಳಿಸಿದರು.
ಸಮಗ್ರ 500 ಮಂದಿ ಕೋವಿಡ್ ಸಿಬ್ಬಂದಿಯನ್ನು ಈ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಹಾಗೂ ಹೆಚ್ಚುವರಿ ನರ್ಸಿಂಗ್ ಸಿಬ್ಬಂದಿಯನ್ನು ಕೂಡಾ ನೇಮಕಗೊಳಿಸಲಾಗಿದೆ. ಇದರ ಜೊತೆಗೆ 24 ತಾಸುಗಳ ಕಾಲವೂ ಮರಣೋತ್ತರ ಪರೀಕ್ಷಾ ಘಟಕವನ್ನು ತೆರೆದಿಡಲಾಗುವುದು ಎಂದವರು ತಿಳಿಸಿದು.