ಉತ್ತರ ಪ್ರದೇಶ: ಸರಣಿ ಲೈಂಗಿಕ ಅಪರಾಧಿ ಪೊಲೀಸ್ ಎನ್‌ಕೌಂಟರ್‌ನಲ್ಲಿ ಹತ್ಯೆ
ಆಗ್ರಾ: ಮೈನ್ಪುರಿಯಲ್ಲಿ ಎಂಟು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಂದ ಪ್ರಕರಣದ ಆರೋಪಿ ಹಾಗೂ ಹಲವು ಲೈಂಗಿಕ ಕೃತ್ಯಗಳನ್ನು ಎಸಗಿದ್ದ 55 ವರ್ಷದ ಅಪರಾಧಿಯನ್ನು ಶುಕ್ರವಾರ ಮುಂಜಾನೆ ಉತ್ತರ ಪ್ರದೇಶದ ಫರೂಖಾಬಾದ್ ಜಿಲ್ಲೆಯಲ್ಲಿ ಪೊಲೀಸ್ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲಾಗಿದೆ.
ಮೊಹ್ಮದಾಬಾದ್ ಕೊತ್ವಾಲಿ ಪೊಲೀಸ್ ಠಾಣೆಯ ವ್ಯಾಪ್ತಿಯ ಪಖ್ನಾ ಗ್ರಾಮದ ನಿವಾಸಿ ಮನು ಸುಭಾಷ್ ಹತ್ಯೆಯಾದ ಆರೋಪಿ. ಈತನ ಬಗ್ಗೆ ಸುಳಿವು ನೀಡಿದವರಿಗೆ ಒಂದು ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು. ಖಚಿತ ಮಾಹಿತಿಯನ್ನು ಆಧರಿಸಿ ಪೊಲೀಸರು ಆತನ ಗ್ರಾಮದ ಸುತ್ತ ಪಹರೆ ಹಾಕಿದರು. ಇದರಿಂದ ಭಯಗೊಂಡ ಮನು ಸುಭಾಷ್ ಪೊಲೀಸರ ವಿರುದ್ಧ ಗುಂಡು ಹಾರಿಸಿದ ಎನ್ನಲಾಗಿದ್ದು, ಪೊಲೀಸರು ಆತನ ಎದೆಗೆ ಗುರಿ ಇಟ್ಟು ಪ್ರತಿದಾಳಿ ನಡೆಸಿದರು. ತಕ್ಷಣವೇ ಜಿಲ್ಲಾ ಆಸ್ಪತ್ರೆಗೆ ಆತನನ್ನು ಒಯ್ಯಲಾಯಿತು. ಆ ವೇಳೆಗಾಗಲೇ ಆತ ಮೃತಪಟ್ಟಿದ್ದನ್ನು ವೈದ್ಯರು ದೃಢಪಡಿಸಿದರು" ಎಂದು ಎಸ್ಪಿ ಆರತಿ ಸಿಂಗ್ ವಿವರಿಸಿದ್ದಾರೆ. ಘಟನಾ ಸ್ಥಳದಿಂದ ಪೊಲೀಸರು ದೇಶಿ ಪಿಸ್ತೂಲ್, ಸಕ್ರಿಯ ಕ್ಯಾಟ್ರಿಡ್ಜ್ ಹಾಗೂ ಆತನ ಆಧಾರ್ ಕಾರ್ಡ್ ವಶಪಡಿಸಿಕೊಂಡಿದ್ದಾರೆ.
ಮನೋವಿಕೃತ ಕಾಮಿಯಾಗಿದ್ದ ಮನು ಸುಭಾಷ್, ವಕ್ರ ಮನೋಪ್ರವೃತ್ತಿಯಿಂದ ಪುಟ್ಟ ಬಾಲಕಿಯರನ್ನು ಗುರಿ ಮಾಡಿ ಅಪರಾಧ ಎಸಗುತ್ತಿದ್ದ ಎನ್ನಲಾಗಿದೆ. ಹತ್ಯೆ, ಹಣಕ್ಕಾಗಿ ಅಪಹರಣ ಮತ್ತು ಲೈಂಗಿಕ ಕಿರುಕುಳ ಸೇರಿದಂತೆ ಹಲವು ಅಪರಾಧಗಳು ಈತನ ವಿರುದ್ಧ ದಾಖಲಾಗಿದ್ದವು.
ಹಣಕ್ಕಾಗಿ ಅಪಹರಣ ನಡೆಸಿದ ಪ್ರಕರಣದಲ್ಲಿ ಈತನನ್ನು 2017ರಲ್ಲಿ ಬಂಧಿಸಲಾಗಿತ್ತು. 2023ರಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದ ಈತ ಬಾಲಕಿಯರನ್ನು ಗುರಿ ಮಾಡಿ ಕೃತ್ಯ ಎಸಗುವುದು ಮುಂದುವರಿಸಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.