ಹಿಮಾಚಲ ಪ್ರದೇಶ: ಭಾರೀ ಭೂಕುಸಿತದಿಂದ ಹಲವು ಮನೆಗಳು ಕುಸಿತ, ಹಲವರು ಸಿಲುಕಿರುವ ಶಂಕೆ
Photo: NDTV
ಶಿಮ್ಲಾ: ಹಿಮಾಚಲ ಪ್ರದೇಶದ ಕುಲು ಜಿಲ್ಲೆಯಲ್ಲಿ ಗುರುವಾರ ಭಾರೀ ಭೂಕುಸಿತ ಉಂಟಾದ ಪರಿಣಾಮ ಹಲವಾರು ಮನೆಗಳು ಕುಸಿದುಬಿದ್ದಿದ್ದು, ಅನೇಕ ಜನರು ಸಿಲುಕಿರುವ ಆತಂಕವಿದೆ ಎಂದು NDTV ವರದಿ ಮಾಡಿದೆ.
ಕುಲು ಜಿಲ್ಲೆಯ ಅನ್ನಿ ಪಟ್ಟಣದ ಹೊಸ ಬಸ್ ನಿಲ್ದಾಣದ ಬಳಿ ಸುಮಾರು 8-9 ಬಹುಮಹಡಿ ಕಟ್ಟಡಗಳು ಭೂಕುಸಿತದಿಂದ ಏಕಾಏಕಿ ಕುಸಿದುಬಿದ್ದು ಭಾರೀ ಧೂಳು ಮೇಲೆದ್ದಿರುವ ದೃಶ್ಯವು ವೀಡಿಯೊದಲ್ಲಿ ಸೆರೆಯಾಗಿದೆ. ಸದ್ಯಕ್ಕೆ ಯಾವುದೇ ಪ್ರಾಣಹಾನಿಯಾಗಿಲ್ಲ. ಕಳೆದ ಒಂದು ವಾರದ ಹಿಂದೆಯೇ ಕಟ್ಟಡ ತೆರವು ಮಾಡುವಂತೆ ಆಡಳಿತ ಮಂಡಳಿ ನೋಟಿಸ್ ನೀಡಿತ್ತು ಎಂದು ವರದಿಯಾಗಿದೆ.
ಭಾರತೀಯ ಹವಾಮಾನ ಇಲಾಖೆ (ಐಎಂಡಿ) ರೆಡ್ ಅಲರ್ಟ್ ಘೋಷಿಸಿದ್ದು, ಇಂದಿನಿಂದ ಮುಂದಿನ ಎರಡು ದಿನಗಳ ಕಾಲ ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಾಗಲಿದೆ ಎಂದು ಎಚ್ಚರಿಕೆ ನೀಡಿದೆ.
ರಾಜ್ಯದ ಹಲವೆಡೆ ನಿರಂತರ ಮಳೆಯಾಗುತ್ತಿದ್ದು, ಹವಾಮಾನ ವೈಪರೀತ್ಯದಿಂದ ನಿವಾಸಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಜಿಲ್ಲೆಯಲ್ಲಿ ಭಾರೀ ಮಳೆಯ ನಂತರ ಇಂದು ಹಾನಿಗೊಳಗಾದ ಕುಲು-ಮಂಡಿ ಹೆದ್ದಾರಿಯಲ್ಲಿ ನೂರಾರು ವಾಹನಗಳು ಸಿಲುಕಿಕೊಂಡಿವೆ.
ಕುಲು ಮತ್ತು ಮಂಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ಹಾಳಾಗಿದೆ. ಪಾಂಡೋ ಮೂಲಕ ಪರ್ಯಾಯ ಮಾರ್ಗವೂ ಹಾಳಾಗಿದೆ. ಹೀಗಾಗಿ ಸದ್ಯಕ್ಕೆ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಕುಲು ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿ ಸಾಕ್ಷಿ ವರ್ಮಾ ತಿಳಿಸಿದ್ದಾರೆ.
Several buildings collapsed in Anni of Kullu district in Himachal Pradesh pic.twitter.com/qJZurRnSY9