ಉತ್ತರಪ್ರದೇಶ | ರಸ್ತೆ ನಿರ್ಮಿಸುವಂತೆ ಆಗ್ರಹಿಸಿ ಪತ್ನಿಯನ್ನು ಬೆನ್ನ ಮೇಲೆ ಹೊತ್ತು ತೆವಳುತ್ತಾ ಡಿಸಿ ಕಚೇರಿಗೆ ಹೋದ ವಿಕಲ ಚೇತನ : ವೀಡಿಯೊ ವೈರಲ್
Credit: Instagram@naughtyworld
ಉತ್ತರಪ್ರದೇಶ : ಅಝಮ್‌ಗಢದಲ್ಲಿ ಅಂಗವಿಕಲ ವ್ಯಕ್ತಿಯೋರ್ವ ತನ್ನ ಪತ್ನಿಯನ್ನು ಬೆನ್ನಿನ ಮೇಲೆ ಹೊತ್ತುಕೊಂಡು ಸರಕಾರಿ ಕಚೇರಿಗೆ ಬರಿಗಾಲಿನಲ್ಲಿ ತೆವಳುತ್ತಾ ಹೋದ ಘಟನೆಯ ವೀಡಿಯೊ ವೈರಲ್ ಆಗಿದೆ.
ಅಝಮ್‌ಗಢದ ಜಹಾನಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಕುಂಜಿ ಗ್ರಾಮದ ನಿವಾಸಿ ಅಶೋಕ್ ಕುಮಾರ್ ಎಂಬಾತ ರಸ್ತೆ ನಿರ್ಮಿಸುವಂತೆ ಆಗ್ರಹಿಸಿ ತನ್ನ ಪತ್ನಿಯನ್ನು ಬೆನ್ನ ಮೇಲೆ ಹೊತ್ತುಕೊಂಡು ತೆವಳುತ್ತಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಕಚೇರಿಗೆ ತೆರಳಿದ್ದಾನೆ. ಆ ಭಾವನಾತ್ಮಕ ಘಟನೆಯ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ವೀಡಿಯೊದಲ್ಲಿ ನಮ್ಮ ಮನೆಗೆ ತೆರಳಲು ಯಾವುದೇ ರಸ್ತೆ ಸಂಪರ್ಕವಿಲ್ಲ. ಮಳೆಗಾಲದಲ್ಲಿ ಕೆಸರಿನಿಂದ ತುಂಬಿದ ರಸ್ತೆ ಮೂಲಕ ತೆರಳಬೇಕಾಗುತ್ತದೆ ಎಂದು ಅಶೋಕ್ ಕುಮಾರ್ ಹೇಳಿದ್ದಾರೆ.
ಈ ಕುರಿತ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದಂತೆ ಹಲವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ರಸ್ತೆ ನಿರ್ಮಿಸಿ ಕೊಡುವಂತೆ ಆಗ್ರಹಿಸಿದ್ದಾರೆ.