ಶೇನ್ ನಿಗಮ್ ನಟನೆಯ 'ಹಾಲ್' ಚಿತ್ರದ ಕೆಲ ಸಂಭಾಷಣೆ, ಭೀಪ್ ಬಿರಿಯಾನಿ ತಿನ್ನುವ ದೃಶ್ಯಕ್ಕೆ ಕತ್ತರಿ ಹಾಕುವಂತೆ ಸೂಚಿಸಿದ ಸಿಬಿಎಫ್‌ಸಿ
ʼಎಂಪುರಾನ್ʼ ಬಳಿಕ ವಿವಾದದಲ್ಲಿ ಮತ್ತೊಂದು ಮಲಯಾಳಂ ಚಿತ್ರ
Photo credit: India Today
ತಿರುವನಂತಪುರಂ: ಮೋಹನ್ ಲಾಲ್ ಅವರ 'ಎಂಪುರಾನ್' ಮತ್ತು ಸುರೇಶ್ ಗೋಪಿ ಅವರ 'ಜಾನಕಿ' ನಂತರ ಮತ್ತೊಂದು ಮಲಯಾಳಂ ಚಲನಚಿತ್ರ ಸೆನ್ಸರ್‌ಶಿಪ್ ವಿವಾದಕ್ಕೆ ಸಿಲುಕಿದೆ. ಶೇನ್ ನಿಗಮ್ ಅಭಿನಯದ ಹೊಸ 'ಹಾಲ್'(Haal) ಚಿತ್ರಕ್ಕೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ(ಸಿಬಿಎಫ್‌ಸಿ) ಪ್ರಮಾಣೀಕರಣ ನಿರಾಕರಿಸಿದೆ. ಅನುಮತಿ ನೀಡಬೇಕಾದರೆ 15 ದೃಶ್ಯಗಳಿಗೆ ಕತ್ತರಿ ಹಾಕುವಂತೆ ಸೂಚಿಸಿದೆ.
ಹಾಲ್ ಚಿತ್ರದಲ್ಲಿ ‘ಧ್ವಜ ಪ್ರಣಾಮʼ, ʼಸಂಘಂ ಕವಾಲ್ ಉಂಡ್ʼ ಎಂಬಂತಹ ಉಲ್ಲೇಖಗಳಿಗೆ ಮತ್ತು ಭೀಪ್ ಬಿರಿಯಾನಿ ತಿನ್ನುವ ದೃಶ್ಯ ಮತ್ತು ಸುಲ್ತಾನ್ ಬತ್ತೇರಿ ಎಂಬ ಸ್ಥಳದ ಹೆಸರನ್ನು "ಗಣಪತಿವಟ್ಟಂ" ಎಂದು ಬದಲಿಸಿರುವ ಸಂಭಾಷಣೆಗಳ ವಿರುದ್ಧ ಚಲನಚಿತ್ರ ಪ್ರಮಾಣೀಕರಣ ಮಂಡಳಿ ಆಕ್ಷೇಪ ವ್ಯಕ್ತಪಡಿಸಿದೆ.
ಚಿತ್ರದಲ್ಲಿನ ಸುಮಾರು 15 ದೃಶ್ಯಗಳಿಗೆ ಕತ್ತರಿ ಹಾಕುವಂತೆ ಸೂಚಿಸಿದೆ. ಈ ದೃಶ್ಯಗಳಿಗೆ ಕತ್ತರಿ ಹಾಕಿದರೆ ಮಾತ್ರ 'ಎ' ಪ್ರಮಾಣಪತ್ರವನ್ನು ನೀಡಬಹುದು ಎಂದು ಸಿಬಿಎಫ್‌ಸಿಯು ನಿರ್ಮಾಪಕರಿಗೆ ತಿಳಿಸಿದೆ.
ಚಿತ್ರದ ನಿರ್ಮಾಪಕರಾದ ಜೆವಿಜೆ ಪ್ರೊಡಕ್ಷನ್ಸ್, ಸಿಬಿಎಫ್‌ಸಿ ನಿರ್ಧಾರವನ್ನು ಪ್ರಶ್ನಿಸಿ ಕೇರಳ ಹೈಕೋರ್ಟ್ ಮೊರೆ ಹೋಗಿದೆ. ಅರ್ಜಿಯ ವಿಚಾರಣೆ ಮಂಗಳವಾರ ನಡೆಯಲಿದೆ.