‘ಯಾವ ಪಕ್ಷದಲ್ಲಿದ್ದೇನೆ ಎನ್ನುವುದನ್ನು ಮೊದಲು ತರೂರ್ ನಿರ್ಧರಿಸಲಿ’: ಕಾಂಗ್ರೆಸ್ ನ ಹಿರಿಯ ನಾಯಕ ಕೆ. ಮುರಳೀಧರನ್ ವ್ಯಂಗ್ಯ
ಕೆ. ಮುರಳೀಧರನ್ | PC : thehindu.com
ತಿರುವನಂತಪುರಮ್: ಕೇರಳದ ಕಾಂಗ್ರೆಸ್ ನೇತೃತ್ದದ ಯುಡಿಎಫ್ ನಾಯಕರ ಪೈಕಿ ತಾನು ಮುಖ್ಯಮಂತ್ರಿ ಹುದ್ದೆಯ ನೆಚ್ಚಿನ ಆಯ್ಕೆಯಾಗಿದ್ದೇನೆ ಎನ್ನುವುದನ್ನು ತೋರಿಸುವ ಸಮೀಕ್ಷೆಯೊಂದನ್ನು ಕಾಂಗ್ರೆಸ್ ಕ್ರಿಯಾ ಸಮಿತಿ ಸದಸ್ಯ ಶಶಿ ತರೂರ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನ ಹಿರಿಯ ನಾಯಕ ಕೆ. ಮುರಳೀಧರನ್, ‘‘ತಾನು ಯಾವ ಪಕ್ಷಕ್ಕೆ ಸೇರಿದ್ದೇನೆ ಎನ್ನುವುದನ್ನು ಅವರು ಮೊದಲು ನಿರ್ಧರಿಸಬೇಕು’’ ಎಂಬುದಾಗಿ ವ್ಯಂಗ್ಯವಾಡಿದ್ದಾರೆ.
‘‘ಸಮೀಕ್ಷೆಯಲ್ಲಿ ಬೇರೆಯವರು ಮುಂದಿದ್ದರೂ, 2026ರ ವಿಧಾನಸಭಾ ಚುನಾವಣೆಯಲ್ಲಿ ಯುಡಿಎಫ್ ಅಧಿಕಾರಕ್ಕೆ ಬಂದರೆ ಯುಡಿಎಫ್‌ನವರೇ ಮುಖ್ಯಮಂತ್ರಿಯಾಗುತ್ತಾರೆ’’ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಮುರಳೀಧರನ್ ಹೇಳಿದರು.
‘‘ನಮ್ಮ ಗುರಿ ಚುನಾವಣೆಯನ್ನು ಗೆಲ್ಲುವುದು. ಇಂಥ ಅನಗತ್ಯ ವಿವಾದಗಳಲ್ಲಿ ನಮಗೆ ಆಸಕ್ತಿಯಿಲ್ಲ’’ ಎಂದರು.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ತಿರುವನಂತಪುರಮ್ ಸಂಸದ ಶಶಿ ತರೂರ್ ನೀಡಿರುವ ಹೇಳಿಕೆಗಳ ಹಿನ್ನೆಲೆಯಲ್ಲಿ ಅವರು ಮತ್ತು ಪಕ್ಷದ ಕೇಂದ್ರೀಯ ನಾಯಕತ್ವದ ನಡುವಿನ ಬಿರುಕು ಹೆಚ್ಚುತ್ತಿದೆ.