ಹಾರಾಡಲು ಅನುಮತಿ ಕೇಳಬೇಡಿ : ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ ಬೆನ್ನಲ್ಲೇ ಸಂದೇಶ ಹಂಚಿಕೊಂಡ ಶಶಿ ತರೂರ್
Photo | indiatoday
ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರನ್ನು ಪದೇ ಪದೇ ಪ್ರಶಂಸೆ ಮಾಡುತ್ತಿರುವ ಶಶಿ ತರೂರ್ ಅವರನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬುಧವಾರ ತರಾಟೆಗೆ ತೆಗೆದುಕೊಂಡಿದ್ದಾರೆ. ಇದರ ಬೆನ್ನಲ್ಲೇ ಶಶಿ ತರೂರ್ ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.
'ಹಾರಡಲು ಅನುಮತಿ ಕೇಳಬೇಡಿ. ರೆಕ್ಕೆಗಳು ನಿಮ್ಮವು ಮತ್ತು ಆಕಾಶ ಯಾರಿಗೂ ಸೇರಿಲ್ಲ' ಎಂಬ ಸಾಲುಗಳನ್ನು ಹಂಚಿಕೊಂಡಿದ್ದಾರೆ. ಪೋಸ್ಟ್‌ನಲ್ಲಿ ಮುಂದಕ್ಕೆ ದಿಟ್ಟಿಸಿ ನೋಡುವ ಹಕ್ಕಿಯೊಂದರ ಪೋಟೊ ಕೂಡ ಇದೆ.
ಬುಧವಾರ ದಿಲ್ಲಿಯ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ʼನನಗೆ ಇಂಗ್ಲಿಷ್ ಓದಲು ಬರುವುದಿಲ್ಲ, ಶಶಿ ತರೂರ್ ಅವರ ಭಾಷೆ ತುಂಬಾ ಚೆನ್ನಾಗಿದೆ. ಅದಕ್ಕಾಗಿಯೇ ನಾವು ಅವರನ್ನು ಪಕ್ಷದ ಕಾರ್ಯಕಾರಿ ಸಮಿತಿಯ ಸದಸ್ಯರನ್ನಾಗಿ ಮಾಡಿದ್ದೇವೆ. ಆದರೆ, ನಾನು ಹೇಳಲು ಬಯಸುವುದೇನೆಂದರೆ ನಾವೆಲ್ಲರೂ, ಇಡೀ ವಿರೋಧ ಪಕ್ಷ ಒಗ್ಗಟ್ಟಿನಿಂದ ನಮ್ಮ ಸೈನ್ಯದೊಂದಿಗೆ ಇದ್ದೇವೆ. ಆಪರೇಷನ್ ಸಿಂಧೂರ್ ವೇಳೆ ಒಗ್ಗಟ್ಟಾಗಿ ನಿಂತಿದ್ದೇವೆ. ದೇಶ ಮೊದಲು ಎಂದು ಹೇಳಿದ್ದೇವೆ, ಕೆಲವರು ಮೋದಿ ಮೊದಲು, ದೇಶ ನಂತರ ಬರುತ್ತದೆ ಎಂದು ಹೇಳುತ್ತಾರೆ. ಹಾಗಾದರೆ ನಾವು ಏನು ಮಾಡಬೇಕು?ʼ ಎಂದು ಪ್ರಶ್ನಿಸಿದ್ದರು.