ಗಡಿಪಾರು ವೇಳೆ ಸಿಖ್ ಸಮುದಾಯದ ಜನರಿಗೆ ʼಟರ್ಬನ್ʼ ಧರಿಸಲು ಅವಕಾಶ ನೀಡಿಲ್ಲ: ಅಮೆರಿಕ ವಿರುದ್ಧ ಸಿಖ್ ಉನ್ನತ ಸಮಿತಿ SGPC ಆಕ್ರೋಶ
Photo credit: PTI
ಹೊಸದಿಲ್ಲಿ: ಅಕ್ರಮ ವಲಸಿಗರ ಗುಂಪಿನಲ್ಲಿದ್ದ ಸಿಖ್ ಸಮುದಾಯದ ಸದಸ್ಯರಿಗೆ ತಮ್ಮ ಸಮುದಾಯದ ಸಂಕೇತವಾಗಿರುವ ಪೇಟ(ಟರ್ಬನ್) ಧರಿಸಲು ಅಮೆರಿಕ ಅವಕಾಶ ನೀಡಿಲ್ಲ ಎಂದು ಸಿಖ್ ಉನ್ನತ ಸಮಿತಿ ಶಿರೋಮಣಿ ಗುರುದ್ವಾರ ಪರ್ಬಂಧಕ್ ಸಮಿತಿ(SGPC) ಅಮೆರಿಕದ ಅಧಿಕಾರಿಗಳ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದೆ.
ವೈರಲ್ ವೀಡಿಯೊದಲ್ಲಿ, ಅಕ್ರಮ ವಲಸಿಗರ ಗುಂಪಿನಲ್ಲಿದ್ದ ಸಿಖ್ ಸಮುದಾಯದ ಸದಸ್ಯರು ತಮ್ಮ ಪೇಟಗಳಿಲ್ಲದೆ ಅಮೃತಸರ ವಿಮಾನ ನಿಲ್ದಾಣದಲ್ಲಿ ಬಂದಿಳಿದಿರುವುದು ಕಂಡು ಬಂದಿದೆ. ಫೆಬ್ರವರಿ 15ರಂದು ಅಮೃತಸರಕ್ಕೆ ಅಮೆರಿಕ ಮಿಲಿಟರಿ ವಿಮಾನದಲ್ಲಿ ಬಂದಿಳಿದ 116 ಅಕ್ರಮ ಭಾರತೀಯ ವಲಸಿಗರಲ್ಲಿ ಓರ್ವ ಪ್ರತಿಕ್ರಿಯಿಸಿ, ನಾನು ಪೇಟವನ್ನು ಧರಿಸಿಲ್ಲ. ಅಮೆರಿಕಗೆ ಅಕ್ರಮವಾಗಿ ಪ್ರವೇಶಿಸಿದಾಗ ನಮ್ಮ ಪೇಟಗಳನ್ನು ತೆಗೆಯುವಂತೆ ನಮಗೆ ಸೂಚಿಸಲಾಗಿದೆ ಎಂದು ಹೇಳಿದರು.
ಗಡಿಪಾರು ಮಾಡುವಾಗ ಸಿಖ್ ಸಮುದಾಯದ ಜನರಿಗೆ ತಮ್ಮ ಪೇಟವನ್ನು ಧರಿಸಲು ಅವಕಾಶ ನೀಡದಿರುವ ಅಮೆರಿಕದ ಅಧಿಕಾರಿಗಳ ಕ್ರಮವನ್ನು ಶಿರೋಮಣಿ ಗುರುದ್ವಾರ ಪರ್ಬಂಧಕ್ ಸಮಿತಿ ಬಲವಾಗಿ ಖಂಡಿಸಿದೆ. ಅಮೃತಸರ ವಿಮಾನ ನಿಲ್ದಾಣದಲ್ಲಿ ಅಕ್ರಮ ಭಾರತೀಯ ವಲಸಿಗರನ್ನು ಸ್ವಾಗತಿಸಲು ನಿಯೋಜಿಸಲ್ಪಟ್ಟಿದ್ದ ಶಿರೋಮಣಿ ಗುರುದ್ವಾರ ಪರ್ಬಂಧಕ್ ಸಮಿತಿ ಸದಸ್ಯರು ಗಡಿಪಾರಾದ ತಮ್ಮ ಸಮುದಾಯದ ಜನರಿಗೆ ಪೇಟಗಳನ್ನು ಒದಗಿಸಿದರು.
ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಎಸ್ಜಿಪಿಸಿ ಪ್ರಧಾನ ಕಾರ್ಯದರ್ಶಿ ಗುರ್‌ಚರಣ್ ಸಿಂಗ್ ಗ್ರೆವಾಲ್, ಗಡಿಪಾರಿಗೆ ಒಳಗಾದವರನ್ನು ಸಂಕೋಲೆ ಹಾಕಿ ಕರೆತಂದಿರುವುದು ಮತ್ತು ಸಿಖ್ ಸಮುದಾಯದ ಜನರಿಗೆ ಪೇಟವನ್ನು ಧರಿಸಲು ಅವಕಾಶ ನೀಡದಿರುವುದು ವಿಷಾದದ ಸಂಗತಿ. ಎಸ್ಜಿಪಿಸಿ ಶೀಘ್ರದಲ್ಲೇ ಅಮೆರಿಕದ ಅಧಿಕಾರಿಗಳೊಂದಿಗೆ ಸಮಸ್ಯೆಯನ್ನು ಪ್ರಸ್ತಾಪಿಸಲಿದೆ. ಪೇಟವು ಸಿಖ್ ಸಮುದಾಯದ ಒಂದು ಭಾಗವಾಗಿದೆ ಎಂದು ಹೇಳಿದ್ದಾರೆ.
ಶಿರೋಮಣಿ ಅಕಾಲಿ ದಳದ ನಾಯಕ ಬಿಕ್ರಮ್ ಸಿಂಗ್ ಮಜಿಥಿಯಾ ಈ ಕುರಿತು ಪ್ರತಿಕ್ರಿಯಿಸಿ, ಸಿಖ್ ಗಡಿಪಾರು ಮಾಡಿದವರನ್ನು ಅವರ ಪೇಟಗಳಿಲ್ಲದೆ ಕಳುಹಿಸಿದ್ದಕ್ಕಾಗಿ ಯುಎಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.