×
Ad

ಸಿಲ್ಕ್ಯಾರಾ ಹೀರೊ ವಕೀಲ್ ಹಸನ್ ಮನೆ ಧ್ವಂಸ: ಫ್ಲಾಟ್ ನೀಡಿದ ದೆಹಲಿ ಅಭಿವೃದ್ಧಿ ಪ್ರಾಧಿಕಾರ

Update: 2024-03-01 09:25 IST

Photo: twitter.com/Republic_Bharat

ಹೊಸದಿಲ್ಲಿ: ಸಿಲ್ಕ್ಯಾರಾ ರಕ್ಷಣಾ ಕಾರ್ಯದಲ್ಲಿ 39 ಮಂದಿ ಕಾರ್ಮಿಕರ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವಕೀಲ್ ಹುಸೇನ್ ಅವರ ಎರಡು ಕೊಠಡಿಗಳ ಮನೆಯನ್ನು ಒತ್ತುವರಿ ವಿರೋಧಿ ಕಾರ್ಯಾಚರಣೆಯಲ್ಲಿ ಧ್ವಂಸಗೊಳಿಸಿದ ಮರುದಿನವೇ ದೆಹಲಿ ಅಭಿವೃದ್ಧಿ ಪ್ರಾಧಿಕಾರ (ಡಿಡಿಎ) ಅವರಿಗೆ ಈಶಾನ್ಯ ದೆಹಲಿಯ ನರೇಲಾದಲ್ಲಿ ಫ್ಲಾಟ್ ನೀಡುವುದಾಗಿ ಘೋಷಿಸಿದೆ. ಅವರ ಕುಟುಂಬಕ್ಕೆ ತಾತ್ಕಾಲಿಕ ಸೂರು ಒದಗಿಸುವ ಜತೆಗೆ ಉದ್ಯೋಗದ ಭರವಸೆಯನ್ನೂ ನೀಡಿದೆ.

ಆದರೆ ಹಸನ್ ಅವರ ಪತ್ನಿ ಶಬಾನಾ, ಈಶಾನ್ಯ ದೆಹಲಿಯ ಖಜೂರಿ ಖಾಸ್ ಬಳಿ ಮನೆ ನೀಡುವಂತೆ ಕೋರಿದ್ದಾರೆ. ಈ ಪ್ರದೇಶದಲ್ಲಿ ಅವರ ಕುಟುಂಬ ಅನಧಿಕೃತ ನಿರ್ಮಾಣ ಎನ್ನಲಾದ ಕಟ್ಟಡದಲ್ಲಿ ವಾಸವಿತ್ತು. ಈ ಪ್ರದೇಶದಲ್ಲಿ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿರುವ ಹಿನ್ನೆಲೆಯಲ್ಲಿ ಈ ಬೇಡಿಕೆ ಮುಂದಿಟ್ಟಿದ್ದಾರೆ.

ಉತ್ತರಾಖಂಡದ ಸಿಲ್ಕ್ಯಾರಾ ಸುರಂಗ ಮಾರ್ಗದಲ್ಲಿ 39 ಮಂದಿ ಕಾರ್ಮಿಕರು ಸಿಕ್ಕಿಹಾಕಿಕೊಂಡಿದ್ದ ಅವಧಿಯಲ್ಲಿ ಅವರ ರಕ್ಷಣೆಗಾಗಿ ರಂಧ್ರ ಕೊರೆದು ಜೀವರಕ್ಷಣೆ ಮಾಡಿದ ರ್ಯಾಟ್ ಹೋಲ್ ಮೈನರ್ಸ್ ತಂಡದ ನೇತೃತ್ವವನ್ನು ಹಸನ್ ವಹಿಸಿದ್ದರು. ಗುರುವಾರ ಧ್ವಂಸಗೊಂಡ ಮನೆಯ ಮುಂದೆ ಬೀದಿಯಲ್ಲಿ ಮನೆಸಾಮಗ್ರಿಗಳೊಂದಿಗೆ ಹಸನ್ ಕುಟುಂಬ ಕುಳಿತಿದ್ದುದು ಕಂಡುಬಂದಿತ್ತು.

"ನನ್ನನ್ನು ಅಪರಾಧಿಗಳಂತೆ ಪರಿಗಣಿಸಲಾಗಿದೆ. ಅಧಿಕಾರಿಗಳು ಮಕ್ಕಳ ಜತೆಗೆ ದುರ್ವರ್ತನೆ ತೋರಿದ್ದಾರೆ. ಮನೆಯ ಮೇಲೆ ದಾಳಿ ನಡೆಸಿ ಮನೆಯನ್ನು ನೆಲಸಮ ಮಾಡಿದ್ದಾರೆ" ಎಂದು ಹಸನ್ ಅಳಲು ತೋಡಿಕೊಂಡಿದ್ದಾರೆ.

"ಉತ್ತರಾಖಂಡ ರಕ್ಷಣೆ ಕಾರ್ಯಾಚರಣೆಗೆ ಕರೆ ಬಂದಾಗ ಮರುಕ್ಷಣವೂ ಯೋಚಿಸದೇ ತೆರಳಿ ನಾವು ನಮ್ಮ ಜೀವವನ್ನು ಪಣಕ್ಕಿಟ್ಟು ಅವರ ಜೀವರಕ್ಷಣೆ ಮಾಡಿದೆವು. ನನ್ನ ಕಣ್ಣೆದುರೇ ನನ್ನ ಮನೆಯನ್ನು ಧ್ವಂಸಗೊಳಿಸಲಾಯಿತು. ನಾನು ಗಳಿಸಿದ ಗೌರವವೆಲ್ಲ ಛಿದ್ರವಾಯಿತು" ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News