ಎಸ್ಐಆರ್ ನಡೆಸುವುದು ಚುನಾವಣಾ ಆಯೋಗದ ವಿಶೇಷ ಅಧಿಕಾರ : ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್ | Photo Credit : sci.gov.in
ಹೊಸದಿಲ್ಲಿ : ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ನಡೆಸುವುದು ಚುನಾವಣಾ ಆಯೋಗದ ವಿಶೇಷ ಅಧಿಕಾರ. ಅವರಿಗೆ ಯಾವುದೇ ನಿರ್ದೇಶನವನ್ನು ನೀಡುವುದು ಹಸ್ತಕ್ಷೇಪಕ್ಕೆ ಸಮಾನವಾಗಿರುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೋಯ್‌ಮಲ್ಯ ಬಾಗ್ಚಿ ಅವರ ಪೀಠವು, ಎಸ್ಐಆರ್ ನಡೆಸುವುದು ಚುನಾವಣಾ ಆಯೋಗದ ವಿಶೇಷ ಅಧಿಕಾರವಾಗಿದೆ. ನಾವು ಈ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶಿಸಿದರೆ ಹಸ್ತಕ್ಷೇಪವಾಗುತ್ತದೆ ಎಂದು ಹೇಳಿದೆ.
3.66 ಲಕ್ಷ ಮತದಾರರ ಹೆಸರನ್ನು ಡಿಲಿಟ್ ಮಾಡಿರುವ ಬಗ್ಗೆ ಮತ್ತು 21 ಲಕ್ಷ ಮತದಾರರ ಸೇರ್ಪಡೆಗಳ ಬಗ್ಗೆ ದತ್ತಾಂಶವನ್ನು ಸಿದ್ಧಪಡಿಸುವಂತೆ ನ್ಯಾಯಾಲಯ ಚುನಾವಣಾ ಆಯೋಗಕ್ಕೆ ತಿಳಿಸಿದೆ.
ಎಸ್ಐಆರ್ ಪ್ರಕ್ರಿಯೆಯನ್ನು ಪ್ರಶ್ನಿಸಿರುವ ಅರ್ಜಿದಾರರ ಪರ ವಾದ ಮಂಡಿಸಿದ ಕಾಂಗ್ರೆಸ್ ನಾಯಕ ಮತ್ತು ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಮತದಾರರ ಪಟ್ಟಿಯಿಂದ ಹೆಸರು ಅಳಿಸಿರುವ ಬಗ್ಗೆ ಲಕ್ಷಾಂತರ ಜನರಿಗೆ ತಿಳಿಸಲಾಗಿಲ್ಲ ಎಂದು ಹೇಳಿದರು.
"3.66 ಲಕ್ಷ ಜನರ ಹೆಸರು ಅಳಿಸಲ್ಪಟ್ಟಿದ್ದು, ಅವರಿಗೆ ಯಾವುದೇ ಸೂಚನೆ ಬಂದಿಲ್ಲ. ಯಾರಿಗೂ ಯಾವುದೇ ಕಾರಣ ನೀಡಲಾಗಿಲ್ಲ. ಮೇಲ್ಮನವಿ ಸಲ್ಲಿಸಲು ಅವಕಾಶವಿದ್ದರೂ, ಮಾಹಿತಿ ಇಲ್ಲದ ಕಾರಣ ಮೇಲ್ಮನವಿ ಸಲ್ಲಿಸುವ ಪ್ರಶ್ನೆ ಉದ್ಭವಿಸುವುದಿಲ್ಲ" ಎಂದು ಅಭಿಷೇಕ್ ಮನು ಸಿಂಘ್ವಿ ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.