×
Ad

ಏರ್‌ಬಸ್ ಎ320 ವಿಮಾನಗಳಿಗೆ ಸಾಫ್ಟ್‌ವೇರ್ ಸಮಸ್ಯೆ: ಭಾರತದಲ್ಲೂ ವಾರಾಂತ್ಯಕ್ಕೆ ಸೇವೆ ಅಸ್ತವ್ಯಸ್ತ

Update: 2025-11-29 09:10 IST

PC: x.com/aviationbrk

ಹೊಸದಿಲ್ಲಿ: ವಿಶ್ವದ ಅತಿದೊಡ್ಡ ವಿಮಾನ ಮಾರಾಟ ಕಂಪನಿಯಾದ ಏರ್‌ಬಸ್ ತನ್ನ ಎ320 ವಿಮಾನಗಳನ್ನು ವಾರಾಂತ್ಯದಲ್ಲಿ ಸಾಫ್ಟ್‌ವೇರ್ ಮೇಲ್ದರ್ಜೆಗೇರಿಸುವ ಸಲುವಾಗಿ ಸ್ಥಗಿತಗೊಳಿಸಲು ಸೂಚಿಸಿರುವ ಹಿನ್ನೆಲೆಯಲ್ಲಿ ಭಾರತ ಸೇರಿದಂತೆ ಜಾಗತಿಕವಾಗಿ ವಿಮಾನಯಾನ ಸೇವೆ ಅಸ್ತವ್ಯಸ್ತಗೊಳ್ಳುವ ಸಾಧ್ಯತೆ ಇದೆ. ಭಾರತದಲ್ಲಿ ಕೂಡಾ ಏರ್‌ಇಂಡಿಯಾ ಮತ್ತು ಇಂಡಿಗೋ ಕಾರ್ಯಾಚರಣೆ ಮಾಡುತ್ತಿರುವ ಈ ವರ್ಗಕ್ಕೆ ಸೇರಿದ 350 ವಿಮಾನಗಳಿದ್ದು, 2-3 ದಿನಗಳ ಕಾಲ ಸಾಫ್ಟ್‌ವೇರ್ ಮೇಲ್ದರ್ಜೆಗೇರಿಸುವ ಕಾರ್ಯ ನಡೆಯಲಿದೆ. ಇದರಿಂದ ಸೇವೆ ಪುನರಾರಂಭವಾಗುವ ಸೋಮವಾರ ಅಥವಾ ಮಂಗಳವಾರದವರೆಗೂ ವಿಮಾನ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಳ್ಳಲಿದೆ. ಜಾಗತಿಕವಾಗಿ ಸುಮಾರು 6000 ವಿಮಾನಗಳ ಮೇಲೆ ಇದರ ಪರಿಣಾಮ ಉಂಟಾಗಲಿದೆ.

ಅಮೆರಿಕದ ಕಡಿಮೆ ವೆಚ್ಚದ ವಿಮಾನಯಾನ ಸಂಸ್ಥೆ ಜೆಟ್‌ಬ್ಲೂ ಗೆ ಸೇರಿದ, ಕ್ಯಾನ್‌ಕುನ್‌ನಿಂದ  ನೆವಾರ್ಕ್ ಗೆ ಕಾರ್ಯಾಚರಿಸುತ್ತಿದ್ದ ಎ320 ವಿಮಾನ ಅಕ್ಟೋಬರ್ 30ರಂದು ಅನಿರೀಕ್ಷಿತವಾಗಿ ಪೈಲಟ್ ಸೂಚನೆ ಇಲ್ಲದೇ ಕೆಳಮುಖವಾಗಿ ಸಂಚರಿಸುವ ಸಮಸ್ಯೆ ಎದುರಿಸಿದ ಹಿನ್ನೆಲೆಯಲ್ಲಿ ಈ ಸಾಫ್ಟ್ವೇರ್ ಅಪ್ಡೇಟ್ ಗೆ ನಿರ್ಧರಿಸಲಾಗಿದೆ. ಈ ಅನಿಯಂತ್ರಿತ ಕೆಳಮುಖ ಚಲನೆ ಇಎಲ್ಎಸಿ ಸ್ವಿಚ್ ಬದಲಾವಣೆ ವೇಳೆ ಸಂಭವಿಸಿತು ಎಂದು ರಾಷ್ಟ್ರೀಯ ಸಾರಿಗೆ ಸುರಕ್ಷಾ ಮಂಡಳಿ ಹೇಳಿತ್ತು. ತಕ್ಷಣ ವಿಮಾನವನ್ನು ತಂಪಾ ಎಂಬಲ್ಲಿಗೆ ಪಥ ಬದಲಿಸಲಾಗಿತ್ತು. ಈ ವೇಳೆ ಕೆಲ ಪ್ರಯಾಣಿಕರು ಅಸ್ವಸ್ಥರಾಗಿದ್ದರು.

ಈ ಸಮಸ್ಯೆ ನಿಭಾಯಿಸಲು ಸಾಫ್ಟ್‌ವೇರ್ ಮೇಲ್ದರ್ಜೆಗೇರಿಸುವ ಅಗತ್ಯವಿದೆ. ಹೊಸ ಎ320 ವರ್ಗದ ಪ್ರತಿ ವಿಮಾನಗಳಿಗೆ ಈ ಕೆಲಸಕ್ಕೆ ಲೋಡಿಂಗ್ ಸೌಲಭ್ಯದ ಮೂಲಕ ಸುಮಾರು ಅರ್ಧ ಗಂಟೆ ಸಮಯ ಬೇಕಾಗುತ್ತದೆ. ಹಳೆಯ ಎ320 ವಿಮಾನಗಳಿಗೆ ಕೆಲ ಹಾರ್ಡ್‌ವೇರ್ ಅಪ್‌ಗ್ರೇಡ್ ಕೂಡಾ ಅಗತ್ಯವಿದ್ದು, ಒಟ್ಟಾರೆ ಹೆಚ್ಚಿನ ಅವಧಿ ತೆಗೆದುಕೊಳ್ಳಲಿದೆ.

ಯೂರೋಪಿಯನ್ ಯೂನಿಯನ್ ಏವಿಯೇಶನ್ ಸೇಫ್ಟಿ ಏಜೆನ್ಸಿ ಈ ಸಂಬಂಧ ತುರ್ತು ವೈಮಾನಿಕ ಸೂಚನೆಗಳನ್ನು ಬಿಡುಗಡೆ ಮಾಡಿದ್ದು, ವಿಮಾನಗಳ ವೇಳಾಪಟ್ಟಿಯಲ್ಲಿ ವ್ಯತ್ಯಯವಾಗಲಿದೆ ಹಾಗೂ ಪ್ರಯಾಣಿಕರಿಗೆ ಅನಾನುಕೂಲವಾಗಲಿದೆ ಎಂದು ಹೇಳಿದೆ. ವಿಮಾನಯಾನದಲ್ಲಿ ಸುರಕ್ಷತೆಗೆ ಪ್ರಾಧಾನ್ಯವಾಗಿರುವುದರಿಂದ ಇದು ಅನಿವಾರ್ಯ ಎಂದು ಹೇಳಿದೆ.

ಭಾರತದಲ್ಲಿ ಎಲ್ಲ ಇಂಡಿಗೊ ಎ320 ವಿಮಾನಗಳು ಹೊಸ ವಿಮಾನಗಳಾಗಿವೆ. ಹಳೆಯ ಎ320 ವಿಮಾನಗಳು ಬೆರಳೆಣಿಕೆಯಷ್ಟಿವೆ. ಆದ್ದರಿಂದ 250 ವಿಮಾನಗಳ ಸಾಫ್ಟ್‌ವೇರ್ ಅಪ್‌ಗ್ರೇಡ್ ಸೋಮವಾರ ಅಥವಾ ಮಂಗಳವಾರ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಏರ್‌ಇಂಡಿಯಾದ ಸುಮಾರ 120 ವಿಮಾನಗಳಿಗೂ ಇದೇ ಪರಿಸ್ಥಿತಿ ಇದ್ದು, 100ಕ್ಕೂ ಹೆಚ್ಚು ವಿಮಾನಗಳ ಮೇಲೆ ಪರಿಣಾಮವಾಗಲಿದೆ ಎಂದು ಹೇಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News