ವಿದೇಶ ಪ್ರವಾಸಗಳಲ್ಲಿ ಕೆಲವು ಕ್ರಿಕೆಟಿಗರು ದುಶ್ಚಟಗಳಲ್ಲಿ ತೊಡಗುತ್ತಾರೆ: ರವೀಂದ್ರ ಜಡೇಜಾ ಪತ್ನಿ ರಿವಾಬಾ ವಿವಾದಾತ್ಮಕ ಹೇಳಿಕೆ
credit: timesofindia
ಅಹಮದಾಬಾದ್: ಭಾರತೀಯ ಕ್ರಿಕೆಟ್ ತಂಡದ ಹಿರಿಯ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರ ಪತ್ನಿ ಹಾಗೂ ಗುಜರಾತ್ ಶಿಕ್ಷಣ ಸಚಿವೆ ರಿವಾಬಾ ಜಡೇಜಾ, ವಿದೇಶ ಪ್ರವಾಸಗಳ ವೇಳೆ ಕೆಲವು ಕ್ರಿಕೆಟಿಗರು ದುಶ್ಚಟಗಳಲ್ಲಿ ತೊಡಗುತ್ತಾರೆ ಎಂದು ಹೇಳಿರುವುದು ಚರ್ಚೆಗೆ ಗ್ರಾಸವಾಗಿದೆ. ಆದರೆ, ತಮ್ಮ ಪತಿ ಮಾತ್ರ ಇಂತಹ ಯಾವುದೇ ಅಭ್ಯಾಸಗಳಲ್ಲಿ ತೊಡಗಿಕೊಳ್ಳುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಗುಜರಾತಿ ಭಾಷೆಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಿವಾಬಾ, ಆಟಗಾರರ ವೈಯಕ್ತಿಕ ನಡವಳಿಕೆಯನ್ನು ಉಲ್ಲೇಖಿಸಿ, “ಕ್ರಿಕೆಟಿಗರು ಸಾರ್ವಜನಿಕ ದೃಷ್ಟಿಯಿಂದ ದೂರ ಇರುವಾಗ ಏನನ್ನಾದರೂ ಮಾಡಲು ಆಯ್ಕೆ ಮಾಡುತ್ತಾರೆ. ಆದರೆ ನನ್ನ ಪತಿ ತನ್ನ ಜವಾಬ್ದಾರಿಯನ್ನು ಅರಿತಿರುವ ವ್ಯಕ್ತಿ. ಅವರ ಸುತ್ತಲಿನ ವಾತಾವರಣ ಬೇರೆ ರೀತಿಯದ್ದಾಗಿದ್ದರೂ, ಅವರು ಎಂದಿಗೂ ದುಶ್ಚಟಗಳತ್ತ ಮುಖಮಾಡಿಲ್ಲ,” ಎಂದು ಹೇಳಿರುವುದು ವಿಡಿಯೋದಲ್ಲಿದೆ.
ಲಂಡನ್, ದುಬೈ, ಆಸ್ಟ್ರೇಲಿಯಾ ಮುಂತಾದ ದೇಶಗಳಿಗೆ ಕ್ರಿಕೆಟ್ ಆಡಲು ಜಡೇಜಾ ಆಗಾಗ್ಗೆ ತೆರಳುವ ವಿಚಾರವನ್ನು ಪ್ರಸ್ತಾಪಿಸಿದ ಅವರು, “ಉಳಿದ ಹಲವರು ದುಶ್ಚಟಗಳಲ್ಲಿ ತೊಡಗಿದರೂ, ಅವರ ಕುಟುಂಬಗಳಿಂದ ಯಾವುದೇ ನಿರ್ಬಂಧವಿಲ್ಲ. ಆದರೆ ಜಡೇಜಾ ಎಂದಿಗೂ ಇಂತಹ ನಡವಳಿಕೆ ತೋರಿಲ್ಲ,” ಎಂದು ಅವರು ಮತ್ತೊಮ್ಮೆ ಪುನರುಚ್ಚರಿಸಿದರು.
ರಿವಾಬಾ ಅವರ ಈ ಹೇಳಿಕೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ರವೀಂದ್ರ ಜಡೇಜಾ ಭಾರತದ ಟೆಸ್ಟ್ ತಂಡದ ಪ್ರಮುಖ ಆಟಗಾರರಾಗಿದ್ದು, 2026ರ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗೆ ವಿದಾಯ ಹೇಳಿ ರಾಜಸ್ಥಾನ್ ರಾಯಲ್ಸ್ ಪರ ಅವರು ಆಡಲಿದ್ದಾರೆ. ಟಿ20 ವಿಶ್ವಕಪ್ ಜಯದ ನಂತರ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಜೊತೆಗೂಡಿ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಪಡೆದ ಜಡೇಜಾ ಇತ್ತೀಚೆಗಷ್ಟೇ 37ನೇ ಹುಟ್ಟುಹಬ್ಬ ಆಚರಿಸಿದ್ದರು.