×
Ad

ಕಾಲ್ತುಳಿತ ಪ್ರಕರಣ: ನಟ ಅಲ್ಲು ಅರ್ಜುನ್ ಜೈಲಿನಿಂದ ಬಿಡುಗಡೆ

Update: 2024-12-14 07:56 IST

PC: x.com/ndtv

ಹೈದರಾಬಾದ್: ಪುಷ್ಪ-2 ಚಿತ್ರ ಬಿಡುಗಡೆ ವೇಲೆ ಸಂಧ್ಯಾ ಥಿಯೇಟರ್ ಮುಂದೆ ನಡೆದ ಕಾಲ್ತುಳಿತದಲ್ಲಿ ಅಭಿಮಾನಿಯೊಬ್ಬ ಮೃತಪಟ್ಟ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದ ಖ್ಯಾತ ನಟ ಅಲ್ಲು ಅರ್ಜುನ್ ಗೆ ಹೈದರಾಬಾದ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಇದಾದ ಕೆಲವೇ ಗಂಟೆಗಳಲ್ಲಿ ಅಂದರೆ ಶನಿವಾರ ಬೆಳಿಗ್ಗೆ ಅಲ್ಲು ಅರ್ಜುನ್ ಅವರನ್ನು ಶನಿವಾರ ಮುಂಜಾನೆ ಹೈದರಾಬಾದ್ ಸೆಂಟ್ರಲ್ ಜೈಲಿನಿಂದ ಬಿಡುಗಡೆ ಮಾಡಲಾಯಿತು.

ಬಿಡುಗಡೆ ಬೆನ್ನಲ್ಲೇ ಅವರ ನಿವಾಸದ ಮುಂದೆ ಬಿಗಿ ಬಂದೋಬಸ್ತ್ ವ್ಯವಸ್ಥೆಗೊಳಿಸಲಾಗಿದೆ. 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ ಬಳಿಕ ಶುಕ್ರವಾರ ಅವರನ್ನು ಚಂಚಲ್‌ಗುಡಾ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ಯಲಾಗಿತ್ತು. ಆ ಬಳಿಕ 50 ಸಾವಿರ ರೂಪಾಯಿ ವೈಯಕ್ತಿಕ ಬಾಂಡ್ ಆಧಾರದಲ್ಲಿ ಅವರಿಗೆ ಮಧ್ಯಂತರ ಜಾಮೀನನ್ನು ಕೋರ್ಟ್ ಮಂಜೂರು ಮಾಡಿತ್ತು. ಖ್ಯಾತ ನಟನ ಮಾವ ಕಂಚರ್ಲ ಚಂದ್ರಶೇಖರ ರೆಡ್ಡಿ, ಅಲ್ಲು ಅರ್ಜುನ್ ಅವರನ್ನು ಮನೆಗೆ ಕರೆದೊಯ್ಯಲು ಜೈಲಿಗೆ ಆಗಮಿಸಿದರು.

ಇದಕ್ಕೂ ಮುನ್ನ ನ್ಯಾಯಾಲಯ ನೀಡಿದ ಜಾಮೀನು ಆದೇಶವನ್ನು ಜೈಲು ಅಧಿಕಾರಿಗಳು ಪಾಲಿಸುತ್ತಿಲ್ಲ ಎಂದು ಅರ್ಜುನ್ ಪರ ವಕೀಲ ಅಶೋಕ್ ರೆಡ್ಡಿ ಟೀಕಿಸಿದ್ದರು. "ಹೈಕೋರ್ಟ್ ಆದೇಶದ ಪ್ರತಿಯಲ್ಲಿ ಅರ್ಜುನ್ ಅವರನ್ನು ಬಿಡುಗಡೆ ಮಾಡುವಂತೆ ಜೈಲು ಅಧೀಕ್ಷರಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದ್ದು, ಅಧೀಕ್ಷಕರು ಕೂಡಾ ಬಿಡುಗಡೆಗೆ ಸೂಚಿಸಿದ್ದರು. ಆದರೂ ಜೈಲಿನ ಅಧಿಕಾರಿಗಳು ಬಿಡುಗಡೆ ಮಾಡುತ್ತಿಲ್ಲ" ಎಂದು ವಕೀಲರು ಹೇಳಿಕೆ ನೀಡಿದ್ದರು.

ಡಿಸೆಂಬರ್ 4ರಂದು ಚಿತ್ರ ಪ್ರದರ್ಶನ ನಡೆಯುತ್ತಿದ್ದ ಸಂಧ್ಯಾ ಥಿಯೇಟರ್ ಗೆ ಅಲ್ಲು ಅರ್ಜುನ್ ಹಾಗೂ ಪುಷ್ಪ-2 ತಂಡ ಆಗಮಿಸಿದ್ದರು. ನಟನನ್ನು ನೋಡಲು ದೊಡ್ಡ ಸಂಖ್ಯೆಯ ಅಭಿಮಾನಿಗಳು ಸೇರಿದ್ದರು. ಈ ವೇಳೆ 35 ವರ್ಷದ ಮಹಿಳೆಯೊಬ್ಬರು ಕಾಲ್ತುಳಿತದಿಂದ ಮೃತಪಟ್ಟಿದ್ದು, ಆಕೆಯ ಮಗ ಗಾಯಗೊಂಡಿದ್ದ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News