×
Ad

ಜಿಎಸ್‍ಟಿ ಸುಧಾರಣೆ | ರಾಜ್ಯಗಳ ಆದಾಯ ನಷ್ಟಕ್ಕೆ ಪರಿಹಾರ ಅಗತ್ಯ : ಪಿ.ಚಿದಂಬರಂ

Update: 2025-09-05 07:25 IST

ಪಿ.ಚಿದಂಬರಂ | PTI

ಹೊಸದಿಲ್ಲಿ: ಸರಕು ಮತ್ತು ಸೇವಾ ತೆರಿಗೆಯ ಸುಧಾರಣೆ ಸ್ವಾಗತಾರ್ಹ ನಡೆ. ಆದರೆ ಇದು ಎಂಟು ವರ್ಷ ವಿಳಂಬವಾಗಿದೆ. ಈ ವರ್ಷಗಳಲ್ಲಿ ಇದು ಆರ್ಥಿಕತೆ ಹಾಗೂ ಜನರ ಮೇಲೆ ಹೊರೆಯಾಗಿದೆ. ಸರ್ಕಾರಕ್ಕೆ ಈಗ ವಾಸ್ತವ ಮನವರಿಕೆಯಾಗಿದೆ. ಆದರೆ ಜಿಎಸ್‍ಟಿ ಸುಧಾರಣೆಯಿಂದ ರಾಜ್ಯಗಳಿಗೆ ಆಗುವ ಆದಾಯ ನಷ್ಟವನ್ನು ಭರ್ತಿ ಮಾಡಬೇಕಾದ ಅಗತ್ಯವಿದ್ದು, ಸರ್ಕಾರ ಈ ವಿಷಯವನ್ನು ಬಗೆಹರಿಸಲಿದೆ ಎಂಬ ವಿಶ್ವಾಸವನ್ನು ಮಾಜಿ ಹಣಕಾಸು ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಪ್ರತಿಕ್ರಿಯಿಸಿದ್ದಾರೆ.

ಜಿಎಸ್‍ಟಿಯನ್ನು ಹೆಚ್ಚು ತಾರ್ಕಿಕಗೊಳಿಸುವ ನಿಟ್ಟಿನಲ್ಲಿ ಹಾಲಿ ಜಾರಿಯಲ್ಲಿದ್ದ ನಾಲ್ಕು ಸ್ತರಗಳ ಬದಲು ಶೇ.5 ಹಾಗೂ ಶೇ.18ರ ಎರಡು ಸ್ತರಗಳನ್ನು ನಿನ್ನೆ ಘೋಷಿಸಲಾಗಿತ್ತು. ಆಹಾರ, ಔಷಧ, ಅಗತ್ಯ ವಸ್ತುಗಳು, ಕೃಷಿ ಸಲಕರಣೆಗಳು, ಹಸಿರು ಇಂಧನ, ಸಣ್ಣ ಕಾರು ಹಾಗೂ ಬೈಕ್‍ಗಳ ಮೇಲಿನ ತೆರಿಗೆಯನ್ನು ಅತ್ಯಂತ ಕಡಿಮೆ ತೆರಿಗೆ ವರ್ಗಕ್ಕೆ ತರಲಾಗಿದೆ. ವೈದ್ಯಕೀಯ ವಿಮೆ, ಜೀವರಕ್ಷಕ ಔಷಧಿಗಳು, ಹೈನು ಉತ್ಪನ್ನಗಳು ಸೇರಿದಂತೆ ಆಹಾರ ಪದಾರ್ಥಗಳು ತೆರಿಗೆ ಮುಕ್ತವಾಗಿವೆ.

ಇದನ್ನು ದೀಪಾವಳಿ ಕೊಡುಗೆ ಎಂದು ಸರ್ಕಾರ ಬಣ್ಣಿಸಿರುವುದನ್ನು ಅಲ್ಲಗಳೆದ ಚಿದಂಬರಂ ಅವರು, "ಇದು ದೀಪಾವಳಿ ಕೊಡುಗೆಯಲ್ಲ, ಉದ್ಯಮಕ್ಕೆ, ಗ್ರಾಹಕರಿಗೆ ವಿಶೇಷವಾಗಿ ಎಂಎಸ್‍ಎಂಇಗಳಿಗೆ ದೊಡ್ಡ ಹೊಡೆತ. ತಮಗೆ ತೀರಾ ದೊಡ್ಡ ಹೊಡೆತ ಬಿದ್ದಿದೆ ಎನ್ನುವುದು ಅವರಿಗೆ ಮನವರಿಕೆಯಾಗಿದೆ. ಇದಕ್ಕಾಗಿ ಅವರು ಪರಿತಾಪಪಡುತ್ತಿದ್ದಾರೆ" ಎಂದು ಹೇಳಿದರು.

ಎನ್‍ಡಿಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ, "ಇದು ಉತ್ತಮ ಮತ್ತು ಸರಳ ತೆರಿಗೆಯಾಗಬೇಕು ಎಂದು ನಾನು ಹೇಳಿದ್ದೆ. ಅಂತಿಮವಾಗಿ ಸರ್ಕಾರಕ್ಕೆ ಜ್ಞಾನೋದಯವಾಗಿದೆ ಮತ್ತು ತಾರ್ಕಿಕಗೊಳಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ. ಈ ಘೋಷಣೆಯನ್ನು ನಾನು ಸ್ವಾಗತಿಸುತ್ತೇನೆ. ಆದರೆ ಇದು ಎಂಟು ವರ್ಷ ವಿಳಂಬವಾಗಿದೆ ಎಂದೂ ಹೇಳಲು ಬಯಸುತ್ತೇನೆ" ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News