×
Ad

ಪ್ರತಿ ನಿತ್ಯ ಲೈಂಗಿಕ ದೌರ್ಜನ್ಯದ ಭೀತಿಯಲ್ಲೇ ದಿನದೂಡುತ್ತಿರುವ ಸುಡಾನ್ ನ ಮಹಿಳೆಯರು: ವರದಿ

Update: 2025-05-28 20:21 IST

PC : unicef.org

ಪೋರ್ಟ್ ಸುಡಾನ್: ಲೈಂಗಿಕ ದೌರ್ಜನ್ಯವು ಸುಡಾನ್ ನ ಪಶ್ಚಿಮ ಪ್ರಾಂತ್ಯವಾದ ಡಾರ್ಫುರ್ ನ ಮಹಿಳೆಯರು ಹಾಗೂ ಬಾಲಕಿಯರ ಪಾಲಿಗೆ ಬಹುತೇಕ ದಿನ ನಿತ್ಯದ ಅಪಾಯವಾಗಿದೆ ಎಂದು ಬುಧವಾರ Doctors without Borders (MSF) ಎಚ್ಚರಿಸಿದ್ದು, ಈ ಪ್ರಾಂತ್ಯದ ನಾಗರಿಕರನ್ನು ರಕ್ಷಿಸಲು ಹಾಗೂ ಸಂತ್ರಸ್ತರಿಗೆ ನೆರವು ನೀಡಲು ತುರ್ತು ಕ್ರಮ ಕೈಗೊಳ್ಳಬೇಕಿದೆ ಎಂದು ಕರೆ ನೀಡಿದೆ ಎಂದು AFP ಸುದ್ದಿ ಸಂಸ್ಥೆ ವರದಿ ಮಾಡಿದೆ.

MSF ತುರ್ತು ಸಮನ್ವಯಕಾರ್ತಿ ಕ್ಲೇರ್ ಸ್ಯಾನ್ ಫಿಲಿಪ್ಪೊ ಪ್ರಕಾರ, “ಎಪ್ರಿಲ್ 2023ರಿಂದ ಸುಡಾನ್ ನ ನಿಯಮಿತ ಸೇನೆ ಹಾಗೂ ಕ್ಷಿಪ್ರ ನೆರವು ಪಡೆಗಳ ನಡುವೆ ಯುದ್ಧ ಪ್ರಾರಂಭಗೊಂಡಾಗಿನಿಂದ, ಡಾರ್ಫುರ್ ನಲ್ಲಿ ವರದಿಯಾಗಿರುವ ದಾಳಿಗಳು ಹೀನ ಹಾಗೂ ಭಯಾನಕವಾಗಿದ್ದು, ಈ ದಾಳಿಗಳಲ್ಲಿ ಪದೇ ಪದೇ ವಿವಿಧ ಅಪರಾಧ ಹಿನ್ನೆಲೆಯ ವ್ಯಕ್ತಿಗಳು ಭಾಗಿಯಾಗುತ್ತಿದ್ದಾರೆ” ಎಂದು ಹೇಳಿದ್ದಾರೆ.

ಈ ಯುದ್ಧದಲ್ಲಿ ಸಹಸ್ರಾರು ಮಂದಿ ಮೃತಪಟ್ಟಿದ್ದು, ಸುಮಾರು 1.3 ಕೋಟಿ ಜನರನ್ನು ನಿರಾಶ್ರಿತರಾಗಿದ್ದಾರೆ. ಈಗಾಗಲೇ ಟೊಳ್ಳಾಗಿರುವ ಸುಡಾನ್ ನ ಮೂಲಭೂತ ಸೌಕರ್ಯಗಳು ಮತ್ತಷ್ಟು ಹಾನಿಗೀಡಾಗಿವೆ.

ದೇಶದಲ್ಲಿ ಯುದ್ಧ ಪ್ರಾರಂಭಗೊಂಡಾಗಿನಿಂದ ದೇಶಾದ್ಯಂತ ವ್ಯವಸ್ಥಿತ ಲೈಂಗಿಕ ದೌರ್ಜನ್ಯವನ್ನು ಎಸಗುತ್ತಿರುವ ಆರೋಪಕ್ಕೆ ಕ್ಷಿಪ್ರ ನೆರವು ಪಡೆ ಗುರಿಯಾಗಿದೆ.

“ಸುಡಾನ್ ನ ಯಾವುದೇ ಭಾಗದಲ್ಲೂ ಮಹಿಳೆಯರು ಮತ್ತು ಬಾಲಕಿಯರಿಗೆ ಸುರಕ್ಷಿತ ಎಂದು ನಿಟ್ಟಿಸಿರುವ ಬಿಡುವ ಹಾಗಿಲ್ಲ” ಎಂದು MSF ತಂಡಗಳು ಡಾರ್ಫುರ್ ಹಾಗೂ ನೆರೆಯ ಚಾಡ್ ನಿಂದ ಸಂತ್ರಸ್ತರ ಗಾಬರಿ ಹುಟ್ಟಿಸುವ ಅಂಕಿ ಸಂಖ್ಯೆಗಳನ್ನು ಕಲೆ ಹಾಕಿದ ನಂತರ, ಸ್ಯಾನ್ ಫಿಲಿಪ್ಪೊ ಕಳವಳ ವ್ಯಕ್ತಪಡಿಸಿದ್ದಾರೆ.

“ಅವರು ಹಿಂಸಾಚಾರದಿಂದ ಪರಾರಿಯಾಗುವಾಗ, ಆಹಾರವನ್ನು ಸ್ವೀಕರಿಸುವಾಗ, ಸೌದೆಯನ್ನು ಸಂಗ್ರಹಿಸುವಾಗ, ಹೊಲಗಳಲ್ಲಿ ಕೆಲಸ ಮಾಡುವಾಗ ಹಾಗೂ ಅವರ ಸ್ವಂತ ಮನೆಗಳಲ್ಲಿರುವಾಗಲೇ ಅವರ ಮೇಲೆ ಲೈಂಗಿಕ ದೌರ್ಜನ್ಯಗಳನ್ನು ಎಸಗಲಾಗುತ್ತಿದೆ” ಎಂದೂ ಅವರು ಹೇಳಿದ್ದಾರೆ. “ಜನವರಿ 2024ರಿಂದ ಮಾರ್ಚ್ 2025ರವರೆಗೆ ದಕ್ಷಿಣ ಡಾರ್ಫುರ್ ಹಿಂಸಾಚಾರದ 659 ಸಂತ್ರಸ್ತರಿಗೆ ತಾನು ಚಿಕಿತ್ಸೆ ನೀಡಿದ್ದು, ಈ ಪೈಕಿ ಶೇ. 94ರಷ್ಟು ಮಂದಿ ಮಹಿಳೆಯರು ಮತ್ತು ಬಾಲಕಿಯರೇ ಆಗಿದ್ದಾರೆ” ಎಂದು MSF ಹೇಳಿದೆ.

ಈ ಲೈಂಗಿಕ ದೌರ್ಜನ್ಯಗಳ ಪೈಕಿ ಅರ್ಧಕ್ಕಿಂತ ಹೆಚ್ಚು ಲೈಂಗಿಕ ದೌರ್ಜನ್ಯಗಳನ್ನು ಸಶಸ್ತ್ರಧಾರಿಗಳು ನಡೆಸಿದ್ದು, ಈ ಲೈಂಗಿಕ ದೌರ್ಜನ್ಯಗಳಿಗೆ ಗುರಿಯಾಗಿರುವ ಮೂವರ ಪೈಕಿ ಒಬ್ಬರು ಅಪ್ರಾಪ್ತೆಯರಾಗಿದ್ದಾರೆ. ಇನ್ನೂ ಆಘಾತಕಾರಿ ಸಂಗತಿಯೆಂದರೆ, ಇಂತಹ ಕೆಲವು ಸಂತ್ರಸ್ತ ಬಾಲಕಿಯರು ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ ಎಂದು MSF ಬಹಿರಂಗಪಡಿಸಿದೆ.

MSF ತುರ್ತು ವೈದ್ಯಕೀಯ ವ್ಯವಸ್ಥಾಪಕಿ ರುತ್ ಕಾಫ್ಮನ್ ಪ್ರಕಾರ, “ಲೈಂಗಿಕ ದೌರ್ಜನ್ಯ ಸಂತ್ರಸ್ತೆಯರಿಗೆ ಸೇವೆ ಒದಗಿಸಲು ಪ್ರವೇಶದ ಕೊರತೆ ಇದ್ದು, ಸುಡಾನ್ ನಲ್ಲಿರುವ ಬಹುತೇಕ ಮಾನವೀಯ ಹಾಗೂ ಆರೋಗ್ಯ ಆರೈಕೆ ಸೇವೆಗಳು ತುರ್ತಾಗಿ ಚುರುಕಾಗಬೇಕಿದೆ” ಎಂದು ಕರೆ ನೀಡಿದ್ದಾರೆ.

“ಲೈಂಗಿಕ ದೌರ್ಜನ್ಯಕ್ಕೀಡಾಗುವ ಬಹುತೇಕ ಮಹಿಳೆಯರು ಹಾಗೂ ಬಾಲಕಿಯರಿಗೆ ಮಾನಸಿಕ ಬೆಂಬಲ ಹಾಗೂ ರಕ್ಷಣಾ ಸೇವೆಯಂತಹ ತರ್ತು ವೈದ್ಯಕೀಯ ಆರೈಕೆಯ ಅಗತ್ಯವಿದೆ” ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

ಸೌಜನ್ಯ: arabnews.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News