×
Ad

ಸುಪ್ರೀಂ ಕೋರ್ಟ್‌ನಲ್ಲಿ ಶೂ ಎಸೆದ ಘಟನೆ | “ಇದರಿಂದ ನನ್ನ ಮೇಲೆ ಯಾವುದೇ ಪರಿಣಾಮವಾಗುವುದಿಲ್ಲ”: ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ

Update: 2025-10-06 17:02 IST

ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ | Photo Credit : PTI

ಹೊಸದಿಲ್ಲಿ: ಸುಪ್ರೀಂ ಕೋರ್ಟ್‌ನಲ್ಲಿ ಸೋಮವಾರ ಬೆಳಿಗ್ಗೆ ನಡೆದ ಘಟನೆ ದೇಶದ ನ್ಯಾಯಾಂಗ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ವಿಚಾರಣೆ ನಡೆಯುತ್ತಿದ್ದ ವೇಳೆ ಒಬ್ಬ ವಕೀಲ ತಮ್ಮ ಕಾಲಿನಿಂದ ಶೂ ಕಳಚಿ ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರನ್ನು ಗುರಿಯಾಗಿಸಿ ಎಸೆಯಲು ಯತ್ನಿಸಿದ ಘಟನೆ ಆಘಾತ ಮೂಡಿಸಿದೆ.

ತಕ್ಷಣವೇ ಭದ್ರತಾ ಸಿಬ್ಬಂದಿ ಮಧ್ಯಪ್ರವೇಶಿಸಿ ವಕೀಲನನ್ನು ತಡೆದು ಕೋರ್ಟ್‌ನಿಂದ ಹೊರಗೆ ಕಳುಹಿಸಿದರು. ಘಟನೆಯ ಸಮಯದಲ್ಲಿ ಸಿಜೆಐ ಗವಾಯಿ ಸಂಪೂರ್ಣ ಶಾಂತತೆ ಕಾಪಾಡಿಕೊಂಡು, ವಿಚಾರಣೆಯನ್ನು ಮುಂದುವರಿಸಲು ವಕೀಲರಿಗೆ ಸೂಚಿಸಿದರು.

ಘಟನೆಯ ನಂತರ ಗವಾಯಿ ಪ್ರತಿಕ್ರಿಯೆ ನೀಡುತ್ತಾ, “ಇಂತಹ ಘಟನೆಗಳಿಂದ ನಾನು ವಿಚಲಿತನಾಗುವುದಿಲ್ಲ. ಇದರಿಂದ ನನಗೆ ಯಾವುದೇ ಪರಿಣಾಮವಿಲ್ಲ,” ಎಂದು ಹೇಳಿದರು.

ಕೋರ್ಟ್‌ನಿಂದ ಹೊರಬರುವಾಗ ಆ ವಕೀಲ “ಸನಾತನ ಧರ್ಮಕ್ಕೆ ಅವಮಾನ ಸಹಿಸಲಾಗುವುದಿಲ್ಲ” ಎಂದು ಕೂಗಿದ ಎಂದು ವರದಿಯಾಗಿದೆ.

Barandbench ವರದಿ ಪ್ರಕಾರ, ಖಜುರಾಹೋದಲ್ಲಿನ 7 ಅಡಿ ಎತ್ತರದ ವಿಷ್ಣುವಿನ ಶಿರಚ್ಛೇದಿತ ವಿಗ್ರಹದ ಪುನಃಸ್ಥಾಪನೆಗೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸುವ ವೇಳೆ ಸಿಜೆಐ ಗವಾಯಿ ನೀಡಿದ ಹಾಸ್ಯಪ್ರಾಯ ಟಿಪ್ಪಣಿ ಈ ಘಟನೆಯ ಹಿನ್ನೆಲೆಯಾಗಿರಬಹುದು. ಆಗ ಅವರು “ಹೋಗಿ ದೇವರನ್ನೇ ಏನಾದರೂ ಮಾಡಲು ಕೇಳಿ,” ಎಂದು ಹೇಳಿದ್ದರು. ಈ ಹೇಳಿಕೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಟೀಕೆಗೆ ಗುರಿಯಾಯಿತು.

ನಂತರ ಸ್ಪಷ್ಟನೆ ನೀಡಿದ ಗವಾಯಿ, “ನಾನು ಎಲ್ಲ ಧರ್ಮಗಳನ್ನು ಸಮಾನವಾಗಿ ಗೌರವಿಸುತ್ತೇನೆ. ನನ್ನ ಹೇಳಿಕೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ತಪ್ಪಾಗಿ ಚಿತ್ರಿಸಲಾಗಿದೆ,” ಎಂದು ಹೇಳಿದ್ದಾರೆ.

ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಈ ಕುರಿತು ಪ್ರತಿಕ್ರಿಯೆ ನೀಡುತ್ತಾ, “ಪ್ರತಿ ಘಟನೆಗೂ ಸಾಮಾಜಿಕ ಮಾಧ್ಯಮದಲ್ಲಿ ಅತಿರೇಕದ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ,” ಎಂದು ಹೇಳಿದ್ದಾರೆ.

ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಅವರು ಘಟನೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ, “ಆ ವಕೀಲರ ಹೆಸರನ್ನು ಬಹಿರಂಗಪಡಿಸಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ನ್ಯಾಯಾಂಗದ ಮೇಲಿನ ಸೈದ್ಧಾಂತಿಕ ದಾಳಿಗಳನ್ನು ತಡೆಯಲು ಸುಪ್ರೀಂ ಕೋರ್ಟ್‌ನ ಎಲ್ಲ ನ್ಯಾಯಾಧೀಶರು ಒಗ್ಗಟ್ಟಿನ ಹೇಳಿಕೆ ನೀಡಬೇಕು,” ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News