ಏಕೈಕ ಅಭ್ಯರ್ಥಿ ಕಣದಲ್ಲಿದ್ದರೂ ಮತದಾರರಿಗೆ ನೋಟಾ ಚಲಾವಣೆ ಸಾಧ್ಯತೆ ಬಗ್ಗೆ ಸುಪ್ರೀಂ ಪರಿಶೀಲನೆ
ಹೊಸದಿಲ್ಲಿ: ಏಕೈಕ ಅಭ್ಯರ್ಥಿ ಚುನಾವಣಾ ಕಣದಲ್ಲಿದ್ದರೂ ಮತದಾರರಿಗೆ ನನ್ ಆಫ್ ದ ಅಬವ್ (ನೋಟಾ) ಚಲಾಯಿಸುವ ಅಧಿಕಾರವನ್ನು ನೀಡುವ ಪ್ರಸ್ತಾವವನ್ನು ಪರಿಶೀಲಿಸಲು ಗುರುವಾರ ಸುಪ್ರೀಂಕೋರ್ಟ್ ಒಪ್ಪಿಕೊಂಡಿದೆ. ಈ ಮೂಲಕ ಆ ಅಭ್ಯರ್ಥಿಯ ಆಯ್ಕೆಯನ್ನು ಅನುಮೋದಿಸುವ ಅಥವಾ ಅಭ್ಯರ್ಥಿಗೆ ಚಲಾವಣೆಯಾದ ಮತಕ್ಕಿಂತ ಹೆಚ್ಚು ಮತ ನೋಟಾಗೆ ಚಲಾವಣೆಯಾದಲ್ಲಿ ಆಯ್ಕೆಯನ್ನು ರದ್ದುಪಡಿಸಲು ಸಾಧ್ಯವಾಗಲಿದೆ.
ಸುಪ್ರೀಂಕೋರ್ಟ್ ನ 2013ರ ತೀರ್ಪಿಗೆ ಅನುಗುಣವಾಗಿ ಜಾರಿಗೆ ಬಂದಿರುವ ನೋಟಾ ವ್ಯವಸ್ಥೆ ವಿಫಲ ಪರಿಕಲ್ಪನೆ ಎಂದು ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗ ಬಣ್ಣಿಸಿ, ಮತದಾರರಿಂದ ಇದಕ್ಕೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿಲ್ಲ ಎಂದು ಹೇಳಿದ್ದರೂ, ನ್ಯಾಯಮೂರ್ತಿಗಳಾದ ಸೂರ್ಯಕಾಂತ, ಉಜ್ಜಲ್ ಭೂಯಾನ್ ಮತ್ತು ಎನ್.ಕೆ.ಸಿಂಗ್ ಅವರಿದ್ದ ವಿಭಾಗೀಯ ಪೀಠ, "ಇದೊಂದು ಆಸಕ್ತಿದಾಯಕ ಪ್ರಶ್ನೆ. ಭಾರತದ ಚುನಾವಣೆಯಲ್ಲಿ ತುರುಸಿನ ಸ್ಪರ್ಧೆ ಇರುತ್ತದೆ. ಆದರೆ ಕಣದಲ್ಲಿರುವ ಏಕೈಕ ಅಭ್ಯರ್ಥಿಯನ್ನು ಕೂಡಾ ಮತದಾರ ಇಷ್ಟಪಡುವುದಿಲ್ಲ ಎಂದಾದರೆ, ಲೋಕಸಭೆ ಹಾಗೂ ವಿಧಾನಸಭೆಯಲ್ಲಿ ತಮ್ಮ ಪ್ರತಿನಿಧಿಯಾಗಿ ಯಾರನ್ನು ಅವಿರೋಧವಾಗಿ ಆಯ್ಕೆ ಮಾಡಬೇಕು?" ಎಂದು ಅಭಿಪ್ರಾಯಪಟ್ಟರು.
"ಕಣದಲ್ಲಿರುವ ಏಕೈಕ ಅಭ್ಯರ್ಥಿ ಬಗ್ಗೆ ಮತದಾರರಲ್ಲಿ ಅಸಮಾಧಾನ ಇದ್ದರೆ, ಮತದಾರರು ದೊಡ್ಡ ಸಂಖ್ಯೆಯಲ್ಲಿ ಬಂದು ನೋಟಾ ಆಯ್ಕೆ ಮಾಡಬಹುದು. ಅಭ್ಯರ್ಥಿಗಿಂತ ಹೆಚ್ಚು ಮತಗಳು ನೋಟಾಗೆ ಚಲಾವಣೆಯಾದಲ್ಲಿ, ಏನು ಮಾಡಬೇಕು? ಇದು ಅಧ್ಯಯನ ಯೋಗ್ಯ. ಆದರೆ ಆಸಕ್ತಿದಾಯಕ ಪ್ರಶ್ನೆಯಾಗಿದ್ದು, ನ್ಯಾಯಾಂಗದ ವಿವೇಚನೆ ಅಗತ್ಯವಿದೆ" ಎಂದು ಹೇಳಿದರು.
ಆದರೆ ಇದನ್ನು ವಿರೋಧಿಸಿದ ಅಟಾರ್ನಿ ಜನರಲ್ ಆರ್.ವೆಂಕಟರಮಣಿ, ಭಾರತೀಯ ಪರಿಸ್ಥಿತಿಯಲ್ಲಿ ಇದು ಅಸಂಬದ್ಧ ಪರಿಕಲ್ಪನೆ ಎಂದು ಪ್ರತಿಪಾದಿಸಿದರು. ಚುನಾವಣಾ ಆಯೋಗದ ವಕೀಲ ರಾಕೇಶ್ ದ್ವಿವೇದಿ ಕೂಡಾ ಆರಂಭಿಂದಲೂ ನೋಟಾ ಯಾವುದೇ ಪರಿಣಾಮ ಬೀರಿಲ್ಲ ಎಂದು ವಾದಿಸಿದರು.