ಮಧ್ಯಪ್ರದೇಶ | ಸಚಿವ ವಿಜಯ್ ಶಾ ಅವರ ವಿರುದ್ಧದ ತನಿಖೆಗೆ ಎಸ್ ಐ ಟಿ ರಚಿಸಲು ಸುಪ್ರೀಂ ಕೋರ್ಟ್ ಆದೇಶ
ಮಧ್ಯಪ್ರದೇಶದ ಸಚಿವ ಕನ್ವರ್ ವಿಜಯ್ ಶಾ ಮತ್ತು ಕರ್ನಲ್ ಸೋಫಿಯಾ ಖುರೇಷಿ (Photo credit : PTI, X/@KrVijayShah)
ಹೊಸದಿಲ್ಲಿ: ಸೇನೆಯ ಮಹಿಳಾ ಅಧಿಕಾರಿ ಕರ್ನಲ್ ಸೋಫಿಯಾ ಖುರೇಷಿ ಬಗ್ಗೆ ಅವಹೇಳನಕಾರಿ ಮತ್ತು ಕೋಮುವಾದಿ ಹೇಳಿಕೆಗಳನ್ನು ನೀಡಿದ ಮಧ್ಯಪ್ರದೇಶದ ಸಚಿವ ವಿಜಯ್ ಶಾ ಅವರ ಕ್ಷಮೆಯಾಚನೆಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಅವರ ವಿರುದ್ಧದ ಪ್ರಕರಣವನ್ನು ಮೂರು ಐಪಿಎಸ್ ಅಧಿಕಾರಿಗಳಿರುವ ವಿಶೇಷ ತನಿಖಾ ದಳದಿಂದ ತನಿಖೆ ನಡೆಸಬೇಕೆಂದು ಆದೇಶಿಸಿದೆ. ಸಚಿವರ ವಿರುದ್ಧದ ಪ್ರಕರಣದ ತನಿಖೆಗಾಗಿ ಮಂಗಳವಾರ ಬೆಳಿಗ್ಗೆ ಮೂವರು ಐಪಿಎಸ್ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಬೇಕು ಎಂದು ನ್ಯಾಯಾಲಯವು ಆದೇಶ ನೀಡಿದೆ.
ಸಚಿವರ ಅಸಭ್ಯ ಹೇಳಿಕೆಗಳಿಗೆ ನ್ಯಾಯಾಲಯವು ಮತ್ತೊಮ್ಮೆ ಛೀಮಾರಿ ಹಾಕಿತು. ಈ ಹಿಂದೆ ವಿಜಯ್ ಶಾ ಅವರು ಕ್ಷಮೆಯಾಚಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಅವರ ಕ್ಷಮೆಯಾಚನೆಯು ಪ್ರಾಮಾಣಿಕ ಕ್ಷಮೆಯಾಚನೆಯಲ್ಲ ಎಂದು ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ಪ್ರತಿಪಾದಿಸಿದರು.
"ಕ್ಷಮೆಯಾಚನೆ ಎಂದರೇನು? ನೀವು ಯಾವ ರೀತಿಯ ಕ್ಷಮೆಯಾಚಿಸಿದ್ದೀರಿ? ಕ್ಷಮೆಯಾಚನೆಗೆ ಸ್ವಲ್ಪ ಅರ್ಥವಿದೆ. ಕೆಲವೊಮ್ಮೆ ವಿಧೇಯ ಭಾಷೆಯನ್ನು ಬಳಸಿ ತಮ್ಮಿಂದಾಗ ತಪ್ಪಿಗೆ ಕ್ಷಮೆಯಾಚಿಸುತ್ತಾರೆ. ಆ ಮೂಲಕ ನ್ಯಾಯಾಲಯದ ಕೆಂಗಣ್ಣಿಗೆ ಗುರಿಯಾಗುವುದರಿಂದ ತಪ್ಪಿಸಿಕೊಳ್ಳುತ್ತಾರೆ. ಕೆಲವರು ಹೆಸರಿಗಷ್ಟೇ ಮೊಸಳೆ ಕಣ್ಣೀರು ಸುರಿಸುತ್ತಾರೆ. ನಿಮ್ಮದು ಯಾವ ರೀತಿಯ ಕ್ಷಮೆಯಾಚನೆ? ನ್ಯಾಯಾಲಯವು ನಿಮ್ಮನ್ನು ಕ್ಷಮೆಯಾಚಿಸಲು ಕೇಳಿದೆ ಎಂಬ ಭಾವನೆಯನ್ನು ನೀವು ಬಿಂಬಿಸಲು ಬಯಸುತ್ತಿದ್ದೀರಿ. ಇಲ್ಲಿಯವರೆಗೆ ನಿಮ್ಮ ಅಸಭ್ಯ ಹೇಳಿಕೆಗಳಿಗೆ ಪ್ರಾಮಾಣಿಕವಾಗಿ ಕ್ಷಮೆಯಾಚಿಸಲು ನಿಮ್ಮನ್ನು ತಡೆಹಿಡಿದಿರುವುದೇನು?", ಎಂದು ನ್ಯಾಯಮೂರ್ತಿ ಸೂರ್ಯ ಕಾಂತ್ ಪ್ರಶ್ನಿಸಿದರು.
ಎಸ್ ಐ ಟಿ ತಂಡದಲ್ಲಿ ಒಬ್ಬ ಮಹಿಳಾ ಅಧಿಕಾರಿ ಇರಬೇಕು. ಮೇ 28 ರೊಳಗೆ ತನ್ನ ವರದಿಯನ್ನು ಸಲ್ಲಿಸಬೇಕು ಎಂದು ನ್ಯಾಯಮೂರ್ತಿ ಸೂರ್ಯ ಕಾಂತ್ ಹೇಳಿದರು.
ಸಚಿವ ವಿಜಯ್ ಶಾ ಅವರಿಗೆ ಬಂಧನದಿಂದ ಮುಕ್ತಿ ನೀಡಿದ ನ್ಯಾಯಾಲಯವು ಅವರು ತಮ್ಮ ಹೇಳಿಕೆಗಾಗಿ ಪರಿಣಾಮಗಳನ್ನು ಎದುರಿಸಲೇಬೇಕು ಎಂದು ಪ್ರತಿಪಾದಿಸಿತು. ಈ ಕುರಿತು ಮಧ್ಯಪ್ರದೇಶ ಸರಕಾರಕ್ಕೆ ನೊಟೀಸ್ ಜಾರಿ ಮಾಡಿದ ಸುಪ್ರೀಂ ಕೋರ್ಟ್ "ನಾವು ಪ್ರಕರಣವನ್ನು ನಿಕಟವಾಗಿ ವೀಕ್ಷಿಸಲು ಬಯಸುತ್ತೇವೆ. ಇದು ನಿಮಗೆ ಒಂದು ಅಗ್ನಿ ಪರೀಕ್ಷೆ" ಎಂದು ಹೇಳಿದೆ.