×
Ad

ಬಿಹಾರ ಮತದಾರರ ಪಟ್ಟಿ ಪರಿಷ್ಕರಣೆಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಕಾರ

Update: 2025-07-10 15:51 IST

Photo credit: PTI

ಹೊಸದಿಲ್ಲಿ : ಬಿಹಾರ ಮತದಾರರ ಪಟ್ಟಿ ಪರಿಷ್ಕರಣೆಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದ್ದು, ಆಧಾರ್, ಪಡಿತರ ಚೀಟಿ ಮತ್ತು ಚುನಾವಣಾ ಗುರುತಿನ ಚೀಟಿಯನ್ನು ಮತದಾರರ ಗುರುತನ್ನು ಸಾಬೀತುಪಡಿಸಲು ಮಾನ್ಯ ದಾಖಲೆಯಾಗಿ ಪರಿಗಣಿಸುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಿದೆ.  

ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಜೋಯಮಲ್ಯ ಬಾಗ್ಚಿ ಅವರ ಪೀಠ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದೆ. ಎರಡೂ ಕಡೆಯ ವಾದಗಳನ್ನು ಆಲಿಸಿದ ನ್ಯಾಯಾಧೀಶರು ಹಲವು ಮಹತ್ವದ ಅಂಶಗಳನ್ನು ಗಮನಿಸಿದ್ದಾರೆ.  

ಮತದಾರರ ಪಟ್ಟಿ ಪರಿಷ್ಕರಣೆಗೆ ಭಾರತೀಯ ಸಂವಿಧಾನದಲ್ಲಿ ಅವಕಾಶವಿದೆ. ಈ ಪ್ರಕ್ರಿಯೆಗೆ ಸಾಂವಿಧಾನಿಕ ಅನುಮತಿಯಿದೆ. ಬಿಹಾರದಲ್ಲಿ ಕೊನೆಯ ಬಾರಿಗೆ ಇದೇ ರೀತಿಯ ಪ್ರಕ್ರಿಯೆ 2003ರಲ್ಲಿ ನಡೆದಿದೆ ಎಂದು ಪೀಠವು ಗಮನಿಸಿದೆ.

ಅರ್ಜಿಗಳ ವಿಚಾರಣೆ ವೇಳೆ ಚುನಾವಣಾ ಆಯೋಗದ ಕ್ರಮದಲ್ಲಿ ಯಾವುದೇ ತರ್ಕವಿಲ್ಲ ಎಂದು ಹೇಳಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಆದರೆ, ಮತದಾರರ ಪಟ್ಟಿ ಪರಿಷ್ಕಣೆಯ ʼಸಮಯʼ ದ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿದೆ. 

ಅರ್ಜಿದಾರರ ಪರ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್ ಅವರು, "ಜನಪ್ರತಿನಿಧಿಗಳ ಕಾಯ್ದೆ ಪ್ರಕಾರ ಆಧಾರ್ ಮಾನ್ಯ ದಾಖಲೆ ಆಗಿದ್ದರೂ, ಆಯೋಗವು ಅದನ್ನು ನಿರಾಕರಿಸುತ್ತಿದೆ" ಎಂದು ಕೋರ್ಟ್‌ ಗಮನಕ್ಕೆ ತಂದರು. 

ಈ ಸಂದರ್ಭದಲ್ಲಿ ನ್ಯಾಯಮೂರ್ತಿಗಳು ಸುಧಾಂಶು ಧುಲಿಯಾ ಮತ್ತು ಜೋಯಮಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠ, "ಆಧಾರ್ ಅನ್ನು ಪೌರತ್ವದ ಪುರಾವೆಯಾಗಿ ಬಳಸುವುದೇಕೆ ಸಾಧ್ಯವಿಲ್ಲ?" ಎಂದು ಪ್ರಶ್ನಿಸಿತು. ಇದಕ್ಕೆ ಉತ್ತರವಾಗಿ ಆಯೋಗದ ಪರ ವಕೀಲ ರಾಕೇಶ್ ದ್ವಿವೇದಿ, "ಆಧಾರ್ ಪೌರತ್ವದ ದೃಢೀಕರಣಕ್ಕೆ ಯೋಗ್ಯ ದಾಖಲೆ ಅಲ್ಲ. ಪೌರತ್ವ ನಿರ್ಧಾರ ಮಾಡುವ ಹಕ್ಕು ಗೃಹ ಸಚಿವಾಲಯದ್ದು, ಚುನಾವಣಾ ಆಯೋಗದಲ್ಲ. ಸಂವಿಧಾನದ ವಿಧಿ 326 ರ ಪ್ರಕಾರ ಚುನಾವಣಾ ಆಯೋಗಕ್ಕೆ ಈ ಅಧಿಕಾರವಿದೆ" ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಬಾಗ್ಚಿ, "2025ರ ಬಿಹಾರ ಚುನಾವಣೆಗೆ ಕೇವಲ ಕೆಲವು ತಿಂಗಳು ಬಾಕಿಯಿರುವ ಸಮಯದಲ್ಲಿ ನೀವು ಮತದಾರರ ಹಕ್ಕು ಅಮಾನತುಗೊಳಿಸುವ ನಿರ್ಧಾರ ಕೈಗೊಂಡರೆ, ಆ ವ್ಯಕ್ತಿಗೆ ತನಗೆ ಏಕೆ ಮತದಾನದ ಹಕ್ಕು ಇಲ್ಲ ಎಂಬುದನ್ನು ತಿಳಿದುಕೊಳ್ಳಲು ಸಮಯವೇ ಸಿಗುವುದಿಲ್ಲ. ಇದು ನ್ಯಾಯಸಮ್ಮತವಲ್ಲ" ಎಂದು ಹೇಳಿದರು.  

ಪೌರತ್ವ ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಮತದಾರರ ಪಟ್ಟಿಯನ್ನು ಪರಿಷ್ಕರಿಸುವುದು ಸರಿಯಾಗಿಯೇ ಇದೆ. ಆದರೆ ಈ ಪ್ರಕ್ರಿಯೆ ಸಮರ್ಪಕ ಸಮಯದಲ್ಲಿ, ಪಾರದರ್ಶಕ ರೀತಿಯಲ್ಲಿ ನಡೆಯಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯನ್ನು ಪ್ರಶ್ನಿಸಿ NGO ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR), ಆರ್‌ಜೆಡಿ ಸಂಸದ ಮನೋಜ್ ಝಾ, ತೃಣಮೂಲ ಕಾಂಗ್ರೆಸ್ ಸಂಸದ ಮಹುವಾ ಮೊಯಿತ್ರಾ, ಕಾಂಗ್ರೆಸ್ ಮುಖಂಡ ಕೆ.ಸಿ. ವೇಣುಗೋಪಾಲ್, ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ, ಸಿಪಿಐನ ಡಿ. ರಾಜಾ, ಸಮಾಜವಾದಿ ಪಕ್ಷದ ಹರಿಂದರ್ ಸಿಂಗ್ ಮಲಿಕ್, ಶಿವಸೇನೆಯ ಅರವಿಂದ್ ಸಾವಂತ್, ಜೆಎಂಎಂನ ಸರ್ಫ್ರಾಝ್ ಅಹ್ಮದ್ ಮತ್ತು ಸಿಪಿಐ(ಎಂಎಲ್) ದೀಪಂಕರ್ ಭಟ್ಟಾಚಾರ್ಯ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News