ಟಿಬೆಟ್‌ನಲ್ಲಿ ಬ್ರಹ್ಮಪುತ್ರ ನದಿಗೆ ಚೀನಾದಿಂದ ಅಣೆಕಟ್ಟು ನಿರ್ಮಾಣ: ರಾಜ್ಯಸಭೆಯಲ್ಲಿ ಕೇಂದ್ರ ಸರ್ಕಾರದ ಹೇಳಿಕೆ
ಸಾಂದರ್ಭಿಕ ಚಿತ್ರ (credit: indiatoday.in)
ಹೊಸದಿಲ್ಲಿ: ಟಿಬೆಟ್ ನ ಯಾರ್ಲುಂಗ್ ತ್ಸಾಂಗ್ಪೊ ನದಿಯ ಕೆಳಭಾಗದಲ್ಲಿ (ಬ್ರಹ್ಮಪುತ್ರ ನದಿಯ ಮೇಲ್ಭಾಗ) ಚೀನಾ ಬೃಹತ್ ಅಣೆಕಟ್ಟು ಯೋಜನೆ ಕೈಗೆತ್ತಿಕೊಂಡಿರುವ ಕುರಿತು ವರದಿಗಳನ್ನು ಭಾರತ ಸರ್ಕಾರ ಗಮನಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ಗುರುವಾರ ರಾಜ್ಯಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದರು.
ಕೀರ್ತಿ ವರ್ಧನ್ ಸಿಂಗ್ ಅವರ ಪ್ರಕಾರ, ಈ ಯೋಜನೆಯನ್ನು 1986ರಲ್ಲಿ ಮೊದಲ ಬಾರಿಗೆ ಸಾರ್ವಜನಿಕಗೊಳಿಸಲಾಗಿದ್ದು, ಅಂದಿನಿಂದ ಚೀನಾ ಸಿದ್ಧತೆಗಳನ್ನು ಮುಂದುವರೆಸುತ್ತಿದೆ. ಬ್ರಹ್ಮಪುತ್ರ ನದಿಗೆ ಸಂಬಂಧಿಸಿದ ಎಲ್ಲಾ ಬೆಳವಣಿಗೆಗಳನ್ನು, ವಿಶೇಷವಾಗಿ ಚೀನಾ ಜಾರಿಗೊಳಿಸುತ್ತಿರುವ ಜಲವಿದ್ಯುತ್ ಯೋಜನೆಗಳನ್ನು, ಸರ್ಕಾರ ಎಚ್ಚರಿಕೆಯಿಂದ ಮೇಲ್ವಿಚಾರಣೆ ಮಾಡುತ್ತಿದೆ. “ನಮ್ಮ ಹಿತಾಸಕ್ತಿಗಳನ್ನು ಕಾಪಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಇದರಲ್ಲಿ ಕೆಳಹರಿವಿನ ಪ್ರದೇಶಗಳಲ್ಲಿ ವಾಸಿಸುವ ಭಾರತೀಯ ನಾಗರಿಕರ ಜೀವನ ಮತ್ತು ಜೀವನೋಪಾಯವನ್ನು ರಕ್ಷಿಸುವ ಕ್ರಮಗಳು ಸೇರಿವೆ,” ಎಂದು ಅವರು ಹೇಳಿದರು.
2006ರಲ್ಲಿ ಸ್ಥಾಪಿತವಾದ ತಜ್ಞರ ಮಟ್ಟದ ಕಾರ್ಯವಿಧಾನದಡಿ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ಗಡಿಯಾಚೆಗಿನ ನದಿಗಳಿಗೆ ಸಂಬಂಧಿಸಿದ ವಿಷಯಗಳನ್ನು ಚೀನಾದೊಂದಿಗೆ ಚರ್ಚಿಸಲಾಗುತ್ತಿದೆ. “ಕೆಳಹರಿವಿನ ದೇಶವಾಗಿ ಭಾರತವು ತನ್ನ ಹಕ್ಕುಗಳು ಹಾಗೂ ಕಳವಳಗಳನ್ನು ನಿರಂತರವಾಗಿ ಚೀನಾ ಅಧಿಕಾರಿಗಳಿಗೆ ತಿಳಿಸಿದೆ. ನದಿಯ ಎತ್ತರದ ಪ್ರದೇಶಗಳಲ್ಲಿ ನಡೆಯುವ ಯಾವುದೇ ಚಟುವಟಿಕೆಗಳು ಕೆಳಹರಿವಿನ ದೇಶಗಳ ಹಿತಾಸಕ್ತಿಗೆ ಹಾನಿಯಾಗದಂತೆ ನೋಡಿಕೊಳ್ಳಬೇಕೆಂದು ಒತ್ತಾಯಿಸಲಾಗಿದೆ,” ಎಂದು ಕೀರ್ತಿ ವರ್ಧನ್ ಸಿಂಗ್ ವಿವರಿಸಿದರು.
ಗಡಿಯಾಚೆಗಿನ ನದಿಗಳ ಸಹಕಾರ ಮತ್ತು ಜಲವಿಜ್ಞಾನ ದತ್ತಾಂಶ ಹಂಚಿಕೆ ಪುನರಾರಂಭದ ಅಗತ್ಯವನ್ನು ಹಲವು ದ್ವಿಪಕ್ಷೀಯ ಮಾತುಕತೆಯಲ್ಲೂ ಭಾರತವು ಚೀನಾದ ಗಮನಕ್ಕೆ ತಂದಿದೆ. ಇದರಲ್ಲಿ ಜುಲೈ 14ರಿಂದ 16ರವರೆಗೆ ಚೀನಾದಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆಯ (SCO) ವಿದೇಶಾಂಗ ಸಚಿವರ ಸಭೆಯ ಇತ್ತೀಚಿನ ಮಾತುಕತೆಯೂ ಸೇರಿದೆ.