×
Ad

ರಾಜ್ಯಪಾಲರಿಗೆ ಗಡುವು ನಿಗದಿ ಕುರಿತು ಸುಪ್ರೀಂ ಕೋರ್ಟ್ ಅಭಿಪ್ರಾಯ ಕೇಳಿದ ಕೇಂದ್ರದ ಕ್ರಮಕ್ಕೆ ತಮಿಳುನಾಡು ಸಿಎಂ ಖಂಡನೆ

Update: 2025-05-15 16:49 IST

ಎಂ.ಕೆ.ಸ್ಟಾಲಿನ್ | PC ; PTI 

ಹೊಸದಿಲ್ಲಿ : ರಾಜ್ಯಪಾಲರು ಮಸೂದೆಗಳನ್ನು ಅಂಗೀಕರಿಸಲು ಸಮಯ ಮಿತಿಯನ್ನು ನಿಗದಿಗೊಳಿಸಿರುವ ಬಗ್ಗೆ ರಾಷ್ಟ್ರಪತಿಗಳ ಮೂಲಕ ಸುಪ್ರೀಂ ಕೋರ್ಟ್‌ನ ಅಭಿಪ್ರಾಯವನ್ನು ಕೋರಿದ್ದಕ್ಕಾಗಿ ʼದುಷ್ಟ ಉದ್ದೇಶ ಹೊಂದಿದೆʼ ಎಂದು ಕೇಂದ್ರ ಸರಕಾರವನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಖಂಡಿಸಿದ್ದಾರೆ.

ಕೇಂದ್ರ ಸರಕಾರ ರಾಷ್ಟ್ರಪತಿಗಳ ಮೂಲಕ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಉಲ್ಲೇಖದ ಬಗ್ಗೆ ಪ್ರತಿಕ್ರಿಯಿಸಿದ ಸ್ಟಾಲಿನ್, ತಮಿಳುನಾಡು ರಾಜ್ಯಪಾಲರ ಪ್ರಕರಣದಲ್ಲಿ ನ್ಯಾಯಾಲಯವು ಈಗಾಗಲೇ ಇತ್ಯರ್ಥಪಡಿಸಿರುವ ಸಾಂವಿಧಾನಿಕ ನಿಲುವನ್ನು ಮತ್ತು ಇತರ ಪೂರ್ವನಿದರ್ಶನಗಳನ್ನು ಬುಡಮೇಲು ಮಾಡಲು ಪ್ರಯತ್ನಿಸಿದೆ. ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ರಾಜ್ಯ ಸರಕಾರವನ್ನು ದುರ್ಬಲಗೊಳಿಸುವ ಗುರಿಯನ್ನು ಈ ಕ್ರಮ ಹೊಂದಿದೆ ಎಂದು ಆರೋಪಿಸಿದರು.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಸ್ಟಾಲಿನ್, ರಾಜ್ಯಪಾಲರಿಗೆ ಸಮಯದ ಮಿತಿಗಳನ್ನು ನಿಗದಿಪಡಿಸುವುದನ್ನು ಕೇಂದ್ರ ಸರಕಾರ ಏಕೆ ವಿರೋಧಿಸುತ್ತಿದೆ? ಮಸೂದೆ ಅನುಮೋದನೆಯಲ್ಲಿ ಅನಿರ್ದಿಷ್ಠಾವಧಿ ವಿಳಂಬವನ್ನು ಅನುಮತಿಸುವ ಮೂಲಕ ಬಿಜೆಪಿ ರಾಜ್ಯಪಾಲರ ಅಡಚಣೆಯನ್ನು ಕಾನೂನುಬದ್ಧಗೊಳಿಸಲು ಪ್ರಯತ್ನಿಸುತ್ತಿದೆಯೇ?

ರಾಜ್ಯಪಾಲರು ಬಿಜೆಪಿಯ ಆಜ್ಞೆಯ ಮೇರೆಗೆ ಕಾರ್ಯನಿರ್ವಹಿಸಿದ್ದಾರೆ. ಇದು ವಿರೋಧ ಪಕ್ಷಗಳ ಆಡಳಿತವಿರುವ ರಾಜ್ಯಗಳನ್ನು ನಿಯಂತ್ರಣದಲ್ಲಿಡುವ ಕೇಂದ್ರದ ಹತಾಶ ಕ್ರಮವಾಗಿದೆ. ಇದು ಸುಪ್ರೀಂ ಕೋರ್ಟ್‌ನ ಅಧಿಕಾರವನ್ನು ನೇರವಾಗಿ ಪ್ರಶ್ನಿಸುತ್ತದೆ ಎಂದು ಹೇಳಿದರು.

ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳು ಮಸೂದೆಗಳಿಗೆ ಒಪ್ಪಿಗೆ ನೀಡುವ ಬಗ್ಗೆ ಸಮಯ ನಿಗದಿ, 142ನೇ ವಿಧಿಯ ಅಡಿಯಲ್ಲಿ ಸುಪ್ರೀಂ ಕೋರ್ಟ್ ಅಸಾಧಾರಣ ಅಧಿಕಾರ ಚಲಾವಣೆ ಸೇರಿದಂತೆ ಹಲವು ಪ್ರಶ್ನೆಗಳನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಸುಪ್ರೀಂ ಕೋರ್ಟ್‌ನ ನೂತನ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮುಂದಿಟ್ಟಿರುವ ಬೆನ್ನಲ್ಲೇ ಸ್ಟಾಲಿನ್ ಹೇಳಿಕೆ ಹೊರಬಿದ್ದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News