ತಮಿಳುನಾಡು | ಬುರ್ಖಾಧಾರಿ ಮಹಿಳೆಗೆ ಬಸ್‌ಗೆ ಪ್ರವೇಶ ನಿರಾಕರಿಸಿದ ನಿರ್ವಾಹಕ: ಪರವಾನಗಿ ರದ್ದು
PC : NDTV
ಚೆನ್ನೈ: ಬುರ್ಖಾಧಾರಿ ಮಹಿಳೆಗೆ ಬಸ್ ಪ್ರವೇಶ ನಿರಾಕರಿಸಿ, ಕ್ಯಾಮೆರಾದಲ್ಲಿ ಸಿಕ್ಕಿ ಬಿದ್ದಿದ್ದ ಖಾಸಗಿ ಬಸ್ ಸಂಸ್ಥೆ ಹಾಗೂ ಅದರ ನಿರ್ವಾಹಕರಿಬ್ಬರ ಪರವಾನಗಿಯನ್ನೂ ತಮಿಳುನಾಡು ರಾಜ್ಯ ಸಾರಿಗೆ ನಿಗಮ ರದ್ದುಗೊಳಿಸಿದೆ.
ಈ ಘಟನೆ ತಮಿಳುನಾಡಿನ ತಿರುಚೆಂಡೂರ್ ಜಿಲ್ಲೆಯಲ್ಲಿ ನಡೆದಿದ್ದು, ಈ ವಾಗ್ವಾದದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಕಾಯಲಗ ಪಟ್ಟಿಣಂನಿಂದ ತೂತ್ತುಕೂಡಿ ಜಿಲ್ಲೆಗೆ ಪ್ರಯಾಣಿಸುತ್ತಿದ್ದ ಮಹಿಳೆಯು ತನ್ನ ಬಳಿ ಮಾನ್ಯತೆ ಹೊಂದಿದ್ದ ಟಿಕೆಟ್ ಹೊಂದಿದ್ದರೂ, ಬಸ್ ನ ನಿರ್ವಾಹಕ ಬಸ್ ಹತ್ತದಂತೆ ಆಕೆಗೆ ತಡೆ ಒಡ್ಡಿದ್ದಾನೆ. ಆ ಮಹಿಳೆಯನ್ನು ನಿರ್ಲಕ್ಷಿಸಿ, ಉಳಿದ ಪ್ರಯಾಣಿಕರಿಗೆ ಬಸ್ ಹತ್ತಲು ನಿರ್ವಾಹಕ ಅವಕಾಶ ನೀಡಿದ ನಂತರ ಪರಿಸ್ಥಿತಿ ಉದ್ವಿಗ್ನಗೊಂಡಿದೆ.
“ನಾವು ಬಸ್ ಹತ್ತಲು ಯಾಕೆ ಅವಕಾಶ ನೀಡುತ್ತಿಲ್ಲ” ಎಂದು ಘಟನೆಯ ವಿಡಿಯೊ ಚಿತ್ರೀಕರಿಸಿಕೊಳ್ಳುತ್ತಿದ್ದ ವ್ಯಕ್ತಿ ನಿರ್ವಾಹಕನನ್ನು ಪ್ರಶ್ನಿಸಿದ್ದಾರೆ. ಅದಕ್ಕೆ ಪ್ರತಿಯಾಗಿ, ನಿಮಗೆ ಬಸ್ ಹತ್ತಲು ಅವಕಾಶ ನೀಡಬಾರದು ಎಂದು ಬಸ್ ಮಾಲಕರು ಸೂಚಿಸಿದ್ದಾರೆ ಎಂದು ಉತ್ತರಿಸಿರುವ ನಿರ್ವಾಹಕ, ಬಸ್ ಮಾಲಕನ ಫೋನ್ ಸಂಖ್ಯೆಯನ್ನೂ ಅವರಿಗೆ ನೀಡಿದ್ದಾನೆ.
ಈ ವಿಡಿಯೊ ವೈರಲ್ ಆಗಿ, ಸಾರ್ವಜನಿಕ ಆಕ್ರೋಶ ಭುಗಿಲೇಳುತ್ತಿದ್ದಂತೆಯೆ, ಖಾಸಗಿ ಪ್ರವಾಸಿ ಕಂಪನಿಯಾದ ವಿವಿಎಸ್ ಟೂರ್ಸ್ ಆ್ಯಂಡ್ ಟ್ರಾವೆಲ್ಸ್ ಹಾಗೂ ಅದರ ನಿರ್ವಾಹಕನ ಪರವಾನಗಿಯನ್ನು ತಮಿಳುನಾಡು ರಾಜ್ಯ ಸಾರಿಗೆ ನಿಗಮ ರದ್ದುಗೊಳಿಸಿದೆ.