“ವಿರೋಧ ಪಕ್ಷಗಳಿಗಿಂತ ಕೀಳುಮಟ್ಟದ ರಾಜಕೀಯ ಮಾಡುತ್ತಿದ್ದಾರೆ” : ತಮಿಳುನಾಡು ರಾಜ್ಯಪಾಲರ ವಿರುದ್ಧ ಸಿಎಂ ಎಂ.ಕೆ. ಸ್ಟಾಲಿನ್ ವಾಗ್ದಾಳಿ
Photo | NDTV
ಚೆನ್ನೈ: ತಮಿಳುನಾಡು ಸಿಎಂ ಎಂ ಕೆ ಸ್ಟಾಲಿನ್ ರವಿವಾರ ರಾಜ್ಯಪಾಲ ಆರ್ ಎನ್ ರವಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ರಾಜ್ಯಪಾಲರು ವಿರೋಧ ಪಕ್ಷಗಳಿಗಿಂತ ಕೀಳು ಮಟ್ಟದ ರಾಜಕೀಯ ಮಾಡುತ್ತಿದ್ದಾರೆ. ಆಡಳಿತಾರೂಢ ಡಿಎಂಕೆ ಮತ್ತು ರಾಜ್ಯ ಸರಕಾರದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ತಮ್ಮ ಸರಕಾರದ ವಿವಿಧ ಜನಪರ ಕಲ್ಯಾಣ ಕ್ರಮಗಳನ್ನು ಪಟ್ಟಿ ಮಾಡಿದ ಎಂ ಕೆ ಸ್ಟಾಲಿನ್, ತಮಿಳುನಾಡು ಇಂತಹ ಯೋಜನೆಗಳಲ್ಲಿ ದೇಶಕ್ಕೆ ಮಾದರಿಯಾಗಿದೆ ಎಂದು ಹೇಳಿದರು. ದ್ರಾವಿಡ ಮಾದರಿ ಸರಕಾರ ದೇಶಕ್ಕೆ ದಿಕ್ಕನ್ನು ತೋರಿಸುತ್ತದೆ. ಕೆಲವರು ಇದನ್ನು ಸಹಿಸಲಾರದೆ ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.
ವಿರೋಧ ಪಕ್ಷಗಳು ಏನು ಹೇಳುತ್ತವೆ ಎಂಬುದರ ಬಗ್ಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ಏಕೆಂದರೆ ಅದು ಅವರ ರಾಜಕೀಯ. ಅವರಿಗಿಂತ ಕೀಳು ಮಟ್ಟದ ರಾಜಕೀಯ ಮಾಡುವವರು ಇದ್ದಾರೆ. ಅದು ಯಾರೆಂದು ನಿಮಗೆ ತಿಳಿದಿದೆ. ಅದು ಕೇಂದ್ರ ಬಿಜೆಪಿ ಸರಕಾರದಿಂದ ನೇಮಿಸಲ್ಪಟ್ಟ ರಾಜ್ಯಪಾಲ ಆರ್ ಎನ್ ರವಿ. ಅವರು ರಾಜಭವನದಿಂದ ಏನು ಮಾಡುತ್ತಾರೆಂದು ನಿಮಗೆ ತಿಳಿದಿದೆ. ಡಿಎಂಕೆ ಸರಕಾರದ ವಿರುದ್ಧ ಮತ್ತು ಡಿಎಂಕೆ ವಿರುದ್ಧ ಅಪಪ್ರಚಾರ ಮಾಡುತ್ತಾರೆ. ದ್ರಾವಿಡ ಸಂಸ್ಕೃತಿಯನ್ನು ಅವಮಾನಿಸುತ್ತಾರೆ. ಸರಕಾರ ಅಂಗೀಕರಿಸಿದ ಶಾಸನಗಳನ್ನು ಅಂಗೀಕರಿಸುವುದಿಲ್ಲ. ತಮಿಳು ಗೀತೆಯನ್ನು ಅಗೌರವಿಸುತ್ತಾರೆ ಮತ್ತು ತಮಿಳುನಾಡಿನ ವಿದ್ಯಾರ್ಥಿಗಳನ್ನು ನಿಂದಿಸುತ್ತಾರೆ ಎಂದು ಎಂಕೆ ಸ್ಟಾಲಿನ್ ಹೇಳಿದರು.
ತಮಿಳುನಾಡು ಭಾರತದ ಅಗ್ರ ರಾಜ್ಯಗಳಲ್ಲಿ ಒಂದಾಗಿದೆ. ನಾವು ಇದನ್ನು ಹೇಳುತ್ತಿಲ್ಲ, ಕೇಂದ್ರ ಬಿಜೆಪಿ ಸರಕಾರದ ಅಂಕಿಅಂಶಗಳು ಇದಕ್ಕೆ ಸಾಕ್ಷಿಯಾಗಿವೆ. ತಮಿಳುನಾಡು ಬಿಜೆಪಿ ಆಡಳಿತದ ರಾಜ್ಯಗಳಿಗಿಂತ ಸಾಮಾಜಿಕ ಸೂಚ್ಯಂಕಗಳಲ್ಲಿ ಮುಂದಿದೆ. ಇದನ್ನು ಸಹಿಸಲಾಗದೆ ಅವರು ಸಾರ್ವಜನಿಕ ವೇದಿಕೆಗಳಲ್ಲಿ ತಮ್ಮ ಹತಾಶೆಯನ್ನು ವ್ಯಕ್ತಪಡಿಸುತ್ತಿದ್ದಾರೆ ಎಂದು ಸ್ಟಾಲಿನ್ ಆರೋಪಿಸಿದರು.