×
Ad

ಎರಡು ಬೈಕ್ ಗಳಿಗೆ ಟ್ಯಾಂಕರ್ ಢಿಕ್ಕಿ; ಐವರು ಮೃತ್ಯು

Update: 2024-04-12 07:45 IST

ಲಕ್ನೋ: ಅತಿವೇಗವಾಗಿ ಬರುತ್ತಿದ್ದ ಟ್ಯಾಂಕರ್ ಢಿಕ್ಕಿ ಹೊಡೆದು, ಈದ್ ಸಂದರ್ಭದಲ್ಲಿ ಸಂಬಂಧಿಕರ ಮನೆಗೆ ತೆರಳುತ್ತಿದ್ದ ದಂಪತಿ ಮತ್ತು ನಮಾಜ್ ಸಲ್ಲಿಸಲು ಮಸೀದಿಗೆ ತೆರಳುತ್ತಿದ್ದ ಮೂವರು ಯುವಕರು ಸೇರಿ ಐದು ಮಂದಿ ದಾರುಣವಾಗಿ ಮೃತಪಟ್ಟ ಘಟನೆ ಉತ್ತರ ಪ್ರದೇಶದ ಪಿಲಿಭಿಟ್ ಜಿಲ್ಲೆಯಲ್ಲಿ ಗುರುವಾರ ನಡೆದಿದೆ.

ಬೆಳಿಗ್ಗೆ 10 ಗಂಟೆಯ ಸುಮಾರಿಗೆ ಈ ಅಪಘಾತ ಸಂಭವಿಸಿದೆ. 20 ರ ಆಸುಪಾಸಿನ ಮೂವರು ಸ್ನೇಹಿತರು ಹಾಗೂ 30ರ ಸನಿಹದಲ್ಲಿದ್ದ ದಂಪತಿ ಬರೇಲಿ- ಹರಿದ್ವಾರ ರಾಷ್ಟ್ರೀಯ ಹೆದ್ದಾರಿ-74ರಲ್ಲಿ ದ್ವಿಚಕ್ರವಾಹನಗಳಲ್ಲಿ ಹೋಗುತ್ತಿದ್ದಾಗ ಭರತ್ ಭುಜ್ ಗ್ರಾಮದ ಸಮೀಪ ಈ ದುರಂತ ಸಂಭವಿಸಿದೆ.

ಅದೌಲಿ ಗ್ರಾಮದ ಉವೈಸ್ ಅಲಿ (32) ಮತ್ತು ಪತ್ನಿ ಶಕೀರಾ ಬೇಗಂ (30) ಈದ್ ಸಂದರ್ಭದಲ್ಲಿ ನೆರೆಯ ಗ್ರಾಮದಲ್ಲಿನ ಸಂಬಂಧಿಕರ ಮನೆಗೆ ತೆರಳುತ್ತಿದ್ದರು ಎಂದು ಠಾಣಾಧಿಕಾರಿ ವಿವರಿಸಿದ್ದಾರೆ.

ಪಸಿಯಾಪುರ ಗ್ರಾಮದ ಅಕೀಬ್ (21), ಪರೇವಾ ವೈಶ್ಯ ಗ್ರಾಮದ ಅರ್ಬಾಝ್ ಖಾನ್ (26) ಮತ್ತು ಶಹೀಬ್ (25) ಈದ್ ನಮಾಜ್  ಗಾಗಿ ಮಸೀದಿಗೆ ತೆರಳುತ್ತಿದ್ದರು. ವೇಗವಾಗಿ ಬಂದ ಟ್ಯಾಂಕರ್ ಎರಡು ಬೈಕ್ ಗಳಿಗೆ ಢಿಕ್ಕಿ ಹೊಡೆದಿದೆ.  ಹೊಡೆತದ ರಭಸಕ್ಕೆ ಎರಡೂ ಬೈಕ್ ಗಳಲ್ಲಿದ್ದ ಸವಾರರು ಹಲವು ಅಡಿಗಳಷ್ಟು ದೂರಕ್ಕೆ ಎಸೆಯಲ್ಪಟ್ಟಿದ್ದಾರೆ. ಬೈಕ್ ಗಳು ಸಂಪೂರ್ಣ ಜಖಂಗೊಂಡಿವೆ.  ಐದು ಮಂದಿಯೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಟ್ಯಾಂಕರ್ ಚಾಲಕ ಪರಾರಿಯಾಗಿದ್ದು, ಆತನ ಪತ್ತೆಗೆ ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸರು ವಿವರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News