ಗುಪ್ತಚರ ಮಾಹಿತಿ ಆಧರಿಸಿ ಭಯೋತ್ಪಾದಕರ ನೆಲೆಗಳ ಮೇಲೆ ದಾಳಿ ನಡೆಸಲಾಗಿದೆ: ಭಾರತೀಯ ಸೇನೆ
Photo credit: indiatoday.in
ಹೊಸದಿಲ್ಲಿ: ಎಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ 26 ನಾಗರಿಕರ ಹತ್ಯೆಗೆ ಪ್ರತಿಯಾಗಿ ಭಾರತೀಯ ಸಶಸ್ತ್ರ ಪಡೆಗಳು ಬುಧವಾರ ಬೆಳಗಿನ ಜಾವ 'ಆಪರೇಷನ್ ಸಿಂಧೂರ್' ಅನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಿದವು. ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ದಲ್ಲಿರುವ 9 ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ನಡೆಸಲಾಗಿದೆ. ವಿಶ್ವಾಸಾರ್ಹ ಗುಪ್ತಚರ ಮಾಹಿತಿಯ ಆಧಾರದ ಮೇಲೆ ದಾಳಿಯನ್ನು ನಡೆಸಲಾಗಿದೆ ಎಂದು ಕರ್ನಲ್ ಸೋಫಿಯಾ ಖುರೇಷಿ ಹೇಳಿದರು.
ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ, ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಮತ್ತು ಕರ್ನಲ್ ಸೋಫಿಯಾ ಖುರೇಷಿ ಅವರು ಆಪರೇಷನ್ ಸಿಂಧೂರ್ ಕುರಿತು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು.
ಲಭ್ಯವಿರುವ ಗುಪ್ತಚರ ಮಾಹಿತಿಯನ್ನು ಎಚ್ಚರಿಕೆಯಿಂದ ಪರಿಶೀಲಿಸಿದ ನಂತರ ಈ ನೆಲೆಗಳ ಮೇಲೆ ದಾಳಿ ನಡೆಸಲಾಗಿದೆ.
ಆಯ್ಕೆ ಮಾಡಿದ ಗುರಿಗಳಲ್ಲಿ ಲಾಹೋರ್‌ನಿಂದ ಸುಮಾರು 40 ಕಿ.ಮೀ ಉತ್ತರಕ್ಕೆ ಮುರಿಡ್ಕೆಯಲ್ಲಿರುವ ಲಷ್ಕರೆ ತೈಬಾ ಭಯೋತ್ಪಾದಕ ತರಬೇತಿ ನೆಲೆಯೂ ಸೇರಿದೆ. ಮುಂಬೈ ದಾಳಿಯ ಹಿಂದಿನ ಭಯೋತ್ಪಾದಕರಾದ ಅಜ್ಮಲ್ ಕಸಬ್ ಮತ್ತು ಡೇವಿಡ್ ಹೆಡ್ಲಿಗೆ ಈ ನೆಲೆಯಲ್ಲಿ ತರಬೇತಿ ನೀಡಲಾಗಿತ್ತು ಎಂದು ಕರ್ನಲ್ ಖುರೇಷಿ ಹೇಳಿದರು.