×
Ad

ತೆಲಂಗಾಣ : ಕಾಂಗ್ರೆಸ್ ನ ರೇವಂತ್ ರೆಡ್ಡಿ ಕೆಸಿಆರ್ ಕೋಟೆ ಕೆಡವಿದ್ದು ಹೇಗೆ?

Update: 2023-12-03 13:00 IST

ಹೈದರಾಬಾದ್: ತೆಲಂಗಾಣ ಕಾಂಗ್ರೆಸ್ ರಾಜ್ಯಾಧ್ಯಕ್ಷ ರೇವಂತ್ ರೆಡ್ಡಿಯವರ ಕಾರ್ಯವೈಖರಿಯ ಕುರಿತು ಸ್ವಪಕ್ಷೀಯರಿಂದಲೇ ಅಸಮಾಧಾನ ವ್ಯಕ್ತವಾಗಿತ್ತು. ಆದರೆ, 54 ವರ್ಷದ ರೇವಂತ್ ರೆಡ್ಡಿ, ದಕ್ಷಿಣ ರಾಜ್ಯವಾದ ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲುವಿನ ದಡ ಮುಟ್ಟಿಸಿರುವಂತೆ ತೋರುತ್ತಿದೆ. ಇದಕ್ಕಿಂತ ಪ್ರಮುಖ ಸಂಗತಿಯೆಂದರೆ, ಬಿಆರ್ಎಸ್ ಪಕ್ಷದ ಭದ್ರಕೋಟೆಯಾದ ಕಾಮರೆಡ್ಡಿ ವಿಧಾನಸಭಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ವಿರುದ್ಧ ಸ್ಪರ್ಧಿಸಿರುವ ರೇವಂತ್ ರೆಡ್ಡಿ, ಅಲ್ಲಿ ಮುನ್ನಡೆ ಸಾಧಿಸಿದ್ದಾರೆ.

ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಕ್ಷದ ಮಾಜಿ ಶಾಸಕರಾದ ರೇವಂತ್ ರೆಡ್ಡಿ, ಈವರೆಗೆ ಎರಡು ಬಾರಿ ಶಾಸಕರಾಗಿದ್ದಾರೆ. ಸದ್ಯ ಅವರು ಮಲ್ಕಜ್ ಗಿರಿ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು, 2017ರಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದರು.

ಜುಲೈ 2021ರಲ್ಲಿ ತೆಲಂಗಾಣ ಕಾಂಗ್ರೆಸ್ ಮುಖ್ಯಸ್ಥರಾಗಿ ನೇಮಕವಾದ ರೇವಂತ್ ರೆಡ್ಡಿ, ಅದರ ಬೆನ್ನಿಗೇ ಬಹಿರಂಗವಾಗಿ ಕಾಣಿಸಿಕೊಳ್ಳುತ್ತಾ, ಆಡಳಿತಾರೂಢ ಬಿಆರ್ಎಸ್ ವಿರುದ್ಧ ಹಲವಾರು ವಿಷಯಗಳನ್ನು ಪ್ರಸ್ತಾಪಿಸುತ್ತಾ, ಪ್ರತಿಭಟನೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.

ಸ್ಥಳೀಯ ನಾಯಕರು ಜನಸಾಮಾನ್ಯರ ನಡುವೆ ಕಾಣಿಸಿಕೊಳ್ಳುವುದರ ಪ್ರಾಮುಖ್ಯತೆಯ ಪಾಠವನ್ನು ಕರ್ನಾಟಕದಿಂದ ಕಲಿತ ಕಾಂಗ್ರೆಸ್ ನಾಯಕತ್ವವು ರೇವಂತ್ ರೆಡ್ಡಿ ವಿರುದ್ಧ ಪಕ್ಷದೊಳಗೇ ಭಿನ್ನಮತದ ಧ್ವನಿಗಳಿದ್ದರೂ, ಅವರ ಬೆನ್ನಿಗೆ ಅಚಲವಾಗಿ ನಿಂತಿತು. ಕೆಲವೇ ದಿನಗಳಲ್ಲಿ ಭಾರಿ ಜನಸಂಖ್ಯೆಯ ಸಮಾವೇಶಗಳನ್ನುದ್ದೇಶಿಸಿ ಮಾತನಾಡುತ್ತಾ, ಬಹು ದೊಡ್ಡ ವೇದಿಕೆಯ ನಾಯಕರಂತೆ ಬಿಂಬಿತಗೊಂಡ ರೇವಂತ್ ರೆಡ್ಡಿ, ಪಕ್ಷದ ರಾಷ್ಟ್ರೀಯ ನಾಯಕರೊಂದಿಗೆ ನಿರಂತರವಾಗಿ ಕಾಣಿಸಿಕೊಳ್ಳತೊಡಗಿದರು.

ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ವಿರುದ್ಧ ರೇವಂತ್ ರೆಡ್ಡಿ ಅವರನ್ನು ಕಣಕ್ಕಿಳಿಸುವ ಮೂಲಕ ಕಾಂಗ್ರೆಸ್ ಹೈಕಮಾಂಡ್ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಅವರ ವರ್ಚಸ್ಸನ್ನು ಹಿಗ್ಗಿಸುವ ಕೆಲಸ ಮಾಡಿತು. ಇದೀಗ, 2014ರಲ್ಲಿ ಆಂಧ್ರ ಪ್ರದೇಶದಿಂದ ತೆಲಂಗಾಣ ವಿಭಜನೆಗೊಂಡಾಗಿನಿಂದಲೂ ಬಿಆರ್ಎಸ್ ಪಕ್ಷದ ಭದ್ರಕೋಟೆಯಾಗಿರುವ, ನಿರಂತರವಾಗಿ ಆ ಪಕ್ಷದ ಪರವಾಗಿಯೇ ಮತ ಚಲಾಯಿಸುತ್ತಾ ಬರುತ್ತಿರುವ ಕಮರೆಡ್ಡಿ ವಿಧಾನಸಭಾ ಕ್ಷೇತ್ರದಲ್ಲಿ ರೇವಂತ್ ರೆಡ್ಡಿ ಮುನ್ನಡೆ ಸಾಧಿಸಿದ್ದಾರೆ. ಇದಲ್ಲದೆ ತಾವು ಸ್ಪರ್ಧಿಸಿರುವ ಎರಡನೆಯ ಕ್ಷೇತ್ರವಾದ ಕೊಡಂಗಲ್ ನಲ್ಲೂ ಮುನ್ನಡೆ ಕಾಯ್ದುಕೊಂಡಿದ್ದಾರೆ.

ತೆಲಂಗಾಣ ಕಾಂಗ್ರೆಸ್ ಮುಖ್ಯಸ್ಥ ರೇವಂತ್ ರೆಡ್ಡಿ ತಮ್ಮ ಪಕ್ಷಕ್ಕೆ ಭಾರಿ ಬಹುಮತ ದೊರೆಯುವ ಅಂದಾಜು ಮಾಡಿದ್ದರು. ತೆಲಂಗಾಣದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ಮತದಾನೋತ್ತರ ಸಮೀಕ್ಷೆಗಳು ಭವಿಷ್ಯ ನುಡಿಯುತ್ತಿದ್ದಂತೆಯೆ, ಆ ಕುರಿತು ಪ್ರತಿಕ್ರಿಯಿಸಿದ್ದ ರೇವಂತ್ ರೆಡ್ಡಿ, “ಈ ಬಾರಿ ಕಾಂಗ್ರೆಸ್ ಪಕ್ಷವು ಭಾರಿ ಬಹುಮತ ಪಡೆಯಲಿದ್ದು, ಮತದಾನೊತ್ತರ ಸಮೀಕ್ಷೆಗಳೂ ಅದನ್ನೇ ಪ್ರತಿಬಿಂಬಿಸಿವೆ. ನಾವು 80ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಪಡೆಯಲಿದ್ದೇವೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.

ಕಾಂಗ್ರೆಸ್ ಪಕ್ಷವೇನಾದರೂ ಗೆಲುವು ಸಾಧಿಸಿದರೆ ನೀವು ಮುಖ್ಯಮಂತ್ರಿಯಾಗುತ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ, “ನಮ್ಮಲ್ಲಿ ಪರಿಶೀಲನಾ ಸಮಿತಿ ಹಾಗೂ ಆಯ್ಕೆ ಸಮಿತಿಯಿದ್ದು, ಮುಖ್ಯಮಂತ್ರಿ ಕುರಿತು ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ನಿರ್ಧಾರ ಕೈಗೊಳ್ಳುತ್ತದೆ. ಕಾಂಗ್ರೆಸ್ ಪಕ್ಷದಲ್ಲಿ ಎಲ್ಲದಕ್ಕೂ ಒಂದು ಪ್ರಕ್ರಿಯೆಯಿದೆ. ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷನಾಗಿ, ನಾನು ಹೈಕಮಾಂಡ್ ನ ಎಲ್ಲ ಆದೇಶಗಳನ್ನೂ ಪಾಲಿಸಬೇಕಾಗುತ್ತದೆ” ಎಂದು ಅವರು ನಯವಾಗಿ ಉತ್ತರಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News