ಬಿಗ್ ಬಜೆಟ್ ನ ಮಸಾಲೆ ಚಿತ್ರದಲ್ಲಿ ಆಕ್ಸಿಜನ್, ಬಡ್ಡಿ, ಭ್ರಷ್ಟಾಚಾರದ ಕತೆ !
ಜವಾನ್ ಚಿತ್ರ | Photo: twitter
ಬಹುನಿರೀಕ್ಷಿತ ಮಾತ್ರವಲ್ಲ ಈ ಕಾಲದ ಬಹುದೊಡ್ಡ ಚಿತ್ರ ಜವಾನ್ ಗುರುವಾರ ವಿಶ್ವದಾದ್ಯಂತ ಬಿಡುಗಡೆಯಾಗಿದೆ. ನಿರೀಕ್ಷೆಯಂತೆಯೇ ಈ ಬಿಗ್ ಬಜೆಟ್, ಬಿಗ್ ಸ್ಟಾರ್ಸ್ ಚಿತ್ರ ಮೊದಲ ದಿನ ಎಲ್ಲೆಡೆ ಭರ್ಜರಿ ಹೌಸ್ ಫುಲ್ ಷೋ ಕಂಡಿರುವ ವರದಿಗಳಿವೆ.
ಈ ಚಿತ್ರ ಸೃಷ್ಟಿಸಿದ್ದ ಭಾರೀ ಹೈಪ್ ಗೆ ತಕ್ಕುದಾದ ಪ್ರಚಂಡ ಸ್ಟಾರ್ಟ್ ಅನ್ನೇ ಅದು ಪಡೆದಿದೆ.
ನಾವೀಗ ಮಾಡ್ತಾ ಇರೋದು ಜವಾನ್ ಚಿತ್ರದ ವಿಮರ್ಶೆ ಅಲ್ಲ.
ನಿನ್ನೆ ಚಿತ್ರ ಬಿಡುಗಡೆಯಾದ ಬೆನ್ನಿಗೆ ಜವಾನ್ ಚಿತ್ರದ ನೂರಾರು ವಿಮರ್ಶೆಗಳು ಟಿವಿ ಚಾನಲ್ ಗಳಲ್ಲಿ, ಯೂಟ್ಯೂಬ್ ಗಳಲ್ಲಿ, ವೆಬ್ ಸೈಟ್ ಗಳಲ್ಲಿ ಈಗಾಗಲೇ ಬಂದಿವೆ.
ಆದರೆ ಜವಾನ್ ಚಿತ್ರದ ಬಗ್ಗೆ ನಾವು ಮಾತಾಡಲೇ ಬೇಕಾಗಿ ಬಂದಿರುವುದು ಆ ಚಿತ್ರದ ಸ್ವರೂಪದಿಂದಾಗಿ.
ಎಲ್ಲರೂ ಒಂದು ಭರ್ಜರಿ ಆಕ್ಷನ್, ಥ್ರಿಲ್ಲರ್, ರೊಮ್ಯಾನ್ಸ್, ಇಮೋಷನ್ ಗಳ ಚಿತ್ರವನ್ನೇ ಅಟ್ಲಿ ಹಾಗು ಶಾರುಖ್ ಜೋಡಿಯಿಂದ ನಿರೀಕ್ಷಿಸಿದ್ದರು.
ಅದೆಲ್ಲವೂ ಸಿಕ್ಕಾಪಟ್ಟೆ ಇರುವ ಚಿತ್ರ ಜವಾನ್.
ಆಕ್ಷನ್ ಅಂತೂ ಬೇರೆಯೇ ಲೆವೆಲ್ ನಲ್ಲಿದೆ. ಇದಕ್ಕೆ ಹೋಲಿಸಿದರೆ ಪಠಾಣ್ ನಲ್ಲಿದ್ದ ಆಕ್ಷನ್ ಕೇವಲ ಟ್ರೇಲರ್ ಅಂದ್ರೂ ತಪ್ಪಿಲ್ಲ.
ಆದರೆ ಇವೆಲ್ಲವುಗಳ ಜೊತೆ ಅಟ್ಲಿ ಹಾಗು ಶಾರುಖ್, ಚಿತ್ರದಲ್ಲಿ ಒಂದು ಅನಿರೀಕ್ಷಿತ ಟ್ವಿಸ್ಟ್ ನೀಡಿದ್ದಾರೆ. ಇಂತಹ ಬಿಗ್ ಬಜೆಟ್ ಚಿತ್ರದಲ್ಲಿ ಸದ್ಯ ದೇಶವನ್ನು ಕಾಡುತ್ತಿರುವ ಹಲವು ಗಂಭೀರ ಸಮಸ್ಯೆಗಳನ್ನು ಎತ್ತಿದ್ದಾರೆ. ಜನರಿಗೆ ಸಂದೇಶ ಕೊಟ್ಟಿದ್ದಾರೆ. ಸದ್ಯ ಇದು ಜವಾನ್ ಚಿತ್ರದ ಬಗ್ಗೆ ಅತ್ಯಂತ ಹೆಚ್ಚು ಚರ್ಚೆಯಾಗುತ್ತಿರುವ ವಿಷಯ.
ಜವಾನ್ ಸೂಪರ್ ಹಿಟ್ ಆಗೋದು ಬಹುತೇಕ ಖಚಿತ. ದೇಶದಲ್ಲಿ 500 ಕೋಟಿ ಹಾಗು ಜಾಗತಿಕವಾಗಿ ಸಾವಿರ ಕೋಟಿ ಗಳಿಕೆಯ ಕ್ಲಬ್ ಸೇರಿದರೆ ಅಚ್ಚರಿಯೇನಿಲ್ಲ. ಕೆಲವರ ಪ್ರಕಾರ ಜಾಗತಿಕವಾಗಿ 1500 ಕೋಟಿ ಸಂಪಾದಿಸಿ ದಾಖಲೆ ಬರೆಯುವ ಸಾಧ್ಯತೆಯೂ ಇದೆ.
ಆದರೆ ಇಲ್ಲೊಂದು ಸಮಸ್ಯೆಯಿದೆ. ಆ ಸಮಸ್ಯೆ ಜವಾನ್ ನ ಆರಂಭಿಕ ಯಶಸ್ಸನ್ನು ಮಧ್ಯದಲ್ಲೇ ತಡೆಯುತ್ತದಾ ಎಂಬುದು ಈಗ ವಿಶ್ಲೇಷಕರ ನಡುವೆ ಎದ್ದಿರುವ ಸಂಶಯ. ಅದಕ್ಕೆ ಕಾರಣ ಜವಾನ್ ನಲ್ಲಿ ಎತ್ತಲಾದ ಪ್ರಶ್ನೆ ಹಾಗು ನೀಡಲಾದ ಸಂದೇಶ.
ಶಾರುಖ್ ಖಾನ್ ಇಷ್ಟೆಲ್ಲಾ ದೊಡ್ಡ ಸೂಪರ್ ಸ್ಟಾರ್ ಆಗಿದ್ದರೂ ಎಂದೂ ವ್ಯವಸ್ಥೆಯ ಹುಳುಕುಗಳ ಬಗ್ಗೆ ಒಂದು ಗಂಭೀರ ಚಿತ್ರ ಮಾಡಿಲ್ಲ. ಅವುಗಳ ಬಗ್ಗೆ ಮಾತಾಡೋದೇ ಇಲ್ಲ ಅವರು. ಕೇವಲ ರೊಮ್ಯಾಂಟಿಕ್ ಚಿತ್ರಗಳಿಗೇ ಸೀಮಿತವಾಗಿರ್ತಾರೆ ಎಂಬ ದೂರು ಬಹಳ ಕಾಲದಿಂದ ಇದೆ. ಆ ದೂರು ಬಹುತೇಕ ಸರಿಯೂ ಹೌದು.
ಆದರೆ ಶಾರುಖ್ ಈ ಬಾರಿ ಆ ಎಲ್ಲ ಕಂಪ್ಲೇಂಟುಗಳನ್ನು ನಿವಾರಿಸುವಂತಹ ಚಿತ್ರ ಮಾಡಿದ್ದಾರೆ. ಅದೂ ತಮ್ಮ ವೃತ್ತಿ ಜೀವನದಲ್ಲೇ ಅತಿ ದೊಡ್ಡ ಚಿತ್ರದಲ್ಲಿ ಅಂತಹದೊಂದು ಭಾರೀ ರಿಸ್ಕ್ ತೆಗೊಂಡಿದ್ದಾರೆ. ಚರ್ಚಿಸಲೇ ಬೇಕಾದ ಮಹತ್ವದ ವಿಷಯಗಳನ್ನು ಚಿತ್ರದಲ್ಲಿ ತಂದಿದ್ದಾರೆ. ಆ ಮೂಲಕ ಒಂದು ದೊಡ್ಡ ಸಂದೇಶವನ್ನು ರವಾನಿಸಿದ್ದಾರೆ. ಅದಕ್ಕಾಗಿ ಅಟ್ಲಿ ಹಾಗು ಶಾರುಖ್ ಇಬ್ಬರಿಗೂ ಹ್ಯಾಟ್ಸ್ ಆಫ್.
ಆದರೆ ಅಂತಹ ವಿಷಯಗಳನ್ನು ಚಿತ್ರದಲ್ಲಿ ತಂದಿರುವುದೇ ಚಿತ್ರಕ್ಕೆ ಮುಳುವಾಗಲಿದೆಯೇ ? ಅದನ್ನು ಚರ್ಚಿಸುವ ಮೊದಲು ಜವಾನ್ ಚಿತ್ರದಲ್ಲಿ ಏನೇನು ವಿಶೇಷ ಅಂತ ವಿವರವನ್ನು ಒಂದೊಂದಾಗಿ ಹೇಳ್ತಾ ಹೋಗ್ತೀನಿ.
ಗುರುವಾರ ಮುಂಜಾನೆ 6:30ಕ್ಕೆ ಜವಾನ್ ಬೆಂಗಳೂರಿನಲ್ಲಿ ಮೊದಲ ಪ್ರದರ್ಶನ ಕಂಡಿದ್ದು ಬಹುತೇಕ ಚಿತ್ರಮಂದಿರಗಳು ಭರ್ತಿಯಾಗಿದ್ದವು, ಮುಂದಿನ ನಾಲ್ಕು ದಿನಗಳವರೆಗಿನ ಮುಂಗಡ ಟಿಕೆಟ್ ಸೋಲ್ಡ್ ಔಟ್ ಆಗಿವೆ.
"ಮಗನ ಮೈ ಮುಟ್ಟುವ ಮೊದಲು, ಅಪ್ಪನ ಜೊತೆ ಮಾತಾಡಬೇಕಿತ್ತು" ಎಂಬ ಸಂಭಾಷಣೆಯ ಮೂಲಕ ಯಶಸ್ವಿಯಾಗಿದ್ದ ಚಿತ್ರದ ಟ್ರೈಲರ್
ಹಲವಾರು ನಿರೀಕ್ಷೆಗಳನ್ನು ಹುಟ್ಟು ಹಾಕಿತ್ತು. ಅದರಂತೆ 'ಜವಾನ್' ವೀಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಅಟ್ಲಿ- ಶಾರುಖ್ ಕಾಂಬಿನೇಷನ್ ಸೌತ್ ನಾರ್ಥ್ ಎರಡೂ ಕಡೆಯ ಅಭಿಮಾನಿಗಳಲ್ಲೂ ಹೊಸ ಭರವಸೆಯನ್ನು ಮೂಡಿಸಿದೆ. ವ್ಯವಸ್ಥೆಯ ಕೈವಾಡಗಳಿಂದ ನಿರ್ಮಾಣವಾಗುವ ಅವ್ಯವಸ್ಥೆ ಹಾಗು ಅನ್ಯಾಯಗಳ ವಿರುದ್ಧ ಸಶಸ್ತ್ರ ಹೋರಾಟಗಳನ್ನು ನಡೆಸಿ ನ್ಯಾಯ ಪಡೆಯುತ್ತಾ ಸಾಗುತ್ತೆ 'ಜವಾನ್'.
ಇದೇ ವರ್ಷ ಸೂಪರ್ ಹಿಟ್ ಆದ ಪಠಾಣ್ ಪಕ್ಕಾ ಮಸಾಲೆ ಚಿತ್ರವಾಗಿತ್ತು. ಅದರಲ್ಲಿ ಕತೆ, ಲಾಜಿಕ್ ಹುಡುಕುವುದೇ ಕಷ್ಟವಾಗಿತ್ತು.
ಆದರೆ ಜವಾನ್ ನಲ್ಲಿ ಒಂದು ಅಪ್ಪಟ ಮಸಾಲೆ ಚಿತ್ರದ ಎಲ್ಲ ಎಲಿಮೆಂಟುಗಳು ಪಠಾಣ್ ಗಿಂತಲೂ ಬಹಳ ದೊಡ್ಡ ಪ್ರಮಾಣದಲ್ಲಿವೆ. ಆದರೆ ಅದರ ಜೊತೆಜೊತೆಗೇ ಕತೆಯಿದೆ, ಗಂಭೀರ ವಿಷಯಗಳೂ ಇವೆ.
ರೈತರ ಟ್ರ್ಯಾಕ್ಟರ್ ಗೆ ನೀಡುವ ಸಾಲಕ್ಕೆ ಪಡೆಯುವ ಬಡ್ಡಿ ದರ ಶೇಕಡ 13, ಐಷಾರಾಮಿ ಕಾರ್ ಗಳಿಗೆ ಶೇಕಡ 8 ರಷ್ಟು ಬಡ್ಡಿ, ಆಕ್ಸಿಜನ್ ನಂತಹ ಮೂಲಭೂತ ವ್ಯವಸ್ಥೆಗಳಿಲ್ಲದ ಸರ್ಕಾರಿ ಆಸ್ಪತ್ರೆಗಳು, ರಾಜಕಾರಣಿಗಳ ಪ್ರಾಯೋಜಿತ ಕೃತ್ಯಗಳಿಗೆ ಬಲಿಯಾಗುವ ಅಧಿಕಾರಿಗಳು, ತುರ್ತು ಸಂಧರ್ಭಗಳಲ್ಲಿ ಕೆಲಸಕ್ಕೆ ಬಾರದ ಸೈನಿಕರ ಬಂದೂಕುಗಳು - ಈ ರೀತಿಯ ಹಲವು ಜ್ವಲಂತ ಸಮಸ್ಯೆಗಳನ್ನು ತೆರಿದಿಡುತ್ತೆ ಜವಾನ್ .
ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ತಂದೆ(ವಿಕ್ರಂ ರಾಥೋಡ್) ಮತ್ತು ಜೈಲರ್ ಮಗ (ಆಝಾದ್) ಆಗಿ ಕಾಣಿಸಿಕೊಳ್ಳುವ ಶಾರುಖ್ ಖಾನ್, ಒಂದೇ ಉದ್ದೇಶದೊಂದಿಗೆ ವ್ಯವಸ್ಥೆಯ ವೈಫಲ್ಯಗಳನ್ನು ಜನರ ಮುಂದಿಡುತ್ತಾ ಸಾಗುವ ಎರಡು ಪಾತ್ರಗಳು. ಇವೆರಡೂ ಪಾತ್ರಗಳು ಒಂದೆಡೆ ಸಂಗಮಗೊಳ್ಳುವುದೇ ರೋಮಾಂಚಕ ದೃಶ್ಯ.
ವ್ಯವಸ್ಥೆಯನ್ನು ತನಗೆ ಬೇಕಾದಂತೆ ಪಳಗಿಸಿಕೊಂಡಿರುವ ದುಷ್ಟ ಉದ್ಯಮಿ, ತಂದೆಗೂ ಮಗನಿಗೂ ಶತ್ರು ಎಂದು ಚಿತ್ರ ವಿವರವಾಗಿ ನಿರೂಪಿಸುವಲ್ಲಿ ಯಶಸ್ವಿಯಾಗಿದೆ.
ಮೆಟ್ರೋ ಟ್ರೈನ್ ಹ್ಯಾಕಿಂಗ್, ಹೈವೇ ಚೇಸ್ ಫೈಟಿಂಗ್, ಪಶ್ಚಿಮ ಭಾರತದ ಅದಿವಾಸಿಗಳು, ಮಹಿಳಾ ಜೈಲ್ ಗಳ ದೃಶ್ಯಗಳಂತೂ ಅದ್ಭುತವಾಗಿ ಮೂಡಿ ಬಂದಿವೆ. ಆದರೆ ಕೆಲವು ಕಡೆ ಸಾಹಸ ದೃಶ್ಯಗಳು ಪಠಾಣ್, ವಿಕ್ರಮ್, ಜೈಲರ್ ಗಳ ರೀತಿಯಲ್ಲಿಯೇ ಮೂಡಿ ಬಂದಿದ್ದು ಹೊಸದು ಏನಿಲ್ಲಾ ಎಂಬಂತೆ ಅನಿಸಬಹುದು.
ನಿರ್ದೇಶಕ ತಮಿಳರಾಗಿದ್ದರೂ ತಮಿಳು ಚಿತ್ರಗಳ ಟಚ್ ಇಲ್ಲಿಲ್ಲ . ಕಿಂಗ್ ಖಾನ್, ಅಟ್ಲಿ, ಸೇತುಪತಿ ಅಭಿಮಾನಿಗಳಿಗೆ ತಕ್ಕಂತೆ ಈ ಸಿನಿಮಾ ತಯಾರಿಸಲಾಗಿದೆ . ಸಿನಿಮಾದಲ್ಲಿ ಭರ್ಜರಿ ಮಾಸ್ ದೃಶ್ಯಗಳ ಕೊರತೆಯಿದ್ದರೂ ಎಲ್ಲೂ ಅಭಿಮಾನಿಗಳಿಗೆ ನಿರಾಶೆಯಾಗದಂತೆ ಒಂದೊಂದೇ ತಿರುವು ಪಡೆಯುತ್ತಾ ವೇಗವಾಗಿ ಸಾಗುತ್ತದೆ ಎಂಬುದೇ ಸಿನಿಮಾದ ಪ್ಲಸ್ ಪಾಯಿಂಟ್.
ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುವ ಶಾರುಖ್ ಖಾನ್, ಸಿನಿಮಾದ ಉದ್ದಕ್ಕೂ ವಿವಿಧ ವೇಷಗಳಲ್ಲಿ ಟ್ವಿಸ್ಟ್ ಗಳ ಮೇಲೆ ಟ್ವಿಸ್ಟ್ ನೀಡಿ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸುತ್ತಾರೆ . ಚಿತ್ರವಿಡೀ ಶಾರುಖ್ ಖಾನ್ ಆವರಿಸಿದ್ದರೂ ವಿಜಯ್ ಸೇತುಪತಿ, ನಯನ್ ತಾರಾ, ದೀಪಿಕಾ ಪಡುಕೋಣೆ, ಸನ್ಯಾ ಮಲ್ಹೋತ್ರ, ಪ್ರಿಯಾಮಣಿ, ಸುನಿಲ್ ಗ್ರೋವರ್ , ರಿದ್ಧಿ ದೋಗ್ರ, ಪ್ರಿಯದರ್ಶಿನಿ , ಅಮೃತಾ ಅಯ್ಯರ್, ಲೆಹರ್ ಖಾನ್, ಸಂಜೀತಾ ಭಟ್ಟಾಚಾರ್ಯ, ಜಾಫರ್ ಸಾದಿಕ್, ಬೆನೆಡಿಕ್ಟ್ ಗ್ಯಾರೆಟ್ ಸೇರಿದಂತೆ ಇನ್ನಿತರರಿಗೂ ಒಳ್ಳೆಯ ಪಾತ್ರಗಳ ಮೂಲಕ ಮಿಂಚಲು ಅವಕಾಶ ನೀಡಲಾಗಿದೆ. ಚಿತ್ರ ನೋಡಿದ ಮೇಲೆ ವಿಜಯ್ ಸೇತುಪತಿ ಪಾತ್ರ ಇನ್ನಷ್ಟು ಖಡಕ್ ಆಗಬಹುದಿತ್ತು ಎಂದು ನಿಮಗೆ ಅನಿಸಿದರೆ ತಪ್ಪಲ್ಲ. ಅತಿಥಿ ಪಾತ್ರಕ್ಕೆ ಸಂಜಯ್ ದತ್ ಜೀವ ತುಂಬಿದ್ದಾರೆ. ಸಿನಿಮಾದಲ್ಲಿ ಮಹಿಳಾ ಪಾತ್ರಗಳೇ ಹೆಚ್ಚಾಗಿದ್ದು, ಬಹುತೇಕ ಎಲ್ಲರೂ ಮಿಂಚಿದ್ದಾರೆ.
ಧರ್ಮ, ಪಾಕಿಸ್ತಾನ, ಹಿಂದೂ ಮುಸ್ಲಿಂ ಈ ರೀತಿಯ ಥೀಮ್ ನ ಚಿತ್ರಗಳೇ ಇತ್ತೀಚಿಗೆ ಬಾಲಿವುಡ್ ನಲ್ಲಿ ಸೂಪರ್ ಹಿಟ್ ಆಗಿವೆ. ಅದನ್ನು ಹೊರತುಪಡಿಸಿದರೆ ಗೆದ್ದಿರುವುದು ಯಾವುದೇ ಗಂಭೀರ ಕತೆ ಇಲ್ಲದ ಪಠಾಣ್ ನಂತಹ ಚಿತ್ರ. ಜವಾನ್ ಗೆ ಸವಾಲು ಇರೋದೇ ಇಲ್ಲಿ. ಈ ಚಿತ್ರ ಎತ್ತಿರುವ ಪ್ರಶ್ನೆಗಳನ್ನು ನಮ್ಮ ವೀಕ್ಷಕರು ಈಗ ಸ್ವೀಕರಿಸುತ್ತಾರಾ ? ಅಥವಾ ಈಗಿನ ಜನರ ಮೂಡ್ ಗೆ ವ್ಯತಿರಿಕ್ತ ಕತೆ ಇರೋದೇ ಜವಾನ್ ಗೆ ಸಮಸ್ಯೆ ಆಗಬಹುದಾ ?
ಶಾರುಖ್ ಮೋಡಿ, ಅಟ್ಲಿ ನಿರ್ದೇಶನ, ಮೈ ನವಿರೇಳಿಸುವ ಆಕ್ಷನ್ ಇವೆಲ್ಲವೂ ಸೇರಿ ಎಲ್ಲ ಸವಾಲುಗಳನ್ನು ಮೆಟ್ಟಿ ನಿಂತು ಸೂಪರ್ ಡೂಪರ್ ಹಿಟ್ ಆಗಲಿದೆಯೇ ಜವಾನ್ ? ಕಾದು ನೋಡೋಣ.
ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ಹಾಗು ಗೌರಿ ಖಾನ್ ನಿರ್ಮಾಣದ ಜವಾನ್ ಗೆ ಅಟ್ಲಿಯ ಬರವಣಿಗೆ ಹಾಗು ಆಕ್ಷನ್ ಕಟ್ ಇದೆ, ಅನಿರುದ್ದ್ ರವಿಚಂದ್ರನ್ ಅವರ ಹಿನ್ನೆಲೆ ಸಂಗೀತ ಸಿನಿಮಾದ ಪ್ರಮುಖ ಆಕರ್ಷಣೆಯಾಗಿದ್ದರೂ ಜೈಲರ್ ಹಾಗು ವಿಕ್ರಮ್ ನಷ್ಟು ಸದ್ದು ಇಲ್ಲಿ ಮಾಡಿಲ್ಲ. ಜಿಕೆ ವಿಷ್ಣು ಛಾಯಾಗ್ರಹಣ, ಆಂಟನಿ ಎಂ ರುಬೆನ್ ಅವರ ಸಂಕಲನ ಪ್ರೇಕ್ಷಕರಿಗೆ ಖುಷಿ ಕೊಡಲಿದೆ. ಚಿತ್ರದಲ್ಲಿ ಮಾಸ್ ಹಾಗು ಥ್ರಿಲ್ಲಿಂಗ್ ಪ್ರೇಮಿಗಳಿಗೆ ಬೇಕಾದಷ್ಟು ಕಂಟೆಂಟ್ ಗಳಿವೆ. ಎರಡು ಹಾಡುಗಳಿದ್ದು ಚಿತ್ರ ನೋಡಿದ ಬಳಿಕ ನೆನಪಿನಲ್ಲಿ ಉಳಿಯುವಷ್ಟು ಪ್ರಭಾವ ಬೀರಿಲ್ಲ. ಒಂದು ಬಾರಿ ಎಲ್ಲಾ ವಯೋಮಾನದವರೂ ನೋಡಬಹುದಾದ ಸಿನಿಮಾ. ಈ ವಾರಾಂತ್ಯ 'ಜವಾನ್' ನೋಡಿದರೆ ಸಮಯ ವ್ಯರ್ಥವಾಗದು ಎಂಬುವುದು ಅಭಿಮಾನಿಗಳ ಅಭಿಪ್ರಾಯ. ಆದರೆ ಟಿಕೆಟ್ ಈಗಲೇ ಬುಕ್ ಮಾಡಿಲ್ಲದಿದ್ದರೆ ವಾರಾಂತ್ಯಕ್ಕೆ ಸಿಗೋದು ಕಷ್ಟ.