×
Ad

ಶುದ್ಧ ಪ್ರತಿಜ್ಞೆಯ ನಡುವೆಯೂ ಪ್ರಶಾಂತ್ ಕಿಶೋರ್ ಆಯ್ಕೆಯ ನಾಲ್ವರ ಪೈಕಿ ಮೂವರು ಕಳಂಕಿತರು!

Update: 2024-10-31 08:14 IST

PC: PTI

ಪಾಟ್ನಾ: ರಾಜಕೀಯದಲ್ಲಿ ಶುದ್ಧ ಇಮೇಜ್ ಇರುವವರಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಘೋಷಣೆ ಮಾಡಿದ್ದರೂ, ಇದಕ್ಕೆ ವಿರುದ್ಧವಾಗಿ ರಾಜ್ಯದ ನಾಲ್ಕು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗಳಿಗೆ ಅವರ ಪಕ್ಷ ಘೋಷಿಸಿದ ಅಭ್ಯರ್ಥಿಗಳ ಪೈಕಿ ಮೂವರು ಗಂಭೀರ ಅಪರಾಧ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಅಪಹರಣ, ಕೊಲೆ ಯತ್ನ, ಸುಲಿಗೆ, ಕಳ್ಳತನ, ಹಲ್ಲೆ ಮತ್ತಿತರ ಗಂಭೀರ ಪ್ರಕರಣಗಳು ಇವೆ ಎನ್ನುವುದು ತಿಳಿದು ಬಂದಿದೆ. ಜನ ಸುರಾಜ್ ಪಕ್ಷದ ಟಿಕೆಟ್ ನಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್ ನಿಂದ ಈ ಅಂಶ ಬಹಿರಂಗವಾಗಿದೆ.

ರಾಜ್ಯದ ಬೇಳಗಂಜ್, ಇಮಾಮ್ ಗಂಜ್, ರಾಮಗಢ ಮತ್ತು ತರಾರಿ ಹೀಗೆ ಎಲ್ಲ ನಾಲ್ಕು ಸ್ಥಾನಗಳಲ್ಲೂ ಜನ ಸುರಾಜ್ ಪಕ್ಷ ಸ್ಪರ್ಧಿಸುತ್ತಿದೆ. ಜನರಿಗೆ ಅಚ್ಚರಿಯಾಗುವ ವಿಚಾರವೆಂದರೆ ಹೊಸದಾಗಿ ಉದಯವಾಗಿರುವ ಪಕ್ಷದ ಶೇಕಡ 75ರಷ್ಟು ಅಭ್ಯರ್ಥಿಗಳು ಕಳಂಕಿತರು ಎಂದು ರಾಜಕೀಯ ಪಂಡಿತರು ಹೇಳುತ್ತಾರೆ.

ಇವರ ಪೈಕಿ ಪಕ್ಷದ ಇಮಾಮ್ ಗಂಜ್ ಅಭ್ಯರ್ಥಿ ಜಿತೇಂದ್ರ ಪಾಸ್ವಾನ್, ಅಪಹರಣ, ವಂಚನೆ, ಕಳ್ಳತನ, ಹಲ್ಲೆ ಮತ್ತಿತರ ಗಂಭೀರ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಎಂದು ಆಯೋಗಕ್ಕೆ ಸಲ್ಲಿಸಿರುವ ಸ್ವಯಂ ದೃಢೀಕೃತ ಅಫಿಡವಿಟ್ ನಲ್ಲಿ ಹೇಳಿದ್ದಾರೆ. ಅಂತೆಯೇ ಬೇಳಗಂಜ್ ಅಭ್ಯರ್ಥಿ ಮೊಹ್ಮದ್ ಅಮ್ಜದ್ ಕೂಡಾ ತಮ್ಮ ವಿರುದ್ಧದ ಅಪರಾಧ ಪ್ರಕರಣಗಳನ್ನು ಉಲ್ಲೇಖಿಸಿದ್ದಾರೆ.

"ನಮ್ಮ ಎಲ್ಲ ಅಭ್ಯರ್ಥಿಗಳು ಸ್ವಚ್ಛ ಇಮೇಜ್ ಹೊಂದಿರುವವರು. ಅವರ ವಿರುದ್ಧದ ಪ್ರಕರಣಗಳು ಅವರ ಘನತೆಗೆ ಧಕ್ಕೆ ತರುವ ಉದ್ದೇಶದಿಂದ ದಾಖಲಿಸಲ್ಪಟ್ಟವು" ಎಂದು ಪಕ್ಷದ ರಾಷ್ಟ್ರೀಯ ವಕ್ತಾರ ಸದಾಫ್ ಇಕ್ಬಾಲ್ ಪ್ರತಿಪಾದಿಸಿದ್ದಾರೆ. ಅವರ ವಿರುದ್ಧದ ಪ್ರಕರಣಗಳು ಇವೆ ಎಂದು ಅವರು ಬಹಿರಂಗಪಡಿಸಿದ್ದಾರೆ ಎಂದರೆ, ಅವರು ಸತ್ಯಾಂಶವನ್ನು ಮುಚ್ಚಿಟ್ಟಿಲ್ಲ ಎಂಬ ಅರ್ಥ ಎಂದು ವಿಶ್ಲೇಷಿಸಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News