ಪಶ್ಚಿಮ ಬಂಗಾಳದಿಂದ ರಾಜ್ಯಸಭೆಗೆ ಹಿರಿಯ ಪತ್ರಕರ್ತೆ ಸಾಗರಿಕಾ ಘೋಷ್ ನಾಮನಿರ್ದೇಶನ ಮಾಡಿದ ಟಿಎಂಸಿ
ಸಾಗರಿಕಾ ಘೋಷ್ | Photo : X
ಕೋಲ್ಕತಾ : ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಮುಂಬರುವ ರಾಜ್ಯಸಭಾ ಚುನಾವಣೆಗೆ ನಾಲ್ವರು ಅಭ್ಯರ್ಥಿಗಳನ್ನು ಭಾನುವಾರ ಪ್ರಕಟಿಸಿದೆ. ಹಿರಿಯ ಪತ್ರಕರ್ತೆ ಸಾಗರಿಕಾ ಘೋಷ್, ಸುಸ್ಮಿತಾ ದೇವ್, ಎಂಡಿ ನಾದಿಮುಲ್ ಹಕ್ ಮತ್ತು ಮಮತಾ ಬಾಲಾ ಠಾಕೂರ್ ಅವರನ್ನು ಸಂಸತ್ತಿನ ಮೇಲ್ಮನೆಯಲ್ಲಿ ಪ್ರತಿನಿಧಿಸಲು ಪಕ್ಷವು ಆಯ್ಕೆ ಮಾಡಿದೆ ಎಂದು freepressjournal ವರದಿ ಮಾಡಿದೆ.
ಇದು ಸಾಗರಿಕಾ ಘೋಷ್ ರಾಜಕೀಯ ಪ್ರವೇಶವನ್ನು ಸೂಚಿಸುತ್ತದೆ. ಘೋಷ್ ಪರ್ತಕರ್ತೆಯಾಗಿ, ಅಂಕಣಕಾರರಾಗಿ ಮೋದಿ ಸರ್ಕಾರ ಮತ್ತು ಅದರ ನೀತಿಗಳ ವಿಮರ್ಶಕರಾಗಿದ್ದಾರೆ.
ತೃಣಮೂಲ ಕಾಂಗ್ರೆಸ್, ರವಿವಾರ x ಪೋಸ್ಟ್ ನಲ್ಲಿ, "ಮುಂಬರುವ ರಾಜ್ಯಸಭಾ ಚುನಾವಣೆಗೆ @sagarikaghose, @SushmitaDevAITC, @MdNadimulHaque6 ಮತ್ತು ಮಮತಾ ಬಾಲಾ ಠಾಕೂರ್ ಅವರನ್ನು ಅಭ್ಯರ್ಥಿಗಳಾಗಿ ಘೋಷಿಸಲು ನಮಗೆ ಸಂತೋಷವಾಗಿದೆ. ನಾವು ಅವರಿಗೆ ನಮ್ಮ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇವೆ. ಪ್ರತಿ ಭಾರತೀಯರ ಹಕ್ಕುಗಳಿಗಾಗಿ ತೃಣಮೂಲದ ಅದಮ್ಯ ಮನೋಭಾವ ಮತ್ತು ಪ್ರತಿಪಾದನೆಯ ನಿರಂತರ ಪರಂಪರೆಯನ್ನು ಎತ್ತಿಹಿಡಿಯಲು ಅವರು ಕೆಲಸ ಮಾಡುತ್ತಾರೆ ಎಂದು ಭಾವಿಸುತ್ತೇವೆ" ಎಂದು ತಿಳಿಸಿದೆ.
ದಿ ಟೈಮ್ಸ್ ಆಫ್ ಇಂಡಿಯಾ, ಔಟ್‌ಲುಕ್, ದಿ ಇಂಡಿಯನ್ ಎಕ್ಸ್‌ಪ್ರೆಸ್ ಮತ್ತು ಸಿಎನ್‌ಎನ್-ಐಬಿಎನ್‌ನಂತಹ ಅನೇಕ ಸುದ್ದಿ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿರುವ ಘೋಷ್ ಹಲವು ವರ್ಷಗಳಿಂದ ಭಾರತೀಯ ಮಾಧ್ಯಮದಲ್ಲಿ ಪ್ರಮುಖ ವ್ಯಕ್ತಿಯಾಗಿದ್ದಾರೆ. 30 ವರ್ಷಗಳನ್ನು ಮೀರಿದ ವೃತ್ತಿಜೀವನದೊಂದಿಗೆ, ಅವರು ಪತ್ರಿಕೋದ್ಯಮದಲ್ಲಿ ವ್ಯಾಪಕವಾದ ಪರಿಣತಿಗೆ ಹೆಸರುವಾಸಿಯಾಗಿದ್ದಾರೆ. ಅವರು ಖ್ಯಾತ ಪತ್ರಕರ್ತ ಮತ್ತು ಲೇಖಕ ರಾಜದೀಪ್ ಸರ್ದೇಸಾಯಿ ಅವರ ಪತ್ನಿ.