‘ಜನ ಗಣ ಮನ’ ಕುರಿತು ಬಿಜೆಪಿ ಸಂಸದ ಕಾಗೇರಿ ಹೇಳಿಕೆ ವಿರುದ್ಧ ಟಿಎಂಸಿಯಿಂದ ಪ್ರತಿಭಟನೆ
ವಿಶ್ವೇಶ್ವರ ಹೆಗಡೆ ಕಾಗೇರಿ
ಕೋಲ್ಕತಾ,ನ.8: ಕರ್ನಾಟಕದ ಬಿಜೆಪಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ರವೀಂದ್ರನಾಥ ಟಾಗೋರ್ ಅವರು ರಚಿಸಿರುವ ರಾಷ್ಟ್ರಗೀತೆ ‘ಜನ ಗಣ ಮನ’ವನ್ನು ಅವಮಾನಿಸಿದ್ದಾರೆಂದು ಆರೋಪಿಸಿ ಟಿಎಂಸಿ ಶನಿವಾರ ಇಲ್ಲಿ ಟಾಗೋರ್ ಕುಟುಂಬದ ಪೂರ್ವಜರ ನಿವಾಸ ಜೋರಾಸಂಕೊ ಠಾಕುರ್ಬರಿಯಲ್ಲಿ ಪ್ರತಿಭಟನೆಯನ್ನು ನಡೆಸಿತು.
ರಾಷ್ಟ್ರಿಯ ಗೀತೆ ‘ವಂದೇ ಮಾತರಂ’ 150 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಕರ್ನಾಟಕದ ಹೊನ್ನಾವರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಕಾಗೇರಿಯವರು ರಾಷ್ಟ್ರಗೀತೆಯನ್ನು ಬ್ರಿಟಿಷ್ ದೊರೆಯ ಸ್ವಾಗತಕ್ಕಾಗಿ ರಚಿಸಲಾಗಿತ್ತು ಎಂದು ಹೇಳಿದ ಬಳಿಕ ವಿವಾದ ಭುಗಿಲೆದ್ದಿದೆ.
ಟಾಗೋರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಹಿರಿಯ ಟಿಎಂಸಿ ಸಚಿವೆ ಶಶಿ ಪಾಂಜಾ ಅವರು, ‘ಬಂಗಾಳದ ಬುದ್ಧಿಜೀವಿಗಳಿಗೆ ಅಪಮಾನದಿಂದ ನಮಗೆ ತೀವ್ರ ನೋವಾಗಿದೆ. ಬಿಜೆಪಿಯಿಂದ ಇಂತಹ ಕೃತ್ಯಗಳನ್ನು ನಾವು ಸಹಿಸುವುದಿಲ್ಲ’ ಎಂದು ಹೇಳಿದರು.
‘ಜನ ಗಣ ಮನ’ವು ರಾಷ್ಟ್ರಗೀತೆಯಾಗಿ ಮುಂದುವರಿಯುತ್ತದೆಯೇ ಎಂದು ಬಿಜೆಪಿ ಪ್ರಶ್ನಿಸುತ್ತಿದೆ ಎಂದು ಹೇಳಿದ ಅವರು, ಸಂಸದರ ವಿರುದ್ಧ ಬಿಜೆಪಿ ಯಾವುದೇ ಕ್ರಮವನ್ನು ಕೈಗೊಂಡಿಲ್ಲ, ಅವರು ಹೇಳಿದ್ದನ್ನು ಬಿಜೆಪಿ ಅನುಮೋದಿಸುತ್ತದೆ ಎನ್ನುವುದನ್ನು ಇದು ಸೂಚಿಸಿದೆ ಎಂದರು.
ಜನರನ್ನು ದೇಶಭಕ್ತರು ಅಥವಾ ದೇಶದ್ರೋಹಿಗಳು ಎಂದು ಬೆಟ್ಟು ಮಾಡುವವರೇ ಈ ಹೇಳಿಕೆಯು ಯಾವ ವರ್ಗಕ್ಕೆ ಸೇರುತ್ತದೆ ಎನ್ನುವುದನ್ನು ನಿರ್ಧರಿಸಬೇಕು ಎಂದು ಹೇಳಿದ ಪಾಂಜಾ, ಬಿಜೆಪಿಯು ಬಂಕಿಮಚಂದ್ರ ಚಟ್ಟೋಪಾಧ್ಯಾಯರ ‘ವಂದೇ ಮಾತರಂ’ ಮತ್ತು ಟಾಗೋರರ ‘ಜನ ಮನ ಗಣ’ ಕುರಿತು ಒಡಕನ್ನುಂಟು ಮಾಡಲು ಪ್ರಯತ್ನಿಸುತ್ತಿದೆ. ಎರಡೂ ದೇಶಕ್ಕಾಗಿ ರಚಿಸಲಾದ ಗೀತೆಗಳಾಗಿವೆ, ಅವುಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ, ಅವೆರಡೂ ಒಂದು ಪರಂಪರೆಯನ್ನು ಸೃಷ್ಟಿಸಿವೆ ಎಂದರು.
ಇಡೀ ದೇಶವು ಬಂಗಾಳದ ಬಗ್ಗೆ ಹೆಮ್ಮೆಯನ್ನು ಪಡುತ್ತಿದೆ. ಆದರೆ ಒಂದು ರಾಜಕೀಯ ಪಕ್ಷ ಮಾತ್ರ ರಾಜ್ಯವನ್ನು ಗುರಿಯಾಗಿಸಿಕೊಂಡಿದೆ ಎಂದ ಅವರು, ನಿಮಗೆ(ಬಿಜೆಪಿ) ಬಂಗಾಳದ ಬಗ್ಗೆ ಏಕೆ ಇಷ್ಟೊಂದು ಹೇವರಿಕೆ ಎಂದು ಪ್ರಶ್ನಿಸಿದರು.
ಪಶ್ಚಿಮ ಬಂಗಾಳವನ್ನು ಮಿನಿ-ಇಂಡಿಯಾ ಎಂದು ಪರಿಗಣಿಸಲಾಗಿದ್ದು, ದೇಶಾದ್ಯಂತದ ಜನರು ತಲೆಮಾರುಗಳಿಂದಲೂ ಇಲ್ಲಿ ವಾಸವಾಗಿದ್ದಾರೆ ಎಂದರು.