ಸುದೀರ್ಘ ಕಾಲ ಎಟಿಪಿ ರ್ಯಾಂಕಿಂಗ್ ನಲ್ಲಿ ಅಗ್ರ ಸ್ಥಾನ: ಫೆಡರರ್ ದಾಖಲೆ ಮುರಿದ ಜೊಕೊವಿಕ್
ನೊವಾಕ್ ಜೊಕೊವಿಕ್ , ರೋಜರ್ ಫೆಡರರ್
ಹೊಸದಿಲ್ಲಿ: ಸರ್ಬಿಯದ 24 ಗ್ರ್ಯಾನ್ಸ್ಲಾಮ್ ಒಡೆಯ ನೊವಾಕ್ ಜೊಕೊವಿಕ್ 419ನೇ ವಾರ ವಿಶ್ವ ಟೆನಿಸ್ ರ‍್ಯಾಂಕಿಂಗ ನಲ್ಲಿ ಅಗ್ರ ಸ್ಥಾನವನ್ನು ಉಳಿಸಿಕೊಳ್ಳುವ ಮೂಲಕ ಟೆನಿಸ್ ಚರಿತ್ರೆಯಲ್ಲಿ ತನ್ನ ಹೆಸರನ್ನು ಅಚ್ಚಾಗಿಸಿದ್ದಾರೆ.
ಸಾರ್ವಕಾಲಿಕ ಶ್ರೇಷ್ಠ ಆಟಗಾರರ ಪೈಕಿ ಒಬ್ಬರಾಗಿರುವ ಜೊಕೊವಿಕ್ ರವಿವಾರದ ವಿಶ್ವದ ಹಿರಿಯ ನಂ.1 ಆಟಗಾರ ಪ್ರಶಸ್ತಿ ಪಡೆಯುವ ಮೂಲಕ 36ನೇ ವಯಸ್ಸಿನಲ್ಲಿ ಈ ಸಾಧನೆಗೈದಿರುವ ಸ್ವಿಸ್ ಟೆನಿಸ್ ದಂತಕತೆ ರೋಜರ್ ಫೆಡರರ್ ದಾಖಲೆಯನ್ನು ಮುರಿದರು.
ಜೊಕೊವಿಕ್ 2017ರ ಮೇ 22ರಂದು 30ನೇ ವಯಸ್ಸಿಗೆ ಕಾಲಿಟ್ಟಾಗ 12 ಟೂರ್ ಲೆವೆಲ್ ಪ್ರಶಸ್ತಿಗಳು, 12 ಗ್ರ್ಯಾನ್ಸ್ಲಾಮ್ ಟ್ರೋಫಿಗಳು, 10 ಎಟಿಪಿ ಮಾಸ್ಟರ್ಸ್-1000 ಪ್ರಶಸ್ತಿಗಳು ಹಾಗೂ ಎರಡು ಎಟಿಪಿ ಫೈನಲ್ಸ್ ಕಿರೀಟಗಳನ್ನು ಧರಿಸಿದ್ದರು.
ಜೊಕೊವಿಕ್ ತನ್ನ 24ನೇ ವಯಸ್ಸಿನಲ್ಲಿ ಮೊದಲ ಬಾರಿ ವಿಶ್ವದ ನಂ.1 ಆಟಗಾರನಾಗಿದ್ದರು. ಜೊಕೊವಿಕ್ ಅವರ ಪ್ರಮುಖ ಸ್ಪರ್ಧಿಗಳಾಗಿರುವ ಫೆಡರರ್ ಹಾಗೂ ರಫೆಲ್ ನಡಾಲ್ ತಮ್ಮ 22ನೇ ವಯಸ್ಸಿನಲ್ಲಿ ಮೊದಲ ಬಾರಿ ನಂ.1 ಸ್ಥಾನಕ್ಕೇರಿದ್ದರು.
ಇತ್ತೀಚೆಗೆ ಜೊಕೊವಿಕ್ ಅವರ ಪ್ರತಿಸ್ಪರ್ಧಿಯಾಗಿರುವ ಕಾರ್ಲೊಸ್ ಅಲ್ಕರಾಝ್ 2022ರ ಸೆಪ್ಟಂಬರ್ನಲ್ಲಿ ತನ್ನ 19ನೇ ವಯಸ್ಸಿನಲ್ಲಿ ಅಗ್ರ ಸ್ಥಾನಕ್ಕೇರಿದ್ದರು. ಎಟಿಪಿ ರ್ಯಾಂಕಿಂಗ್ ನಲ್ಲಿ ನಂ.1 ಸ್ಥಾನಕ್ಕೇರಿದ ಕಿರಿಯ ವಯಸ್ಸಿನ ಆಟಗಾರ ಎನಿಸಿಕೊಂಡಿದ್ದರು.
ಎಟಿಪಿ ಟೂರ್ನ ಯುವ ಪೀಳಿಗೆಯ ಸ್ಟಾರ್ಗಳಿಂದ ಕಠಿಣ ಸ್ಪರ್ಧೆ ಎದುರಿಸುತ್ತಿರುವ ಹೊರತಾಗಿಯೂ ಜೊಕೊವಿಕ್ ರ್ಯಾಂಕಿಂಗ್ ನಲ್ಲಿ ತನ್ನ ಪ್ರಾಬಲ್ಯ ಮುಂದುವರಿಸಿದ್ದಾರೆ.
ಜೊಕೊವಿಕ್ ಸೋಮವಾರ 419ನೇ ವಾರ ವಿಶ್ವದ ನಂ.1 ಸ್ಥಾನದಲ್ಲಿ ಮುಂದುವರಿದಿದ್ದು, ರ್ಯಾಂಕಿಂಗ್ ನಲ್ಲಿ ತನ್ನ ಪ್ರತಿಸ್ಪರ್ಧಿ ಫೆಡರರ್(310 ವಾರ) ಅವರಿಗಿಂತ 109 ವಾರ ಮುಂದಿದ್ದಾರೆ.