×
Ad

ಪಾಕಿಸ್ತಾನ: ರೈಲು ಅಪಹರಣ ಪ್ರಕರಣ; 13 ಪ್ರತ್ಯೇಕತಾವಾದಿಗಳ ಹತ್ಯೆ, 80 ಒತ್ತೆಯಾಳುಗಳ ಬಿಡುಗಡೆ

Update: 2025-03-12 08:01 IST

PC: x.com/kumar_rish16022

ಪೇಶಾವರ: ಕ್ವೆಟ್ಟಾದಿಂದ ಪೇಶಾವರಕ್ಕೆ ತೆರಳುತ್ತಿದ್ದ ಜಾಫರ್ ಎಕ್ಸ್ ಪ್ರೆಸ್ ರೈಲನ್ನು ವಾಯವ್ಯ ಬಲೂಚಿಸ್ತಾನದಲ್ಲಿ ಅಪಹರಿಸಿದ ಘಟನೆಯ ಬೆನ್ನಲ್ಲೇ ಭದ್ರತಾ ಪಡೆ ಪ್ರತಿದಾಳಿ ನಡೆಸಿ 13 ಮಂದಿ ಪ್ರತ್ಯೇಕತಾವಾದಿಗಳನ್ನು ಹತ್ಯೆ ಮಾಡಿ 80 ಮಂದಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವಲ್ಲಿ ಯಶಸ್ವಿಯಾಗಿದೆ.

ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್ಎ) ಈ ದಾಳಿ ನಡೆಸಿದ್ದು, ಘಟನೆಯಲ್ಲಿ ರೈಲು ಚಾಲಕ ಗಾಯಗೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿ 100ಕ್ಕೂ ಹೆಚ್ಚು ಮಂದಿಯನ್ನು ಒತ್ತೆಯಾಳುಗಳಾಗಿ ಇರಿಸಿಕೊಳ್ಳಲಾಗಿತ್ತು. ಬಲೂಚಿಸ್ತಾನದಲ್ಲಿ ಹೆಚ್ಚಿನ ಸ್ವಾಯತ್ತತೆ ಮತ್ತು ಪ್ರಾಂತ್ಯದ ಸಂಪನ್ಮೂಲಗಳ ಮೇಲೆ ಹೆಚ್ಚಿನ ನಿಯಂತ್ರಣಕ್ಕೆ ಆಗ್ರಹಿಸಿ ಬಿಎಲ್ಎ ಪ್ರತ್ಯೇಕತಾವಾದಿಗಳು ನಡೆಸುತ್ತಿರುವ ಕೃತ್ಯಗಳು ಹೆಚ್ಚುತ್ತಿರುವುದಕ್ಕೆ ಈ ಘಟನೆ ನಿದರ್ಶನವಾಗಿದೆ.

ಜಾಫರ್ ಎಕ್ಸ್ ಪ್ರೆಸ್ ನ ಒಂಬತ್ತು ಬೋಗಿಗಳಲ್ಲಿ 400ಕ್ಕೂ ಹೆಚ್ಚು ಪ್ರಯಾಣಿಕರು ಇದ್ದರು. ಹಲವು ಸುರಂಗಗಳನ್ನು ಹೊಂದಿದ್ದ ಪರ್ವತ ಶ್ರೇಣಿಯಲ್ಲಿ ರೈಲು ಹೋಗುತ್ತಿದ್ದ ವೇಳೆ  ದಾಳಿ ನಡೆದಿದೆ. ದಾಳಿಕೋರರು ಗುಂಡು ಹಾರಿಸಿದ್ದಲ್ಲದೇ 8ನೇ ಸಂಖ್ಯೆಯ ಸುರಂಗದಲ್ಲಿ ರೈಲ್ವೆ ಹಳಿ ಸ್ಫೋಟಿಸುವ ಪ್ರಯತ್ನ ಮಾಡಿದರು. ಇದರಿಂದ ರೈಲು ಹಳಿ ತಪ್ಪಿತು ಎನ್ನಲಾಗಿದೆ. ರೈಲಿನ ಭದ್ರತಾ ಸಿಬ್ಬಂದಿ ಮಿಂಚಿನ ಪ್ರತಿದಾಳಿ ನಡೆಸಿದರೂ, ಸುರಂಗದ ನಡುವೆ ದಾಳಿಕೋರರು ರೈಲನ್ನು ವಶಪಡಿಸಿಕೊಂಡರು.

ಕಠಿಣ ಹಾಗೂ ದುರ್ಗಮ ಮಾರ್ಗವಾಗಿದ್ದರಿಂದ ಹೆಚ್ಚಿನ ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಲು ವಿಳಂಬವಾಯಿತು. ಮಧ್ಯರಾತ್ರಿ ಬಳಿಕ ಭದ್ರತಾ ಸಿಬ್ಬಂದಿ ಉಗ್ರರ ಜತೆ ಗುಂಡಿನ ಚಕಮಕಿ ನಡೆಸಿ 13 ಮಂದಿಯನ್ನು ಹತ್ಯೆಗೈದು 80 ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಿದ್ದಾರೆ. ಬಿಡುಗಡೆಗೊಂಡವರಲ್ಲಿ 43 ಪುರುಷರು, 26 ಮಹಿಳೆಯರು ಮತ್ತು 11 ಮಕ್ಕಳು ಸೇರಿದ್ದಾರೆ. ಉಳಿಕೆ ಪ್ರಯಾಣಿಕರ ರಕ್ಷಣೆಗೆ ಪ್ರಯತ್ನ ಮುಂದುವರಿದಿದೆ ಎಂದು ಭದ್ರತಾ ಪಡೆ ಮೂಲಗಳು ಹೇಳಿವೆ.

ಈ ಪ್ರತಿದಾಳಿಯಲ್ಲಿ ಒಬ್ಬ ಸೈನಿಕ, ಪೊಲೀಸ್ ಅಧಿಕಾರಿ ಹಾಗೂ ರೈಲು ಚಾಲಕ ಮೃತಪಟ್ಟಿದ್ದಾರೆ ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News