ವಿದೇಶಕ್ಕೆ ತೆರಳಲಿರುವ ʼಆಪರೇಷನ್ ಸಿಂಧೂರ್ ನಿಯೋಗʼದ ಆಹ್ವಾನವನ್ನು ನಿರಾಕರಿಸಿದ ಟಿಎಂಸಿ ಸಂಸದ ಯೂಸುಫ್ ಪಠಾಣ್
ಯೂಸುಫ್ ಪಠಾಣ್ (PTI)
ಹೊಸದಿಲ್ಲಿ: ವಿದೇಶಗಳಿಗೆ ತೆರಳಿ ಜಾಗತಿಕ ನಾಯಕರನ್ನು ಭೇಟಿ ಮಾಡಿ ಭಯೋತ್ಪಾದನೆಯನ್ನು ಎದುರಿಸುವ ಭಾರತದ ಭಾರತದ ದೃಢ ಸಂಕಲ್ಪವನ್ನು ಮನದಟ್ಟು ಮಾಡಲು ʼಆಪರೇಷನ್ ಸಿಂಧೂರ್ʼ ಸರ್ವಪಕ್ಷ ಸಂಸದೀಯ ನಿಯೋಗವೊಂದು ತೆರಳಲಿದೆ. ಈ ನಿಯೋಗದ ಭಾಗವಾಗಿರಲು ಸರ್ಕಾರದಿಂದ ಹೆಸರಿಸಲ್ಪಟ್ಟ ತೃಣಮೂಲ ಕಾಂಗ್ರೆಸ್ ಸಂಸದ ಯೂಸುಫ್ ಪಠಾಣ್, ಆಹ್ವಾನವನ್ನು ತಿರಸ್ಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ ಎಂದು indiatoday ವರದಿ ಮಾಡಿದೆ.
ಪಕ್ಷದ ಮೂಲಗಳ ಪ್ರಕಾರ, ಸರ್ಕಾರವು ತೃಣಮೂಲ ಕಾಂಗ್ರೆಸ್ ಅನ್ನು ಸಂಪರ್ಕಿಸದೆ ಯೂಸುಫ್ ಪಠಾಣ್ ಅವರ ಹೆಸರನ್ನು ಸೇರಿಸಿದೆ. ಈ ಕುರಿತು ಸರ್ಕಾರವು ಸಂಸದರನ್ನು ನೇರವಾಗಿ ಸಂಪರ್ಕಿಸಿತ್ತು. ಮಾಜಿ ಕ್ರಿಕೆಟಿಗ-ರಾಜಕಾರಣಿ ಅವರು ನಿಯೋಗದೊಂದಿಗೆ ತೆರೆಳಲಲು ತಾವು ಲಭ್ಯವಿರುವುದಿಲ್ಲ ಎಂದು ತಿಳಿಸಿದ್ದಾರೆ.
ವಿದೇಶಾಂಗ ನೀತಿಯು ಕೇಂದ್ರದ ಅಧಿಕಾರ ವ್ಯಾಪ್ತಿಗೆ ಬರುತ್ತದೆ. ಕೇಂದ್ರ ಸರ್ಕಾರವು ಅದರ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಎಂಬ ದೃಷ್ಟಿಕೋನವು ಮಮತಾ ಬ್ಯಾನರ್ಜಿ ಅವರ ಪಕ್ಷದ್ದು ಎಂದು ಮೂಲಗಳು ತಿಳಿಸಿವೆ.
"ರಾಷ್ಟ್ರವು ಎಲ್ಲಕ್ಕಿಂತ ಮಿಗಿಲು ಎಂದು ನಾವು ಎಂದು ನಾವು ಭಾವಿಸುತ್ತೇವೆ. ನಮ್ಮ ರಾಷ್ಟ್ರವನ್ನು ರಕ್ಷಿಸಲು ಅಗತ್ಯವಿರುವ ಯಾವುದೇ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರಕ್ಕೆ ನಮ್ಮ ಬೆಂಬಲವನ್ನು ನೀಡುತ್ತೇವೆ. ನಮ್ಮ ಸಶಸ್ತ್ರ ಪಡೆಗಳು ನಮ್ಮ ರಾಷ್ಟ್ರದ ಗರಿಮೆಯನ್ನು ಹೆಚ್ಚಿಸಿದೆ. ಅದಕ್ಕೆ ನಾವು ಅವರಿಗೆ ಶಾಶ್ವತವಾಗಿ ಋಣಿಯಾಗಿದ್ದೇವೆ. ವಿದೇಶಾಂಗ ನೀತಿಯು ಸಂಪೂರ್ಣವಾಗಿ ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿದೆ. ಆದ್ದರಿಂದ, ಕೇಂದ್ರ ಸರ್ಕಾರ ಮಾತ್ರ ನಮ್ಮ ವಿದೇಶಾಂಗ ನೀತಿಯನ್ನು ನಿರ್ಧರಿಸಲಿ ಮತ್ತು ಅದರ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳಲಿ" ಎಂದು ತೃಣಮೂಲ ನಾಯಕರೊಬ್ಬರು ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದರು.
ʼಆಪರೇಷನ್ ಸಿಂಧೂರ್ʼ ಹಿನ್ನೆಲೆಯಲ್ಲಿ ಭಯೋತ್ಪಾದನೆಯನ್ನು ಎದುರಿಸುವ ಭಾರತದ ಸಂಕಲ್ಪವನ್ನು ವ್ಯಕ್ತಪಡಿಸಲು ವಿಶ್ವ ರಾಜಧಾನಿಗಳಿಗೆ ಪ್ರಯಾಣಿಸುವ ಏಳು ನಿಯೋಗಗಳಲ್ಲಿ ಐವತ್ತೊಂದು ರಾಜಕೀಯ ನಾಯಕರು, ಸಂಸದರು ಮತ್ತು ಪಕ್ಷಾತೀತವಾಗಿ ಮಾಜಿ ಮಂತ್ರಿಗಳನ್ನು ಹೆಸರಿಸಲಾಗಿದೆ.
ಇಂಡೋನೇಷ್ಯಾ, ಮಲೇಷ್ಯಾ, ಕೊರಿಯಾ ಗಣರಾಜ್ಯ, ಜಪಾನ್ ಮತ್ತು ಸಿಂಗಾಪುರಕ್ಕೆ ಭೇಟಿ ನೀಡಲಿರುವ ಜೆಡಿಯು ಸಂಸದ ಸಂಜಯ್ ಕುಮಾರ್ ಝಾ ನೇತೃತ್ವದ ನಿಯೋಗದ ಸದಸ್ಯರಾಗಿ ಪಠಾಣ್ ಅವರನ್ನು ಆಯ್ಕೆ ಮಾಡಲಾಗಿದೆ. ನಿಯೋಗದ ಇತರ ಸದಸ್ಯರಲ್ಲಿ ಅಪರಾಜಿತಾ ಸಾರಂಗಿ, ಬ್ರಿಜ್ ಲಾಲ್, ಪ್ರದಾನ್ ಬರುವಾ ಮತ್ತು ಬಿಜೆಪಿಯಿಂದ ಹೇಮಾಂಗ್ ಜೋಶಿ ಸೇರಿದ್ದಾರೆ. ಸಿಪಿಐ(ಎಂ) ನಿಂದ ಜಾನ್ ಬ್ರಿಟ್ಟಾಸ್; ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್, ಮಾಜಿ ವರದಿಗಾರ ಮೋಹನ್ ಕುಮಾರ್ ಸೇರಿದ್ದಾರೆ.
ಮತ್ತೊಬ್ಬ ಟಿಎಂಸಿ ನಾಯಕ ಸುದೀಪ್ ಬಂಡೋಪಾಧ್ಯಾಯ ಅವರು ಈ ಹಿಂದೆ ನಿಯೋಗದ ಭಾಗವಾಗಿರುಲು ಆಹ್ವಾನಿಸಲಾಗಿತ್ತು ಎಂದು ಹೇಳಿದ್ದರು. ಆದರೆ ಆರೋಗ್ಯದ ಕಾರಣಗಳಿಂದ ನಿಯೋಗದೊಂದಿಗೆ ತೆರಳಲು ನಿರಾಕರಿಸಿದ್ದರು.