×
Ad

ದೆಹಲಿಯಲ್ಲಿ ತ್ರಿವಳಿ ಎಂಜಿನ್? ; ಮೂವರು ಎಂಸಿಡಿ ಸದಸ್ಯರು ಬಿಜೆಪಿ ತೆಕ್ಕೆಗೆ

Update: 2025-02-16 08:00 IST

PC: screengrab/ x.com/Indian_Analyzer

ಹೊಸದಿಲ್ಲಿ: ದೆಹಲಿ ಮಹಾನಗರ ಪಾಲಿಕೆಯ ಮೂವರು ಸದಸ್ಯರು ಆಮ್ ಆದ್ಮಿ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದು, ರಾಷ್ಟ್ರರಾಜಧಾನಿಯಲ್ಲಿ ತ್ರಿವಳಿ ಎಂಜಿನ್ ಆಡಳಿತ ವ್ಯವಸ್ಥೆ ರೂಪುಗೊಳ್ಳುವ ಸೂಚನೆಗಳು ದಟ್ಟವಾಗಿವೆ.

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಮೊನ್ನೆ ನಡೆದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ 48 ಸ್ಥಾನಗಳನ್ನು ಗೆದ್ದಿತ್ತು. 70 ಸದಸ್ಯ ಬಲದ ಸದನದಲ್ಲಿ ಆಮ್ ಆದ್ಮಿ ಪಕ್ಷ ಕೇವಲ 22 ಸದಸ್ಯರನ್ನು ಹೊಂದಿದೆ. ಇದೀಗ ಎಂಸಿಡಿಯಲ್ಲಿ ಮೂವರು ಪಾಲಿಕೆ ಸದಸ್ಯರು ಪಕ್ಷಾಂತರ ಮಾಡುವ ಮೂಲಕ ಬಿಜೆಪಿ ಬಲ 116ಕ್ಕೇರಿದೆ. 250 ಸದಸ್ಯ ಬಲದ ಪಾಲಿಕೆಯಲ್ಲಿ ಆಮ್ ಆದ್ಮಿ ಪಕ್ಷದ ಸದಸ್ಯರ ಸಂಖ್ಯೆ ಇದೀಗ 114ಕ್ಕೆ ಕುಸಿದಿದ್ದು, ಎಂಟು ಮಂದಿ ಕಾಂಗ್ರೆಸ್ ಸದಸ್ಯರಿದ್ದಾರೆ.

ಅನಿತಾ ಬಸೋಯಾ (ಆ್ಯಂಡ್ರೂಸ್ ಗಂಜ್), ನಿಖಿಲ್ ಛಪ್ರಾನಾ (ಹರಿನಗರ) ಮತ್ತು ಧರ್ಮವೀರ ಸಿಂಗ್ (ಆರ್.ಕೆ.ಪುರಂ) ಬಿಜೆಪಿ ಸೇರಿರುವ ಸದಸ್ಯರು. ನಗರದಲ್ಲಿ ಶೀಘ್ರವೇ ತ್ರಿವಳಿ ಎಂಜಿನ್ ಆಡಳಿತದ ಅನುಭವ ಜನತೆಗೆ ಸಿಗಲಿದೆ ಎಂದು ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್ ದೇವ್ ಭವಿಷ್ಯ ನುಡಿದಿದ್ದಾರೆ.

ಮೂರು ಪಕ್ಷಗಳ 22 ಮಂದಿ ಪಾಲಿಕೆ ಸದಸ್ಯರು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದು, 11 ಮಂದಿ ಗೆಲುವು ಸಾಧಿಸಿದ್ದಾರೆ. ಈ ಪೈಕಿ ಬಿಜೆಪಿಯ ಎಂಟು ಮಂದಿ ಹಾಗೂ ಆಮ್ ಆದ್ಮಿ ಪಕ್ಷದ ಮೂವರು ಸೇರಿದ್ದಾರೆ. ಇದೀಗ ಎಂಸಿಡಿಯಲ್ಲಿ 12 ಸ್ಥಾನಗಳು ತೆರವಾಗಿದ್ದು, ಇದರಲ್ಲಿ ಸಂಸದರಾಗಿ ಆಯ್ಕೆಯಾಗಿರುವ ಕಮಲ್ ಜೀತ್ ಸೆಹ್ರಾವತ್ ಅವರ ವಾರ್ಡ್ ಕೂಡಾ ಸೇರಿದೆ.

ಕಳೆದ ಜನವರಿ 28ರಂದು ಆಮ್ ಆದ್ಮಿ ಪಕ್ಷದ ಸದಸ್ಯ ರಾಮ ಚಂಡೇರ್ (ಶಹಾಬಾದ್ ಡೈರಿ) ಬಿಜೆಪಿಗೆ ಸೇರ್ಪಡೆಯಾಗಿದ್ದರು. ಇದೀಗ ಮತ್ತೆ ಮೂವರು ಬಿಜೆಪಿ ತೆಕ್ಕೆಗೆ ಬಂದಿರುವುದರಿಂದ ಮೇಯರ್ ಹುದ್ದೆಯನ್ನು ಗಿಟ್ಟಿಸಿಕೊಳ್ಳುವ ನಿಟ್ಟಿನಲ್ಲಿ ಪಕ್ಷ ಮತ್ತೊಂದು ಹೆಜ್ಜೆ ಮುಂದೆ ಹೋದಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News